
ಬಿಗ್ ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಅವರ ಆಟಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ವಯಸ್ಸಿನಲ್ಲಿ ಕಿರಿಯವರಾದರೂ ಕಿರಣ್ ಶಾಸ್ತ್ರಿ ಅವರ ತಿಳುವಳಿಕೆ ಮತ್ತು ವಿಚಾರಗ್ರಹಣ ಶಕ್ತಿ ಎಲ್ಲರಿಗಿಂತಲೂ ಜೋರಾಗಿದೆ ಎಂದು ನಿರೂಪಕ ಕಿಚ್ಚ ಸುದೀಪ್ ಶ್ಲಾಘಿಸಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಕಿರಣ್ ಅವರ ಬುದ್ಧಿವಂತಿಕೆಯ ನಡೆ ಗಮನ ಸೆಳೆದಿದೆ.
ಮನೆಯೊಳಗೆ ಮೂವರ ವಿಷಯದಲ್ಲಿ ದೃಢವಾಗಿ ನಿಂತು, ಬಿಗ್ ಬಾಸ್ ನಿರ್ಧಾರವನ್ನೇ ಬದಲಾಯಿಸುವಂತೆ ಸ್ಟ್ಯಾಂಡ್ ತೆಗೆದುಕೊಂಡಿದ್ದಕ್ಕೆ ಕಿರಣ್ ಶಾಸ್ತ್ರಿ ಅವರನ್ನು ಸುದೀಪ್ ಪ್ರಶಂಸಿಸಿದ್ದಾರೆ. ನೇರವಾದ ಮಾತು ಮತ್ತು ನಿರ್ಣಾಯಕ ಸನ್ನಿವೇಶಗಳಲ್ಲಿ ತೋರಿದ ಧೈರ್ಯ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಆಟದ ಆರಂಭದ ದಿನಗಳಲ್ಲಿ ಎದುರಾದ ಟೀಕೆಗಳನ್ನು ಮೀರಿ, ತಾವು ತೆಗೆದುಕೊಂಡ ನಿಲುವಿನಿಂದಲೇ ಕಿರಣ್ ಈಗ ಗಮನಾರ್ಹ ಬದಲಾವಣೆ ತೋರಿಸಿದ್ದಾರೆ.
ಈ ವಾರದ ಪ್ರದರ್ಶನಕ್ಕಾಗಿ ಕಿರಣ್ ಶಾಸ್ತ್ರಿ ಅವರಿಗೆ ‘ಕಿಚ್ಚನ ಚಪ್ಪಾಳೆ’ ನೀಡಿ ಗೌರವಿಸಲಾಗಿದೆ. ಸೌಂದರ್ಯ ಅವರ ಕೈಯಿಂದ ಕಿರಣ್ ಶಾಸ್ತ್ರಿ ಅವರಿಗೆ ವಿಶೇಷ ಜಾಕೆಟ್ ತೊಡಿಸಿ ಸಂಭ್ರಮಿಸಲಾಗಿದೆ. ಜೊತೆಗೆ, ಅವರಿಗೆ ವಿಶೇಷ ಫೋಟೋ ಫ್ರೇಮ್ ಉಡುಗೊರೆಯನ್ನೂ ನೀಡುವ ಮೂಲಕ ಅವರ ಸಾಧನೆಯನ್ನು ಗುರುತಿಸಲಾಗಿದೆ.
ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆಯಾದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿ, ಆರಂಭದಿಂದಲೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಟವಾಡುತ್ತಾ ಬಂದಿದ್ದಾರೆ. ನಾಮಿನೇಷನ್ ಮತ್ತು ಟಾಸ್ಕ್‌ಗಳ ನಡುವೆಯೂ ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಮಂಡಿಸುತ್ತಿರುವ ಅವರು, ವೀಕ್ಷಕರ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದಾರೆ. ಕಿಚ್ಚನ ಚಪ್ಪಾಳೆ ಮತ್ತು ವಿಶೇಷ ಉಡುಗೊರೆ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪು ನೀಡಿದೆ.
ಇದನ್ನೂ ಓದಿ: ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಕಿರಣ್ ಶಾಸ್ತ್ರಿ ಅವರಿಗೆ ಕಿಚ್ಚನ ಚಪ್ಪಾಳೆ ಮತ್ತು ವಿಶೇಷ ಉಡುಗೊರೆ ದೊರೆತಿರುವ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದೇ ವೇಳೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್ ಮೂಲಕವೂ ವೀಕ್ಷಕರು ಈ ಸಂಚಿಕೆಯನ್ನು ಕಣ್ತುಂಬಿಕೊಳ್ಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.