
ಬಿಗ್ಬಾಸ್ ಕನ್ನಡ ಸೀಸನ್ 13 ಸೀಸನ್ ಶುರುವಾಗಿ ವಾರವಾಗುತ್ತಾ ಬಂದಿದೆ. ಈ ಸೀಸನ್ನ ಮೊದಲ ಕಿಚ್ಚನ ಪಂಚಾಯ್ತಿ ಇಂದು (ಸೆಪ್ಟೆಂಬರ್ 12) ನಡೆದಿದೆ. ಸುದೀಪ್ ಅವರು ಎಂದಿನಂತೆ ಖಡಕ್ ಆಗಿ ಎಂಟ್ರಿ ಕೊಟ್ಟು ಸ್ಪರ್ಧಿಗಳನ್ನು ಮಾತನಾಡಿಸಿದ್ದಾರೆ. ಮೊದಲ ಪಂಚಾಯ್ತಿಯಲ್ಲೇ ಸುದೀಪ್ ಅವರು ಕೆಲವರಿಗೆ ಸುದೀಪ್ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ವಿಶೇಷವಾಗಿ ತಾಂಡವ್, ಗಗನ್, ಮಂಜು, ಶಾಸ್ತ್ರಿ, ಜಗ್ಗಿ ಅವರುಗಳಿಗೆ ಸಖತ್ ಶಾಕ್ ಕೊಟ್ಟರು. ಆದರೆ ಸುದೀಪ್ ಅವರಿಗೇ ಶಾಕ್ ಕೊಟ್ಟವರು ನಿರ್ದೇಶಕ ಓಂ ಪ್ರಕಾಶ್ ರಾವ್.
ಸುದೀಪ್ ಅವರು ಸ್ಪರ್ಧಿಗಳನ್ನು ಇತರೆ ಸ್ಪರ್ಧಿಗಳ ಬಗ್ಗೆ ಹಾಗೂ ಒಟ್ಟಾರೆ ಮೊದಲ ವಾರದ ಅನುಭವಗಳ ಬಗ್ಗೆ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಅದರಂತೆ ಓಂ ಪ್ರಕಾಶ್ ರಾವ್ ಅವರನ್ನು ಮೊದಲ ವಾರ ಬಿಗ್ಬಾಸ್ ಮನೆಯಲ್ಲಿ ಏನೆನ್ನಿಸಿತು ಎಂದರು. ಅದಕ್ಕೆ ಓಂ ಪ್ರಕಾಶ್ ರಾವ್ ನೀಡಿದ ಉತ್ತರಕ್ಕೆ ಖುದ್ದು ಸುದೀಪ್ ಮನತುಂಬಿ ನಕ್ಕು ಬಿಟ್ಟರು.
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಓಂ ಪ್ರಕಾಶ್ ರಾವ್, ‘ಕರ್ನಾಟಕದಲ್ಲಿ ನೀವೇ ಒಳ್ಳೆಯ ಕಲಾವಿದ, ನಟ ಎಂದುಕೊಂಡಿದ್ದೆ, ಆದರೆ ಖಂಡಿತ ಇಲ್ಲ ಇಲ್ಲಿರುವ ಕೆಲವರು ನಿಮಗಿಂತಲೂ ಒಳ್ಳೆಯ ನಟರು ಇಲ್ಲಿದ್ದಾರೆ’ ಎಂದರು. ಓಂ ಪ್ರಕಾಶ್ ರಾವ್ ಮಾತು ಕೇಳಿ ಸ್ಪರ್ಧಿಗಳೆಲ್ಲ ನಗಲು ಆರಂಭಿಸಿದರು. ಖುದ್ದು ಸುದೀಪ್ಗೆ ಸಹ ನಗು ತಡೆಯಲಾಗಲಿಲ್ಲ. ಬಳಿಕ ಸುದೀಪ್ ಅವರು, ‘ನನ್ನ ಪುಣ್ಯ, ನೀವು ‘ಹುಚ್ಚ’ ಸಿನಿಮಾ ಮಾಡುವಾಗ ಇವರು ನಿಮ್ಮ ಕೈಗೆ ಸಿಗಲಿಲ್ಲ, ಇಲ್ಲವಾದರೆ ನಾನು ಹೀರೋ ಆಗ್ತಿರಲಿಲ್ಲ’ ಎಂದರು.
ಇದನ್ನೂ ಓದಿ:ಗಗನ್-ತಾಂಡವ್ ರಾಮ್ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಮಾತು ಮುಂದುವರೆಸಿದ ಓಂ ಪ್ರಕಾಶ್ ರಾವ್, ‘ಇವರ ಮುಂದೆ ನೀವು ಏನೂ ಅಲ್ಲ ಬಿಡಿ. ನಿಮಗಿಂತಲೂ ದೊಡ್ಡ ಕಲಾವಿದರು ಇವರು’ ಎಂದರು ಓಂ ಪ್ರಕಾಶ್ ರಾವ್. ಮಾತಿಗೆ ಪ್ರತಿಕ್ರಿಯಿಸಿದ ಸುದೀಪ್, ‘ನನಗೆ 12 ಸೀಸನ್ ಹಿಂದೆಯೇ ನನಗೆ ಈ ವಿಷಯ ತಿಳಿದು ಬಿಟ್ಟಿತು, ಒಳಗೆ ಹೋದವರ ನಟನೆ ಮುಂದೆ ನಮ್ಮ ನಟನೆ ಏನೂ ಅಲ್ಲ ಬಿಡಿ’ ಎಂದರು ಸುದೀಪ್.
ಓಂ ಪ್ರಕಾಶ್ ರಾವ್ ಅವರು ತಾಂಡವ್ ರಾಮ್ ಮಾಡಿದ ನಟನೆಯ ಬಗ್ಗೆ ಹಾಗೂ ಯಶಸ್ ಹೇಳಿದ ಮಾತಿನ ಬಗ್ಗೆ ಸುದೀಪ್ ಬಳಿ ತಮಾಷೆ ಮಾಡುತ್ತಲೇ ದೂರು ಹೇಳಿದರು. ವಿಶೇಷವಾಗಿ ಯಶಸ್ ಹೇಳಿದ ಮಾತಿನ ಬಗ್ಗೆ ಓಂ ಪ್ರಕಾಶ್ ರಾವ್ ಅಸಮಾಧಾನ ವ್ಯಕ್ತಪಡಿಸಿದರು. ಸುದೀಪ್ ಅವರು ಸಹ ಓಂ ಪ್ರಕಾಶ್ ರಾವ್ ಅವರು ಆಡುತ್ತಿರುವ ರೀತಿ ಮತ್ತು ಅವರು ಮನೆಯವರನ್ನು ಗಮನಿಸುತ್ತಿರುವ ರೀತಿಯ ಬಗ್ಗೆ ಹೊಗಳಿದರು.
ಓಂ ಪ್ರಕಾಶ್ ರಾವ್ ಅವರನ್ನು ಸುದೀಪ್, ಬಿಗ್ಬಾಸ್ ಮನೆಗೆ ಸ್ವಾಗತ ಮಾಡಿದಾಗಲೇ ಸುದೀಪ್ ಹೇಳಿದ್ದರು, ಓಂ ಪ್ರಕಾಶ್ ರಾವ್ ಬಹಳ ನಗಿಸುತ್ತಾರೆ ಎಂದು. ಓಂ ಪ್ರಕಾಶ್ ಅವರು ಅದನ್ನೇ ಮಾಡುತ್ತಿದ್ದಾರೆ. ಓಂ ಪ್ರಕಾಶ್ ಅವರು ಇತ್ತೀಚೆಗಷ್ಟೆ ಗುರುಜಿ ಆಗಿ ಸಖತ ಆಗಿ ಎಂಟರ್ಟೈನ್ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ