ಬಿಗ್ಬಾಸ್ (Bigg Boss) ಮನೆಯಲ್ಲಿ ಈ ವಾರ ಟಾಸ್ಕ್ಗಳ ಅಬ್ಬರ ಜೋರಾಗಿತ್ತು. ಹಲವು ಭಿನ್ನ-ಭಿನ್ನ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ಬಿಗ್ಬಾಸ್ ನೀಡಿದ್ದರು. ಶಕ್ತಿ, ಯುಕ್ತಿ, ಒಗ್ಗಟ್ಟು, ಚತುರತೆ ಬೇಡುವ ಹಲವು ಟಾಸ್ಕ್ಗಳಲ್ಲಿ ಎರಡು ಗುಂಪುಗಳಾಗಿ ಮನೆಯ ಸದಸ್ಯರು ಆಡಿದರು. ಯಾರ ತಂಡ ಹೆಚ್ಚು ಟಾಸ್ಕ್ಗಳಲ್ಲಿ ಗೆದ್ದು ವಿಜಯಿಯಾಗುತ್ತದೆಯೋ ಆ ತಂಡದ ಸದಸ್ಯರು ನಾಯಕತ್ವದ ಟಾಸ್ಕ್ಗೆ ಆಯ್ಕೆ ಆಗುತ್ತಾರೆ ಹಾಗೂ ಲಕ್ಷುರಿ ಟಾಸ್ಕ್ಗೂ ಅರ್ಹತೆ ಪಡೆಯುತ್ತಾರೆ ಎಂದಿತ್ತು. ಹಾಗಾಗಿ ಎರಡೂ ತಂಡದ ಸದಸ್ಯರು ಶಕ್ತಿಮೀರಿ ಆಟಗಳನ್ನು ಆಡಿದರು.
ಭಜರಂಗಿ ಹಾಗೂ ಉಗ್ರಂ ಎಂಬ ಎರಡು ತಂಡಗಳನ್ನಾಗಿ ಮಾಡಿ ಅದಕ್ಕೆ ಮಹಿಳೆಯರ ನಾಯಕತ್ವವನ್ನು ವಹಿಸಲಾಗಿತ್ತು. ಎರಡೂ ತಂಡಗಳು ಪ್ರತಿಯೊಂದು ಟಾಸ್ಕ್ನಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನೀಡಿದವು. ಕೆಲವನ್ನು ತನಿಷಾ ತಂಡ ಗೆದ್ದರೆ ಇನ್ನು ಕೆಲವನ್ನು ನಮ್ರತಾ ಗೌಡರ ತಂಡ ಗೆದ್ದು ಕೊಂಡಿತು. ಆದರೆ ಗುರುವಾರ ನಡೆದ ವಾರದ ಕೊನೆಯ ಟಾಸ್ಕ್ಗಳಲ್ಲಿ ಹೆಚ್ಚಿನ ಪಾಲನ್ನು ಗೆದ್ದಿದ್ದು ತನಿಷಾರ ತಂಡ.
ಮೊದಲಿಗೆ ನಡೆದ ಡ್ರಮ್ ಮೇಲೆ ನಿಂತು ಆಡುವ ಜೂಟಾಟದಲ್ಲಿ ತನಿಷಾ ಹಾಗೂ ನಮ್ರತಾ ಪರಸ್ಪರ ಸ್ಪರ್ಧಿಸಿದರು. ಆ ಆಟದಲ್ಲಿ ತನಿಷಾ ವಿಜಯಿಯಾದರು. ಆ ಬಳಿಕ ನಡೆದ ಬಕೆಟ್ ನಲ್ಲಿ ಒದ್ದೆ ಚೆಂಡು ಎಸೆಯುವ ಟಾಸ್ಕ್ನಲ್ಲಿಯೂ ತನಿಷಾ ತಂಡವೇ ಗೆದ್ದಿತು. ಆ ಟಾಸ್ಕ್ ಬಳಿಕ ತನಿಷಾರ ತಂಡವು ತಮ್ಮ ಅಧಿಕಾರ ಬಳಸಿ ವಿನಯ್ ಅವರನ್ನು ಮುಂದಿನ ವಾರ ಎಲ್ಲ ಟಾಸ್ಕ್ನಿಂದ ಹೊರಗಿಟ್ಟರು. ಅದರ ಬಳಿಕ ಆಡಲಾದ ಕಾಲಿನಿಂದ ಮರದ ಸಣ್ಣ ಆಕೃತಿಗಳನ್ನು ಜೋಡಿಸುವ ಟಾಸ್ಕ್ನಲ್ಲಿಯೂ ತನಿಷಾರ ತಂಡವೇ ಗೆದ್ದಿತು. ಮೈಖಲ್ ಅದ್ಭುತವಾಗಿ ಆಡಿ ಕಾರ್ತಿಕ್ರನ್ನು ಸೋಲಿಸಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್
ಎಲ್ಲ ಟಾಸ್ಕ್ ಗೆದ್ದ ತನಿಷಾರ ತಂಡದ ಸದಸ್ಯರಿಗೆ ನಾಯಕತ್ವದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ಜೊತೆಗೆ ಲಕ್ಷುರಿ ಟಾಸ್ಕ್ನಲ್ಲಿ ಭಾಗಿಯಾಗುವ ಅವಕಾಶವೂ ಸಹ ಲಭಿಸಿತು. ಆದರೆ ಇದರಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟ ಬಿಗ್ಬಾಸ್, ನಾಯಕನ ಆಯ್ಕೆಯ ಟಾಸ್ಕ್ಗೆ ನಾಲ್ಕು ಮಂದಿ ಮಾತ್ರವೇ ಬೇಕಿದ್ದು, ನಿಮ್ಮ ತಂಡದಿಂದ ಮೂವರನ್ನು ಟಾಸ್ಕ್ ನಿಂದ ಹೊರಗಿಡಿ ಎಂದರು. ಆಗ ತನಿಷಾ, ಡ್ರೋನ್ ಪ್ರತಾಪ್, ಇಶಾನಿ ಹಾಗೂ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ರನ್ನು ಟಾಸ್ಕ್ನಿಂದ ಹೊರಗಿಟ್ಟರು. ಇದೀಗ ತನಿಷಾ, ತುಕಾಲಿ ಸಂತು, ನೀತು ಹಾಗೂ ಮೈಖಲ್ ಅವರುಗಳು ನಾಯಕನ ಟಾಸ್ಕ್ನಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಮನೆಯ ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ಶುಕ್ರವಾರದ ಎಪಿಸೋಡ್ನಲ್ಲಿ ಗೊತ್ತಾಗಲಿದೆ. ಬಿಗ್ಬಾಸ್ ಕನ್ನಡ ಸೀಸನ್10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ