ಬಿಗ್ಬಾಸ್ ಕನ್ನಡ (Bigg Boss) ಸೀಸನ್ 10ರ ಮನೆಯಲ್ಲಿ ಸೋಷಿಯಲ್ ಮೀಡಿಯಾ, ಮೀಮ್ ಪೇಜ್ಗಳ ಡಾರ್ಲಿಂಗ್ಗಳಾದ ಬುಲೆಟ್ ರಕ್ಷಕ್ ಹಾಗೂ ಡ್ರೋನ್ ಪ್ರತಾಪ್ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಅಬ್ಬರಿಸುವ, ಒಂದರ ಹಿಂದೊಂದು ಡೈಲಾಗ್ ಬಿಟ್ಟು ಜನಪ್ರಿಯರಾಗಿಯೇ ಬಿಗ್ಬಾಸ್ ಮನೆ ಸೇರಿದ್ದಾರೆ. ಇನ್ನು ಡ್ರೋನ್ ಪ್ರತಾಪ್ ತಮ್ಮದಲ್ಲದ ಡ್ರೋನ್ ಅನ್ನು ತಪ್ಪದೆಂದು ಹೇಳಿ ವಿವಾದ ಸುತ್ತಿಸಿಕೊಂಡಿದ್ದರು. ಇದೀಗ ಈ ಇಬ್ಬರು ಬಿಗ್ಬಾಸ್ ಮನೆಯಲ್ಲಿದ್ದು ಹಲವರ ಕಣ್ಣು ಇವರ ಮೇಲಿದೆ.
ಮೊದಲೆರಡು ದಿನ ರಕ್ಷಕ್ ತುಸು ಮಾತನಾಡಿದರು, ತಮ್ಮ ಸೋಷಿಯಲ್ ಮೀಡಿಯಾ ಅಪಿಯರೆನ್ಸ್ ಬಗ್ಗೆ ಪ್ರಶ್ನಿಸಿದವರಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಡ್ರೋನ್ ಪ್ರತಾಪ್ ತುಸು ಮೌನವಾಗಿದ್ದರು. ಆದರೆ ಈಗ ಉಲ್ಟಾ ಆಗಿದೆ. ಅದರ ಜೊತೆಗೆ ಡ್ರೋಪ್ ಪ್ರತಾಪ್ ಮೇಲೆ ಹಲವರು ತಮ್ಮ ಪ್ರತಾಪ ತೋರಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಡ್ರೋನ್ ಸಹ ಉತ್ತರ ನೀಡಿದ್ದಾರೆ.
ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್, ರಕ್ಷಕ್ ಇನ್ನಿತರರು ಮಾತನಾಡುತ್ತಾ ಕೂತಿದ್ದಾಗ ಡ್ರೋನ್ ಪ್ರತಾಪ್ ಅವರ ಡ್ರೋನ್ ಬಗ್ಗೆ ಚರ್ಚೆ ಬಂತು. ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್ ಅವರುಗಳು ಡ್ರೋನ್ ಪ್ರತಾಪ್ ಅವರ ಡ್ರೋನ್ ಬಗ್ಗೆ ಹಾಸ್ಯಾಸ್ಪದವಾಗಿ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಡ್ರೋನ್ ಪ್ರತಾಪ್ ಆಕ್ಷೇಪ ವ್ಯಕ್ತಪಡಿಸಿ. ನಾನು ಮಾಡಿರುವ ಡ್ರೋನ್ ನೀವು ನೋಡಿಲ್ಲ, ನನ್ನ ಕಂಪೆನಿ ಯಾವುದೆಂದು ನಿಮಗೆ ಗೊತ್ತಿಲ್ಲ. ಆದರೆ ನಗುತ್ತಾ ಹಾಸ್ಯ ಮಾಡುತ್ತೀರಿ. ನಾನು ಡ್ರೋನ್ಗೆ ಬೇಕಿರುವ ವಸ್ತುಗಳ ಪಟ್ಟಿ ಕೊಡುತ್ತೇನೆ, ಲ್ಯಾಪ್ಟಾಪ್ ತರಿಸಿ ಇಲ್ಲೇ ಅಸೆಂಬಲ್ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಕಿತ್ತಾಡಿದ ಶಿವ-ಸತಿ
ಆ ನಂತರ ನಡೆದ ಟಾಸ್ಕ್ ಒಂದರಲ್ಲಿ ಪ್ರತಾಪ್, ಸ್ನೇಹಿತ್ಗೆ ನಾಲಾಯಕ್ ಫಲಕ ನೀಡಿದರು. ಅದಾದ ಬಳಿಕ ಪ್ರತಾಪ್ ಮೇಲೆ ಇನ್ನಷ್ಟು ಸಿಟ್ಟು ಮಾಡಿಕೊಂಡ ಸ್ನೇಹಿತ್, ಪ್ರತಾಪ್ ಒಬ್ಬ ಸುಳ್ಳುಗಾರ, ಹಗರಣ ಮಾಡಿದ್ದಾನೆ, ದ್ರೋಹ ಮಾಡಿದ್ದಾನೆ ಎಂದರು. ಅವನನ್ನು ಮನುಷ್ಯ ಎಂದೇ ನಾನು ಕನ್ಸಿಡರ್ ಮಾಡಿಲ್ಲ ಎಂದೂ ಸಹ ಹೇಳಿದರು. ಬಳಿಕ ಡ್ರೋನ್ ಪ್ರತಾಪ್ ಜೊತೆಗೆ ಚರ್ಚೆಯ ಸಂದರ್ಭದಲ್ಲಿಯೂ ಸ್ನೇಹಿತ್ ಪದೇ ಪದೇ ಡ್ರೋನ್ ವಿಷಯ ಮಾಡಿದರು. ಆಗ ಡ್ರೋನ್ ಪ್ರತಾಪ್, ಬ್ಯುಸಿನೆಸ್ ವಿಷಯವನ್ನು, ಹಣಕಾಸಿನ ವಿಷಯವನ್ನು ಇಲ್ಲಿ ಯಾಕೆ ಚರ್ಚೆ ಮಾಡುತ್ತೀರಿ, ನನ್ನ ಆಫೀಸ್ ಇದೆ ಅಲ್ಲಿ ಬಂದು ವ್ಯವಹಾರ ಮಾತನಾಡಿ ಎಂದರು. ಆದರೂ ಬಿಡದ ಸ್ನೇಹಿತ್, ನೀನು ಡೋಂಗಿ, ಫೇಕ್ ಎಂದು ನೇರವಾಗಿ ಮೂದಲಿಸಿದರು. ಸ್ನೇಹಿತ್ರ ಮಾತಿನಿಂದ ಸಿಟ್ಟುಕೊಂಡ ಪ್ರತಾಪ್, ಡೊಂಗಿ, ಫೇಕ್ ಎಂದು ಕರೆಯಬೇಡಿ ಎಂದು ಏರಿದ ಧ್ವನಿಯಲ್ಲಿ ಕೂಗಾಡಿದರು.
ಇನ್ನು ರಕ್ಷಕ್ ತುಸು ಮೌನವಾಗಿಯೇ ಸಮಯ ಕಳೆದರು. ಊಟ ಮಾಡುವ ಸಮಯದಲ್ಲಿ ಅಂತೂ ಭಾವುಕರಾಗಿ ಬಿಟ್ಟರು. ಸೋಷಿಯಲ್ ಮೀಡಿಯಾನಲ್ಲಿ ಡೈಲಾಗ್ ಮೇಲೆ ಡೈಲಾಗ್ ಹೊಡೆಯುತ್ತಿದ್ದವರು ಇಲ್ಲಿ ತುಸು ಮೌನವಾಗಿ, ಗಂಭೀರವಾಗಿ ವರ್ತಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ