
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಾರಿ ‘ಯೆಸ್ ಆರ್ ನೋ’ ರೌಂಡ್ ಸಾಕಷ್ಟು ಕುತೂಹಲ ಮೂಡಿಸಿತು. ಆರಂಭದ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸಿಯಾ ಅವರು ಈಗ ಡಲ್ ಆಗಿದ್ದಾರೆ. ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಎಲ್ಲಾ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸುದೀಪ್ ಅವರು ‘ಇಬ್ಬರ ಜಗಳದಲ್ಲಿ ಲಾಭ ಪಡೆಯುವ ಮೂರನೇ ವ್ಯಕ್ತಿ ಅಂದ್ರೆ ಅದು ಆಸಿಯಾ’ ಎಂಬ ಪ್ರಶ್ನೆಯನ್ನು ಸ್ಪರ್ಧಿಗಳ ಮುಂದಿಟ್ಟರು. ಇದಕ್ಕೆ ಮನೆಯ ಬಹುತೇಕ ಸದಸ್ಯರು ‘ನೋ’ ಎಂದು ಉತ್ತರಿಸಿದರೆ, ಗಗನ್, ಗಾನವಿ ಹಾಗೂ ಸೋನಿಕಾ ಮಾತ್ರ ‘ಯೆಸ್’ ಎಂದು ಪ್ರತಿಕ್ರಿಯಿಸಿದರು. ಈ ಮೂಲಕ ಆಸಿಯಾ ಅವರ ಆಟದ ಶೈಲಿ ಹಾಗೂ ಇತರೆ ಸ್ಪರ್ಧಿಗಳ ಜಗಳದಲ್ಲಿ ಅವರ ಅನಗತ್ಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದರು.
ಈ ಕುರಿತು ಮಾತನಾಡಿರುವ ಸೋನಿಕಾ, ‘ಆಸಿಯಾ ಅವರು ಮೊಟ್ಟೆ ಮತ್ತು ಹಾಲಿನ ವಿಷಯಕ್ಕೂ ಜಗಳ ಆಡುತ್ತಾರೆ ಹಾಗೂ ಯಾರದ್ದೋ ಜಗಳದ ಮಧ್ಯೆ ಹೋಗುತ್ತಾರೆ’ ಎಂದು ಆರೋಪಿಸಿದರು. ‘ಇದಕ್ಕೆ ದನಿಗೂಡಿಸಿದ ಗಾನವಿ, ಸಂಬಂಧವೇ ಇಲ್ಲದ ವಿಷಯಗಳಿಗೂ ಆಸಿಯಾ ಮಧ್ಯೆ ಪ್ರವೇಶಿಸುತ್ತಾರೆ. ಅದರಲ್ಲೂ ಯಶಸ್ ವಿಷಯ ಬಂದಾಗ ಅವರು ಯಾಕಿಷ್ಟು ತಲೆಹಾಕಬೇಕು? ಯಶಸ್ ಪರವಾಗಿ ಯಶಸ್ ಹಾಗೂ ಆಸಿಯಾ ಪರವಾಗಿ ಆಸಿಯಾ ಮಾತನಾಡಬೇಕು. ಆದರೆ ಬೇರೆಯವರ ವಿಚಾರದಲ್ಲಿ ಆಸಿಯಾ ಮೂಗು ತೂರಿಸುತ್ತಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆಸಿಯಾ, ತಾನು ಯಾರ ಜಗಳಕ್ಕೂ ಸುಖಾಸುಮ್ಮನೆ ಹೋಗುವುದಿಲ್ಲ ಎಂದು ಸಮರ್ಥಿಸಿಕೊಂಡರು. ತನ್ನದೇ ವಿಷಯ ಬಂದಾಗ ಮಾತ್ರ ತಾನು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪ್ರಶಾಂತ್-ತಾಂಡವ್ ಅದ್ಭುತವಾಗಿ ಆಡಿದ್ರೂ ಚಪ್ಪಾಳೆ ಏಕೆ ಕೊಟ್ಟಿಲ್ಲ? ಕಾರಣ ಕೊಟ್ಟ ಕಿಚ್ಚ
‘ಯಶಸ್ ಹಾಗೂ ಗಗನ್ ಜಗಳವಾಡುತ್ತಿದ್ದಾಗ ತಮ್ಮ ಹೆಸರು ಪ್ರಸ್ತಾಪವಾದ ಕಾರಣದಿಂದಲೇ ತಾನು ಮಧ್ಯಪ್ರವೇಶಿಸಬೇಕಾಯಿತು. ಆದರೆ ಆ ಒಂದು ಕಾರಣದಿಂದ ನಾನು ಮನೆಯೊಳಗೆ ಸಾಕಷ್ಟು ತೊಂದರೆ ಹಾಗೂ ಮಾನಸಿಕ ಅಶಾಂತಿ ಅನುಭವಿಸಿದೆ’ ಎಂದು ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಈ ಯೆಸ್ ಆರ್ ನೋ ರೌಂಡ್ ಆಸಿಯಾ ಅವರ ಆಟದ ತಂತ್ರಗಾರಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.