ಬಿಗ್ಬಾಸ್ ಮನೆಯಲ್ಲಿ ಈ ವಾರ ಸಂಭ್ರಮವೋ ಸಂಭ್ರಮ. ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಇಂದು (ಮಂಗಳವಾರ) ಮೊದಲಿಗೆ ಭವ್ಯಾರ ಸಹೋದರಿ, ಸಹೋದರಿಯ ಮಗಳು ಮತ್ತು ಅವರ ತಾಯಿ ಆಗಮಿಸಿದರು. ಈ ವೇಳೆ ಭವ್ಯಾ ಬಹಳ ಖುಷಿಪಟ್ಟರು. ಭವ್ಯಾ ಅವರ ಮನೆಯವರು ಸಹ ಬಿಗ್ಬಾಸ್ ಸ್ಪರ್ಧಿಗಳೊಡನೆ ಬಹಳ ಚೆನ್ನಾಗಿ ಬೆರೆತರು. ಆ ನಂತರ ತ್ರಿವಿಕ್ರಮ್ ಅವರ ತಾಯಿ ಬಂದರಾದರೂ ಅವರನ್ನು ಮಾತನಾಡಿಸಲು ತ್ರಿವಿಕ್ರಮ್ಗೆ ಸಾಧ್ಯ ಆಗಲಿಲ್ಲ.
ತ್ರಿವಿಕ್ರಮ್ ಅವರ ತಾಯಿ ಬರುವ ಮುಂಚೆ ತ್ರಿವಿಕ್ರಮ್ ಹಾಗೂ ಅವರ ತಾಯಿ ಒಟ್ಟಿಗಿರುವ ಫೋಟೊ ಒಂದನ್ನು ಕಳಿಸಲಾಯ್ತು. ತ್ರಿವಿಕ್ರಮ್, ತನ್ನ ತಾಯಿ ಬರುತ್ತಾರೆಂದು ಬಹಳ ಖುಷಿಯಲ್ಲಿದ್ದರು. ಆದರೆ ಬಿಗ್ಬಾಸ್, ತ್ರಿವಿಕ್ರಮ್ ಅನ್ನು ಆಕ್ಟಿವಿಟಿ ರೂಂಗೆ ಕರೆದರು. ಅಲ್ಲಿ ಅವರಿಗೆ ಅವರದ್ದೇ ತಾಯಿಯ ಚಿತ್ರದ ತುಣುಕುಗಳನ್ನು ನೀಡಿ, ಈ ಫಸಲ್ ಅನ್ನು ಹತ್ತು ನಿಮಿಷದಲ್ಲಿ ಪೂರೈಸಿದರೆ ಮಾತ್ರವೇ ನಿಮ್ಮ ತಾಯಿಯನ್ನು ಭೇಟಿ ಆಗಲು ಅನುಮತಿ ನೀಡಲಾಗುತ್ತದೆ ಎಂದು ಸವಾಲು ಹಾಕಲಾಯ್ತು.
ಫಸಲ್ ಪ್ರಾರಂಭ ಆಗುವ ತುಸು ಸಮಯದ ಮುಂಚೆ ತ್ರಿವಿಕ್ರಮ್ ತಾಯಿ ಬಿಗ್ಬಾಸ್ ಮನೆ ಒಳಗೆ ಬಂದರು. ಎಲ್ಲರೂ ಅವರ ತಾಯಿಯನ್ನು ಚೆನ್ನಾಗಿ ಮಾತನಾಡಿಸುತ್ತಿದ್ದರು. ಆದರೆ ಅದನ್ನೆಲ್ಲ ಟಿವಿ ಮೂಲಕ ನೋಡುತ್ತಿದ್ದ ತ್ರಿವಿಕ್ರಮ್ ಫಸಲ್ ಪೂರೈಸುವಲ್ಲಿ ನಿರತರಾಗಿದ್ದರು. ಆದರೆ ಬಿಗ್ಬಾಸ್ ನೀಡಿದ ನಿಗದಿತ ಸಮಯದಲ್ಲಿ ತ್ರಿವಿಕ್ರಮ್ಗೆ ಫಸಲ್ ಪೂರೈಸಲು ಸಾಧ್ಯವಾಗಲಿಲ್ಲ. ಆಗ ಬಿಗ್ಬಾಸ್, ತ್ರಿವಿಕ್ರಮ್ ಅವರ ತಾಯಿಯನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುವಂತೆ ಹೇಳಿದರು. ಅಂತೆಯೇ ಬೇಸರದಲ್ಲಿಯೇ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋದರು. ಆಕ್ಟಿವಿಟಿ ರೂಂನಲ್ಲಿ ತ್ರಿವಿಕ್ರಮ್ ಅತ್ತು, ಕರೆದರು, ಇನ್ನೊಂದು ಅವಕಾಶಕ್ಕಾಗಿ ಗೋಗರೆದರೂ ಸಹ ಬಿಗ್ಬಾಸ್ ಅವಕಾಶ ನೀಡಲಿಲ್ಲ.
ಇದನ್ನೂ ಓದಿ:ಎದುರಾಳಿಗಳ ಕಾಟಕ್ಕೆ ಬಿಗ್ಬಾಸ್ ಮುಂದೆ ಕಣ್ಣೀರು ಹಾಕಿದ ಭವ್ಯಾ
ತ್ರಿವಿಕ್ರಮ್ ಅವರ ತಾಯಿ ಬಿಗ್ಬಾಸ್ ಮನೆಯಿಂದ ಹೋಗುವ ಮುಂಚೆ, ನನಗೆ ಬಹಳ ಸಂಕಟ ಆಗುತ್ತಿದೆ. ಆದರೆ ಮಗನನ್ನು ಕೇಳಿದೆ ಎಂದು ಹೇಳಿ ಎಂದು ಎಲ್ಲರಿಗೂ ಹೇಳಿಯೇ ಹೋದರು. ಅವರು ಹೋದ ಮೇಲೆ ಹೊರಗೆ ಬಂದ ತ್ರಿವಿಕ್ರಮ್ಗೆ, ಅವರ ತಾಯಿ ಕೊಟ್ಟ ಸರ ಇನ್ನಿತರೆ ವಸ್ತುಗಳನ್ನು ನೀಡಲಾಯ್ತು. ಈ ಬಗ್ಗೆ ತ್ರಿವಿಕ್ರಮ್ ಬೇಸರ ಪಟ್ಟುಕೊಳ್ಳುತ್ತಿರುವಾಗಲೇ ತ್ರಿವಿಕ್ರಮ್ ಅವರ ತಾಯಿಯನ್ನು ಗುಟ್ಟಾಗಿ ಒಳಗೆ ಕಳಿಸಿದರು ಬಿಗ್ಬಾಸ್. ಆಗ ಮಗನ್ನು ತಬ್ಬಿ ಬಹಳ ಅತ್ತುಬಿಟ್ಟರು ಅವರ ತಾಯಿ. ಆ ದೃಶ್ಯ, ಬಿಗ್ಬಾಸ್ ಸ್ಪರ್ಧಿಗಳಿಗೆ ಕಣ್ಣೀರು ತರಿಸಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ