ಗೆಳತಿ ಇಶಾನಿಗಾಗಿ ತಂಡಕ್ಕೆ ಮೋಸ ಮಾಡಿದರೇ ಮೈಖಲ್?

|

Updated on: Nov 09, 2023 | 11:59 PM

Bigg Boss: ಬಿಗ್​ಬಾಸ್ ಮನೆಯ ಜಂಟಲ್​ಮ್ಯಾನ್ ಎನಿಸಿಕೊಂಡಿದ್ದ ಮೈಖಲ್, ಗೆಳತಿ ಇಶಾನಿಯ ಒತ್ತಡಕ್ಕೆ ಸಿಲುಕಿ ತಮ್ಮ ತಂಡಕ್ಕೆ ಮೋಸ ಮಾಡಿದ್ದಾರೆ.

ಗೆಳತಿ ಇಶಾನಿಗಾಗಿ ತಂಡಕ್ಕೆ ಮೋಸ ಮಾಡಿದರೇ ಮೈಖಲ್?
Follow us on

ಬಿಗ್​ಬಾಸ್ (BiggBoss) ಮನೆಯಲ್ಲಿ ಮೈಖಲ್ ಒಬ್ಬ ಜಂಟಲ್​ಮ್ಯಾನ್ ಎಂದೇ ಬಿಂಬಿತರಾಗಿದ್ದರು. ಆದರೆ ಗುರುವಾರದ ಎಪಿಸೋಡ್​ನಲ್ಲಿ ಅವರು ಆಡಿದ ರೀತಿ ಅವರನ್ನು ವಂಚಕನನ್ನಾಗಿ ಮಾಡಿದೆ. ಮೈಖಲ್, ತಮ್ಮ ಗೆಳತಿ ಇಶಾನಿಯ ಮಾತು ಕೇಳಿ ತಮ್ಮ ತಂಡಕ್ಕೆ ಹಿನ್ನಡೆ ಉಂಟು ಮಾಡಿದ್ದಾರೆ. ಆ ಮೂಲಕ ತಂಡದ ಕಣ್ಣಿನಲ್ಲಿ ಮಾತ್ರವೇ ಅಲ್ಲದೆ ನೋಡುಗರ ಕಣ್ಣಿನಲ್ಲೂ ವಿಲನ್ ಆದಂತಾಗಿದೆ. ಇಷ್ಟೆಲ್ಲ ಆದರೂ ಮೈಖಲ್ ಕ್ಯಾಪ್ಟನ್ ಆಗುವ ಹಂತದಲ್ಲಿದ್ದು ಇನ್ನೊಂದು ಮೆಟ್ಟಿಲಷ್ಟೆ ಬಾಕಿ ಇದೆ.

ವಜ್ರಕಾಯ ಹಾಗೂ ಗಂಧದ ಗುಡಿ ತಂಡಕ್ಕೆ ಇಂದು ಸೊಂಟಕ್ಕೆ ಟಬ್​ ಕಟ್ಟಿಕೊಂಡು ಪೋಲ್​ಗೆ ಕಟ್ಟಿದ್ದ ಬಲೂನ್ ಅನ್ನು ಕೈ ಬಳಸದೆ ಒಡೆದು ಅದರಲ್ಲಿನ ನೀರನ್ನು ಸೊಂಟಕ್ಕೆ ಕಟ್ಟಿದ್ದ ಟಬ್​ನಲ್ಲಿ ಸಂಗ್ರಹಿಸಿ ಅದನ್ನು ತಂಡಕ್ಕೆ ಮೀಸಲಾಗಿರಿಸಿದ್ದ ದೊಡ್ಡ ಬೌಲ್​ನಲ್ಲಿ ಹಾಕುವ ಟಾಸ್ಕ್​ ಅನ್ನು ಆಡಿಸಿದರು. ಈ ಟಾಸ್ಕ್​ಗೆ ಉಸ್ತುವಾರಿಯಾಗಿ ಗಂಧದ ಗುಡಿ ತಂಡದಿಂದ ಮೈಖಲ್ ಹಾಗೂ ವಜ್ರಕಾಯ ತಂಡದಿಂದ ಇಶಾನಿಯನ್ನು ಎರಡೂ ತಂಡಗಳು ನೇಮಿಸಿದವು.

ಆಟ ಕಷ್ಟಕರವಾಗಿತ್ತು, ಸಣ್ಣ-ಪುಟ್ಟ ನಿಯಮಗಳನ್ನು ಎರಡೂ ತಂಡಗಳ ಸದಸ್ಯರು ಅಲ್ಲಲ್ಲಿ ಉಲ್ಲಂಘನೆ ಮಾಡುತ್ತಲೇ ಇದ್ದರು. ಮೊದಲಿನಿಂದಲೂ ಪ್ರತಾಪ್ ನಾಯಕತ್ವದ ಗಂಧದ ಗುಡಿ ತಂಡ ಮುನ್ನಡೆಯಲ್ಲಿತ್ತು, ಆಟದ ನಡುವೆ ಬ್ರೇಕ್ ಸಿಕ್ಕಾಗ, ಮೈಖಲ್, ಎದುರಾಳಿ ತಂಡದೊಂದಿಗೆ ಕೂತು ಅವರಿಗೆ ಗೇಮ್ ಪ್ಲ್ಯಾನ್ ಹೇಳಿಕೊಡುತ್ತಿದ್ದರು. ಆದರೆ ಆಟ ನಡೆಯುವ ಸಮಯದಲ್ಲಿ ತಕ್ಕ ಮಟ್ಟಿಗೆ ಸರಿಯಾಗಿಯೇ ನಿರ್ಣಯಗಳನ್ನು ನೀಡುತ್ತಿದ್ದರು. ಇಶಾನಿ ತನ್ನ ತಂಡವನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡಿದರಾದರೂ ಅದಕ್ಕೆ ಸೂಕ್ತ ಅವಕಾಶ ಸಿಗದೆ ಒಲ್ಲದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನೇ ತೆಗೆದುಕೊಂಡರು.

ಇದನ್ನೂ ಓದಿ:ತಂಡದಲ್ಲಿ ಅಸಮಾಧಾನ: ಟೀಂ ಬಿಟ್ಟು ಹೋಗುತ್ತೇನೆಂದ ಮೈಖಲ್

ಆದರೆ ಅಂತಿಮ ರೌಂಡ್​ನಲ್ಲಿ ಗಂಧದ ಗುಡಿ ತಂಡದ ತನಿಷಾ ನೇರವಾಗಿ ನಿಯಮ ಉಲ್ಲಂಘಿಸಿ, ಕೈನಿಂದ ಬಲೂನು ಒಡೆದರು. ಅದರಿಂದ ಸಂಗ್ರಹಿಸಿದ ನೀರನ್ನು ತಮ್ಮ ತಂಡದ ಟಬ್​ಗೆ ಹಾಕಿದರು. ಅಲ್ಲಿಗೆ ಗಂಧದ ಗುಡಿ ತಂಡ ಹೆಚ್ಚು ನೀರು ಸಂಗ್ರಹಿಸಿ ಗೆದ್ದಿತ್ತು. ಆದರೆ ತನಿಷಾ ಕೈಯಿಂದ ಬಲೂನ್ ಒಡೆದಿದ್ದನ್ನು ಒಪ್ಪಲಿಲ್ಲ, ಆದರೆ ಎರಡೂ ತಂಡಗಳು ಎಷ್ಟು ಬಾರಿ ನಿಯಮ ಉಲ್ಲಂಘನೆ ಮಾಡಿವೆ ಎಂದು ಲೆಕ್ಕ ಹಾಕಿ ಮೈಖಲ್, ಗಂಧದ ಗುಡಿ ತಂಡ ಗೆದ್ದಿದೆ ಎಂದು ಘೋಷಿಸಿದರು.

ಆದರೆ ಇದು ಇಶಾನಿಗೆ ಒಪ್ಪಿಗೆ ಆಗಲಿಲ್ಲ, ಬಳಿಕ ನೀರು ತುಂಬಿದ್ದ ಬಲೂನ್ ಅನ್ನು ತಾವೇ ಹೋಗಿ ತಮ್ಮದೇ ತಂಡದ ಟಬ್​ಗೆ ಹಾಕಿ, ಎರಡೂ ತಂಡಗಳ ಟಬ್​ನಲ್ಲಿ ನೀರು ಸಮವಾಗಿವೆ ಎಂದು ಹೇಳಿ, ಮೈಖಲ್ ಅನ್ನೂ ವಾದದ ಮೂಲಕ ಒಪ್ಪಿಸಿ, ಟಾಸ್ಕ್ ಡ್ರಾ ಆಗಿದೆ ಎಂದು ಘೋಷಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ ಇಶಾನಿ ಒತ್ತಡಕ್ಕೆ ಸಿಲುಕಿ ಮೈಖಲ್ ಸಹ ಟಾಸ್ಕ್ ಡ್ರಾ ಆಗಿದೆ ಎಂದರು.

ಉಸ್ತುವಾರಿಗಳ ಈ ಇಬ್ಬಗೆ ನೀತಿಯ ಬಗ್ಗೆ ಬಿಗ್​ಬಾಸ್ ಅಸಮಾಧಾನ ವ್ಯಕ್ತಪಡಿಸಿದರು. ಟಾಸ್ಕ್​ನ ನೈರ್ಮಲ್ಯತೆಯನ್ನು ಮೈಖಲ್ ಹಾಗೂ ಇಶಾನಿ ಹಾಳು ಮಾಡಿದ್ದಾರೆ ಎಂದರಾದರೂ ಉಸ್ತುವಾರಿ ಸ್ಥಾನಕ್ಕೆ ಗೌರವ ಕೊಟ್ಟು ಉಸ್ತುವಾರಿಗಳ ಅಂತಿಮ ನಿರ್ಧಾರವಾದ ಟಾಸ್ಕ್ ಡ್ರಾ ಆಗಿರುವ ನಿರ್ಣಯವನ್ನು ಸ್ವೀಕರಿಸಿರುವುದಾಗಿ ಹೇಳಿದರು. ಇದರಿಂದ ಗಂಧದ ಗುಡಿ ತಂಡವು ಮೈಖಲ್​ ಮೇಲೆ ಅಸಮಾಧಾನಗೊಂಡಿತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:43 pm, Thu, 9 November 23