ಎಷ್ಟೇ ನಾಟಕ ಮಾಡಿದ್ರೂ ನಡೆಯಲಿಲ್ಲ ಶೋಭಾ ಆಟ; ಸುದೀಪ್ ನಿರ್ಧಾರವೇ ಅಂತಿಮ

|

Updated on: Dec 02, 2024 | 10:41 PM

ನಟಿ ಶೋಭಾ ಶೆಟ್ಟಿ ಅವರು ಭಾನುವಾರದ (ಡಿ.1) ಸಂಚಿಕೆಯಲ್ಲಿ ಹಲವು ಬಗೆಯ ನಾಟಕ ಮಾಡಿದ್ದರು. ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಅವರು ಮಾಡಿದ ಡ್ರಾಮಾ ಒಂದೆರಡಲ್ಲ. ಆದರೆ ಆ ಯಾವ ಡ್ರಾಮಾಗೂ ದೊಡ್ಮನೆಯಲ್ಲಿ ಬೆಲೆ ಸಿಗಲಿಲ್ಲ. ಕಿಚ್ಚ ಸುದೀಪ್ ಅವರು ತೆಗೆದುಕೊಂಡ ನಿರ್ಧಾರವೇ ಅಂತಿಮ. ಕಡೆಗೂ ಶೋಭಾ ಶೆಟ್ಟಿ ಬಿಗ್ ಬಾಸ್​ ಆಟದಿಂದ ಔಟ್ ಆಗಿದ್ದಾರೆ.

ಎಷ್ಟೇ ನಾಟಕ ಮಾಡಿದ್ರೂ ನಡೆಯಲಿಲ್ಲ ಶೋಭಾ ಆಟ; ಸುದೀಪ್ ನಿರ್ಧಾರವೇ ಅಂತಿಮ
ಶೋಭಾ ಶೆಟ್ಟಿ
Follow us on

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನ ಭಾನುವಾರದ (ಡಿಸೆಂಬರ್​ 1) ಎಪಿಸೋಡ್​ನಲ್ಲಿ ದೊಡ್ಡ ಡ್ರಾಮಾ ನಡೆದಿತ್ತು. ಜನರು ಹಾಕಿದ ವೋಟ್​ನಿಂದ ಸೇವ್ ಆಗಿದ್ದ ಶೋಭಾ ಶೆಟ್ಟಿ ಅವರು ಅಳಲು ಆರಂಭಿಸಿದ್ದರು. ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಸುದೀಪ್ ಸಮಾಧಾನ ಮಾಡಿ, ಬುದ್ಧಿಮಾತು ಹೇಳಿದ ಬಳಿಕ ಮನಸ್ಸು ಬದಲಾಯಿಸಿದರು. ಆದರೆ ಕೊನೆಯಲ್ಲಿ ಇನ್ನೊಂದು ಡ್ರಾಮಾ ಆರಂಭಿಸಿದರು. ತಾವು ಹೊರಗೆ ಹೋಗಲೇಬೇಕು ಎಂದು ಶೋಭಾ ಶೆಟ್ಟಿ ಹಠ ಹಿಡಿದರು. ಆಗ ಸುದೀಪ್ ಕೋಪ ನೆತ್ತಿಗೇರಿತು.

ಭಾನುವಾರದ ಎಪಿಸೋಡ್​ ಮುಗಿಯುವಾಗ ಸುದೀಪ್ ಅವರು ಗರಂ ಆಗಿ ಮಾತನಾಡಿದ್ದರು. ‘ನೀವು ಈ ಮನೆಯಿಂದ ಕೂಡಲೇ ಹೊರಗೆ ಹೋಗಿ’ ಎಂದು ಶೋಭಾಗೆ ಸುದೀಪ್ ಆಜ್ಞೆ ಮಾಡಿದ್ದರು. ಆದರೆ ಶೋಭಾ ಎಲಿಮಿನೇಟ್ ಆದರೋ ಇಲ್ಲವೋ ಎಂಬುದು ಖಚಿತವಾಗಿರಲಿಲ್ಲ. ಸೋಮವಾರದ (ಡಿ.2) ಸಂಚಿಕೆಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶೋಭಾ ಅವರು ಮುಖ್ಯ ದ್ವಾರದ ಬಳಿ ಬಂತು ನಿಂತುಕೊಂಡು ‘ಈಗ ಹೋಗಬೇಕು ಅಂತ ಅನಿಸುತ್ತಿಲ್ಲ’ ಎಂದು ಮತ್ತೆ ಹೊಸ ಡ್ರಾಮಾ ಶುರು ಮಾಡಲು ಮುಂದಾದರೂ ಕೂಡ ಬಿಗ್ ಬಾಸ್​ ಮನಸ್ಸು ಕರಗಲಿಲ್ಲ. ಕಡೆಗೂ ಮುಖ್ಯದ್ವಾರ ಓಪನ್ ಆಯಿತು. ಶೋಭಾ ಹೊರಗೆ ಹೋಗಲೇಬೇಕಾಯಿತು.

ತೆಲುಗು ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಅವರು ಸಖತ್ ಸೌಂಡು ಮಾಡಿದ್ದರು. ತೆಲುಗು ಕಿರುತೆರೆಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಯಿತು. ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಹೀಗೆ ಅರ್ಧಕ್ಕೆ ಕೈ ಚೆಲ್ಲಿದ್ದಕ್ಕೆ ಸ್ವತಃ ಅವರಿಗೂ ಬೇಸರ ಆಗಿದೆ.

ಇದನ್ನೂ ಓದಿ: ಚೈತ್ರಾ ಯಾರಿಗೆ ಹಾಲು ಕೊಡ್ತಾರೆ, ಯಾರಿಗೆ ಹಾಲಾಹಲ ಕೊಡ್ತಾರೆ ಗೊತ್ತಾಗಲ್ಲ: ಐಶ್ವರ್ಯಾ ನೇರ ಮಾತು

ವೈಲ್ಡ್ ಕಾರ್ಡ್​ ಮೂಲಕ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಆರಂಭದಲ್ಲಿ ಅವರ ಸೌಂಡು ಜೋರಾಗಿತ್ತು. ಗೌತಮಿಯ ಮುಖವಾಡ ಕಳಚುತ್ತೇನೆ ಎಂದು ಅವರು ಸವಾಲು ಹಾಕಿದ್ದರು. ಆದರೆ ಎರಡು ವಾರ ಕಳೆಯುವುರೊಳಗೆ ಅವರು ಸುಸ್ತು ಹೊಡೆದರು. ಕಳೆದ ವಾರ ಕಳಪೆ ಪಟ್ಟ ಪಡೆದುಕೊಂಡು ಜೈಲುವಾಸ ಕೂಡ ಅನುಭವಿಸಿದ್ದರು. ನಂತರದ ದಿನಗಳಲ್ಲಾದರೂ ಅವರ ಆಟ ಚುರುಕಾಗಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆ ಆಗಿದೆ. ವೋಟ್​ ಹಾಕಿದವರಿಗೂ ಬೆಲೆ ಕೊಡದೇ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.