ಕ್ರೀಡಾಪಟು ಆಗಬೇಕಿದ್ದವರು ಬಿಗ್ಬಾಸ್ ಆಡಲು ಬಂದಿದ್ದಾರೆ: ಯಾರು ಈ ರಿಷಾ ಗೌಡ?
Bigg Boss Kannada season 12: ಬಿಗ್ಬಾಸ್ ಮನೆಯಿಂದ ಈ ವಾರ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ. ಇದೀಗ ಅಷ್ಟೇ ಸಂಖ್ಯೆಯ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಮೂವರು ಸ್ಪರ್ಧಿಗಳಲ್ಲಿ ರಿಷಾ ಗೌಡ ಸಹ ಒಬ್ಬರು. ಅಂದಹಾಗೆ ಯಾರು ಈ ರಿಷಾ ಗೌಡ? ಅವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ...

ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಈ ವಾರ ಈಗಾಗಲೇ ಮೂರು ಮಂದಿ ಮನೆಯಿಂದ ಹೊರಗೆ ಹೋಗಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಡಾಗ್ ಸತೀಶ್ ಹೊರ ಹೋದರೆ ನಿನ್ನೆ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ ಅವರು ಹೊರಗೆ ಹೋಗಿದ್ದಾರೆ. ಮೂರು ಜನ ಹೊರಗೆ ಹೋದ ಬೆನ್ನಲ್ಲೆ ಮೂವರು ಹೊಸ ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಕಳಿಸಲಾಗಿದೆ. ಇತ್ತೀಚೆಗಷ್ಟೆ ಕ್ವಾಟ್ಲೆ ಕಿಚನ್ ಶೋ ಗೆದ್ದ ನಟ ರಘು ಅವರು ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಅವರ ಬೆನ್ನಲ್ಲೆ ನಟಿ ರಿಷಾ ಗೌಡ ಸಹ ಬಿಗ್ಬಾಸ್ ಮನೆ ಸೇರಿದ್ದಾರೆ. ಅಷ್ಟಕ್ಕೂ ಯಾರು ಈ ರಿಷಾ ಗೌಡ.
ರಿಷಾ ಗೌಡ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ. ಅಸಲಿಗೆ ರಿಷಾ ಗೌಡ ಕ್ರೀಡಾಪಟು ಆಗಬೇಕೆಂಬ ಕನಸು ಹೊತ್ತಿದ್ದವರು. ಅವರು ಸ್ಪಿರಂಟರ್ ಆಗಿದ್ದರು. ವೇಗದ ಓಟಗಾರ್ತಿ ಆಗಿದ್ದರು. ಪ್ರತಿ ದಿನ ಶಾಲೆಗೆ ಹೋಗುವುದು ಅಲ್ಲಿಂದ ಮರಳಿ ಪ್ರಾಕ್ಟಿಸ್ ಮಾಡುವುದೇ ಅವರ ಕೆಲಸ ಆಗಿತ್ತು. ಆ ಜೀವನ ರಿಷಾಗೆ ಬಲು ಇಷ್ಟವೂ ಆಗಿತ್ತಂತೆ. ದೊಡ್ಡ ಕ್ರೀಡಾಪಟು ಆಗಬೇಕೆಂಬ ಕನಸು ಅವರಿಗೆ ಇತ್ತಂತೆ. ಆದರೆ ವಿಧಿ ಅವರನ್ನು ಮನೊರಂಜನಾ ಲೋಕಕ್ಕೆ ಕರೆದುಕೊಂಡು ಬಂದಿದೆ.
ರಿಷಾ ಗೌಡಗೆ ಇಂಜುರಿ ಒಂದು ಆಯ್ತಂತೆ. ಲಿಗಮೆಂಟ್ ಫ್ರ್ಯಾಕ್ಚರ್ ಆಗಿದ್ದಕ್ಕೆ ಅವರು ಕ್ರೀಡೆ ಬಿಡಬೇಕಾಯ್ತಂತೆ. ಅದರ ಜೊತೆಗೆ ದ್ವಿತೀಯ ಪಿಯೂಸಿಯಲ್ಲಿಯೂ ಒಳ್ಳೆಯ ಅಂಕಗಳು ಬಂದಿದ್ದರಿಂದ ಅವರು ಕ್ರೀಡೆ ಬಿಟ್ಟರಂತೆ. ಆದರೆ ಎರಡು ವರ್ಷಗಳ ಹಿಂದೆ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಗ್ಲಾಮರ್ ಲೋಕದಲ್ಲಿಯೇ ಮಿಂಚಬೇಕೆಂದು ಕೆಲವಾರು ಸಿನಿಮಾಗಳಲ್ಲಿ ಸಹ ರಿಷಾ ಗೌಡ ನಟಿಸಿದ್ದಾರೆ. ‘ಆಸ್ಟಿನ್ ನ ಮಹಾನ್ ಮೌನ’, ‘ಬೆಂಗಳೂರು ಇನ್’, ‘ಜೂನಿಯರ್’, ‘ಗ್ಯಾಂಗ್ಸ್ಟರ್ ಆಫ್ ರಾಜಧಾನಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಈಗ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳನ್ನು ಚೆನ್ನಾಗಿ ಅರಿತುಕೊಂಡಿರುವುದಾಗಿ ರಿಷಾ ಗೌಡ ಹೇಳಿದರು. ಎಲ್ಲರಿಗೂ ತಮಗೆ ತೋಚಿದಂತೆ ಅಂಕಗಳನ್ನು ನೀಡಿದ ರಿಷಾ ಗೌಡ, ಕಮಿಡಿಯನ್ ಗಿಲ್ಲಿಗೆ ಎಂಟು ಅಂಕಗಳನ್ನು ನೀಡಿದರು. ಅಶ್ವಿನಿ ಗೌಡಗೆ ಕೇವಲ 1 ಅಂಕ ನೀಡಿದರು. ‘ಬಿಗ್ಬಾಸ್ ಮನೆಯ ಒಳಗೆ ಹೋಗಿ ಅಶ್ವಿನಿಗೆ ತೋರಿಸುತ್ತೀನಿ ನೀವು ಇಲ್ಲಿ ಬಾಸ್ ಅಲ್ಲ, ಇಲ್ಲಿ ಬಾಸ್ ಆಗಿರುವುದು ಕೇವಲ ಬಿಗ್ಬಾಸ್ ಮಾತ್ರ ಎಂದು’ ಎಂದು ಹೇಳಿದ್ದಾರೆ.
ರಿಷಾ ಅವರ ಪ್ರಕಾರ, ಅವರಿಗೆ ಹೆಚ್ಚು ಕೋಪ ಅಂತೆ ಯಾವುದಕ್ಕೂ ಕಾಂಪ್ರೊಮೈಸ್ ಸಹ ಆಗುವುದಿಲ್ಲವಂತೆ. ಅಲ್ಲದೆ ಎಲ್ಲರೊಟ್ಟಿಗೆ ನಿಷ್ಠುರವಾಗಿರುತ್ತಾರಂತೆ. ಯಾವುದೇ ವಿಷಯ ಹೇಳಲು ನಾನು ಹಿಂದೆ-ಮುಂದೆ ನೋಡುವುದಿಲ್ಲ. ನಾನು ದೊಡ್ಡವರಿಗೆ ಬಿಟ್ಟರೆ ಇನ್ಯಾರಿಗೂ ಗೌರವ ಸಹ ಕೊಡುವುದಿಲ್ಲ ಎಂದೆಲ್ಲ ಹೇಳಿದ್ದಾರೆ. ರಿಷಾ ನೋಡಲು ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣುತ್ತಿದ್ದು, ಬಿಗ್ಬಾಸ್ ಮನೆಯ ಒಳಗೆ ಹೇಗಿರುತ್ತಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




