ಊಟಕ್ಕೆ ಉಪ್ಪಿನಕಾಯಿ ಇದ್ದರೆ ಅಂತಹ ಊಟ ಇಷ್ಟ ಆಗುತ್ತದೆ. ಆದರೆ, ಊಟವೆಲ್ಲ ಕೇವಲ ಉಪ್ಪಿನ ಕಾಯಿಯೇ ಆಗಿ ಬಿಟ್ಟರೆ? ಆಗ ಊಟ ಯಾರಿಗೂ ಇಷ್ಟ ಆಗುವುದಿಲ್ಲ. ಈ ಬಾರಿಯ ಬಿಗ್ ಬಾಸ್ ಕೂಡ ಹಾಗೆಯೇ ಆಗಿದೆ. ಬಿಗ್ ಬಾಸ್ನಲ್ಲಿ ಡ್ರಾಮಾ, ಪ್ರ್ಯಾಂಕ್ಗಳ ಅಬ್ಬರವೇ ಹೆಚ್ಚಾಗಿದೆ. ಇದು ಅನೇಕರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಬಿಗ್ ಬಾಸ್ನ ಎಲ್ಲರೂ ಶಪಿಸುತ್ತಿದ್ದಾರೆ. ಟ್ವಿಸ್ಟ್ ಕೊಡುವ ನೆಪದಲ್ಲಿ ವೀಕ್ಷಕರನ್ನು ಫ್ರಸ್ಟ್ರೇಷನ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಬಿಗ್ ಬಾಸ್ ಎಂದರೆ ಒಂದಷ್ಟು ಡ್ರಾಮಾಗಳು ಕಾಮನ್. ಇದು ಪ್ರತಿ ವರ್ಷವೂ ನಡೆದುಕೊಂಡು ಬಂದಿದೆ. ಅಲ್ಲಲ್ಲಿ ಪ್ರ್ಯಾಂಕ್ಗಳು, ಡ್ರಾಮಾಗಳು ಇದ್ದೇ ಇರುತ್ತವೆ. ಆದರೆ, ಸೀಸನ್ ಉದ್ದಕ್ಕೂ ಈ ಬಾರಿ ಡ್ರಾಮಾ ನಡೆದಿದ್ದೇ ಹೆಚ್ಚು. ಈ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಟಿಆರ್‌ಪಿಗಾಗಿ ಈ ಮಟ್ಟಕ್ಕೆ ಹೋಗಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ರಂಜಿತ್ ಅವರು ಹೊಡೆದುಕೊಂಡು ಬಿಗ್ ಬಾಸ್ನಿಂದ ಹೊರ ಹೋದರು. ಜಗದೀಶ್ ಅವಾಚ್ಯ ಶಬ್ದ ಬಳಸಿ ಮನೆಯಿಂದ ಹೊರ ದೂಡಲ್ಪಟ್ಟರು. ಹಾಗೆ ಹೊಡೆದವರನ್ನೆಲ್ಲ ಹೊರಕ್ಕೆ ಕಳುಹಿಸುವುದಾದರೆ ಭವ್ಯಾ ಅವರನ್ನೂ ಕಳುಹಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಮೋಸ ಮಾಡಿ ಗೆಲ್ಲುವ ವಿಚಾರವಾಗಿ ಹೇಳೋದಾದರೆ ಭವ್ಯಾ ಕೂಡ ಮೋಸ ಮಾಡಿ ಕ್ಯಾಪ್ಟನ್ ಆದರು. ಆಗ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದು ಬಿಟ್ಟರೆ ಇನ್ನೇನು ಆಗಿಲ್ಲ. ಅವರ ಕ್ಯಾಪ್ಟನ್ಸಿ ಮುಂದುವರಿದಿದೆ. ಕಳೆದ ಸೀಸನ್ನಲ್ಲಿ ವರ್ತೂರು ಸಂತೋಷ್ ಇದೇ ರೀತಿ ಮಾಡಿದಾಗ ಕ್ಯಾಪ್ಟನ್ ರೂಂನ ಬಾಗಿಲನ್ನು ಹಾಕಿಸಲಾಗಿತ್ತು.
ಇದನ್ನೂ ಓದಿ: ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್ಗೆ ಸುತ್ತಿ ಬಂತು ಕರ್ಮ
ತ್ರಿವಿಕ್ರಂ ಅವರು ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ರೀ ಮ್ಯಾಚ್ ಆಡಿಸಲಾಯಿತು. ಅದು ಕೂಡ ತಕ್ಷಣವೇ. ಆದರೆ, ಧನರಾಜ್ ವಿಚಾರದಲ್ಲಿ ಆಟ ನಡೆಯುವಾಗ ಸುಮ್ಮನಿದ್ದ ಬಿಗ್ ಬಾಸ್ ಈಗ ಎಲಿಮಿನೇಷ್ ಪ್ರಕ್ರಿಯೆ ಬಂದಾಗ ಅದನ್ನು ಎತ್ತಿದರು. ಈ ಕಾರಣ ನೀಡಿ ಸಂಪೂರ್ಣ ಎಲಿಮಿನೇಷನ್ ಪ್ರಕ್ರಿಯೆ ನಿಲ್ಲಿಸಲಾಯಿತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಈ ಬಾರಿ ನಡೆದಷ್ಟು ಎಲಿಮಿನೇಷನ್ ಪ್ರ್ಯಾಂಕ್ ಇನ್ಯಾವ ಸೀಸನ್ಗಳಲ್ಲೂ ನಡೆದಿಲ್ಲ. ಈ ಮೊದಲ ಸೀನಸ್ಗಳಲ್ಲಿ ಎಲ್ಲಾದರೂ ಒಮ್ಮೆ ಪ್ರ್ಯಾಂಕ್ ನಡೆಯುತ್ತಿತ್ತು. ಅದನ್ನು ಹೊರತುಪಡಿಸಿ ಪ್ರತಿ ವಾರವೂ ಸರಿಯಾಗಿ ಎಲಿಮಿನೇಷನ್ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಸರಿಯಾಗಿ ಎಲಿಮಿನೇಷನ್ ನಡೆದೇ ಇಲ್ಲ. ತ್ರಿವಿಕ್ರಂ, ಚೈತ್ರಾ ಭವ್ಯಾಗೆ ಎಲಿಮಿನೇಷ್ ಪ್ರ್ಯಾಂಕ್ ಮಾಡಲಾಯಿತು. ಈಗ ಮಧ್ಯವಾರದ ಎಲಿಮಿನೇಷ್ ನಡೆಸುತ್ತೇನೆ ಎಂದಿದ್ದ ಬಿಗ್ ಬಾಸ್ ಅದನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಮತ್ತೆ ನಾಮಿನೇಷನ್ ಪ್ರಕ್ರಿಯೆ ಆರಂಭಿಸಿದ್ದಾರೆ. ಎಲ್ಲರನ್ನೂ ನಾಮಿನೇಟ್ ಮಾಡಿ, ವೋಟಿಂಗ್ ಮಾಡಿ ಮುಗಿದಮೇಲೆ ಮತ್ತೇಕೆ ನಾಮಿನೇಷನ್ ಪ್ರಕ್ರಿಯೆ ಎಂಬ ಪ್ರಶ್ನೆಯೂ ಮೂಡುತ್ತದೆ. ಇಷ್ಟೊಂದು ಡ್ರಾಮಾಗಳನ್ನು ನೋಡಿ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.
ಇಷ್ಟೆಲ್ಲ ಮಾಡೋದು ಟಿಆರ್ಪಿಗೆ ಅಲ್ಲ ಎಂದು ಮುಂದೆ ಸ್ಪಷ್ಟನೆ ಕೊಟ್ಟರೂ ಅಚ್ಚರಿ ಏನಿಲ್ಲ. ಈ ಮೊದಲು ಸುದೀಪ್ ಅವರು, ‘ನಾವು ಏನೇ ಮಾಡಿದರೂ ಅದು ಟಿಆರ್ಪಿಗೆ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಡ್ರಾಮಾಗಳನ್ನು ನೋಡಿದರೆ ಅದು ಕೇವಲ ಟಿಆರ್ಪಿ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.