
ಬಿಗ್ಬಾಸ್ ಕನ್ನಡ ಮನೆಗೆ ಪ್ರತಿ ಬಾರಿಯೂ ಒಬ್ಬರಲ್ಲ ಒಬ್ಬರು ಗಾಯಕರು ಬರುವುದು ಖಾತ್ರಿ. ಅಸಲಿಗೆ ಬಿಗ್ಬಾಸ್ ಅತಿ ಹೆಚ್ಚು ಟ್ರೆಂಡ್ ಆಗುವುದು ಗಾಯಕರೇ. ಹನುಮಂತು, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದು ಕಪ್ ಅನ್ನೇ ಗೆದ್ದು ಹೋಗಿದ್ದು ಗೊತ್ತೇ ಇದೆ. ಉತ್ತರ ಕರ್ನಾಟಕದ ಈ ಅಪ್ಪಟ ಪ್ರತಿಭೆ ರಾಜ್ಯದ ಜನರ ಮನಸ್ಸು ಗೆದ್ದಿದ್ದ. ಇದೀಗ ಇಂಥಹದೇ ಮತ್ತೊಂದು ಪ್ರತಿಭೆ ಬಿಗ್ಬಾಸ್ ಮನಗೆ ಎಂಟ್ರಿ ಕೊಟ್ಟಿದೆ.
‘ನಾ ಡ್ರೈವರ, ನನ ಲವ್ವರ’ ಹಾಡು ಇಡೀ ಕರ್ನಾಟಕದಾದ್ಯಂತ ಹಿಟ್ ಆಗಿರುವುದು ಗೊತ್ತೆ ಇದೇ ಆ ಹಾಡು ಹಾಡಿ, ಅದರಲ್ಲಿ ನಟನೆಯನ್ನೂ ಮಾಡಿರುವ ಬೆಳಗಾವಿಯ ಮಾಲು ನಿಪನಾಳ ಅವರು ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ‘ನಾ ಡ್ರೈವರ’ ಹಾಡು ಅವರ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಯೂಟ್ಯೂಬ್ ನಲ್ಲಿ 200 ಮಿಲಿಯನ್ಗೆ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದು, ಭಾರಿ ಜನಪ್ರಿಯತೆ ತಂದುಕೊಟ್ಟಿದೆ. ತೀವ್ರ ಬಡತನದಲ್ಲಿದ್ದ ಮಾಲು ನಿಪನಾಳ ಅವರ ಜೀವನ ಉತ್ತಮಗೊಳ್ಳಲು ಆ ಹಾಡು ಸಹಾಯ ಮಾಡಿದೆ.
ಬೆಳಗಾವಿಯ ನಿಪನಾಳ ಅವರು ಜಾತ್ರೆಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರಂತೆ. ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುತ್ತಿದ್ದರಂತೆ. ಬಳಿಕ ‘ನಾ ಡ್ರೈವರ’ ಹಾಡನ್ನು ರಚಿಸಿ ರೆಕಾರ್ಡ್ ಮಾಡಿ ಯೂಟ್ಯೂಬ್ನಲ್ಲಿ ಬಿಟ್ಟಿದ್ದಾರೆ ಅದು ದೊಡ್ಡ ಹಿಟ್ ಆಗಿದೆ. ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಸಿನಿಮಾನಲ್ಲಿ ‘ಹಿತಲಕ ಕರಿಬ್ಯಾಡ’ ಹಾಡನ್ನೂ ಸಹ ನಿಪನಾಳ ಅವರೇ ಹಾಡಿದ್ದಾರೆ. ಆ ಹಾಡು ಸಹ ಯೂಟ್ಯೂಬ್ನಲ್ಲಿ ಭಾರಿ ಯಶಸ್ಸು ಗಳಿಸಿದೆ.
ಇದನ್ನೂ ಓದಿ:Ashwini Profile: ಜೀವನದಲ್ಲಿ ಹೋರಾಡಿ ಗೆದ್ದ ಅಶ್ವಿನಿ, ಈಗ ಬಿಗ್ಬಾಸ್ ಮನೆಯಲ್ಲಿ
ಪ್ರೀತಿಸಿ ಮದುವೆ ಆಗಿರುವ ನಿಪನಾಳ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ನಿಪನಾಳ ಅವರಿಗೆ ಕೋಪ ತುಸು ಹೆಚ್ಚಂತೆ. ಈ ಹಿಂದೆ ನಿಪನಾಳ ಅವರು ಅಣ್ಣ-ತಂಗಿಯ ಮೇಲೆ ಹಲ್ಲೆ ಮಾಡಿದ್ದು ಸುದ್ದಿ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದೀಗ ಬಿಗ್ಬಾಸ್ಗೆ ಬಂದಿರುವ ನಿಪನಾಳ ಅವರು ಚೆನ್ನಾಗಿ ಆಡುವ ಭರವಸೆ ಹೊಂದಿದ್ದಾರಂತೆ. ಅಂದಹಾಗೆ ನಿಪನಾಳ ಅವರು ಸುದೀಪ್ ಅವರ ದೊಡ್ಡ ಅಭಿಮಾನಿ ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:15 pm, Sun, 28 September 25