ಬಿಗ್ಬಾಸ್ (BiggBoss) ಮನೆಯಲ್ಲಿ ಗಂಧರ್ವರು-ರಾಕ್ಷಸರು ಟಾಸ್ಕ್ನಲ್ಲಿ ಎರಡೂ ತಂಡಗಳ ಸ್ಪರ್ಧಿಗಳ ವರ್ತನೆ ಮಿತಿ ಮೀರಿದೆ. ‘ಚೇರ್ ಆಫ್ ಥಾನ್ಸ್’ ಆಟದಲ್ಲಿ ಮೊದಲಿಗೆ ಸಂಗೀತ ಮತ್ತು ತಂಡ ವರ್ತೂರು ಸಂತೋಷ್ರ ತಂಡದ ಮೇಲೆ ನೀರು ಎರಚಿ ಅವರನ್ನು ಕುರ್ಚಿಯಿಂದ ಏಳಿಸುವ ಪ್ರಯತ್ನ ಮಾಡಿದ್ದರು. ಆಟದಲ್ಲಿ ವರ್ತೂರು ಸಂತೋಷ್ ಮೇಲೆದ್ದಿದ್ದರು, ಪವಿ ಚೆನ್ನಾಗಿ ಆಡಿದ್ದರಿಂದ ವರ್ತೂರು ಸಂತೋಷ್ರ ತಂಡ ಮುನ್ನಡೆ ಪಡೆದುಕೊಂಡಿತ್ತು.
ಅದೇ ಟಾಸ್ಕ್ ಅನ್ನು ಮತ್ತೊಮ್ಮೆ ಆಡಿಸಿ, ಸಂಗೀತಾ ತಂಡವನ್ನು ಕುರ್ಚಿಯಲ್ಲಿ ಕೂರಿಸಲಾಗಿತ್ತು. ಅವರಿಗೆ ನೀರು ಎರಚಿ ಏಳಿಸುವ ಕಾರ್ಯ ವರ್ತೂರು ಸಂತೋಷ್ ತಂಡದ್ದಾಗಿತ್ತು. ತಂಡದ ವಿನಯ್, ಮೈಖಲ್, ನಮ್ರತಾ ಹಾಗೂ ಸ್ವತಃ ವರ್ತೂರು ಸಂತೋಷ್ ಅವರುಗಳು ತುಸು ಹೆಚ್ಚೇ ಬಲ ಪ್ರದರ್ಶಿಸಿ ಆಡಿದರು. ನೀರಿಗೆ ವಿಪರೀತ ಸೋಪು ಬೆರೆಸಿ, ಕುರ್ಚಿಯ ಮೇಲೆ ಮೂತಿದ್ದ ಸಿರಿ, ಪ್ರತಾಪ್, ಕಾರ್ತಿಕ್ ಹಾಗೂ ಸಂಗೀತಾ ಮೇಲೆ ಎರಚಿದರು.
ಮೊದಲಿಗೆ ಸಂಗೀತಾರನ್ನು ಟಾರ್ಗೆಟ್ ಮಾಡಿದ ವರ್ತೂರು ತಂಡದ ವಿನಯ್ ಹಾಗೂ ಮೈಖಲ್, ಬಲ ಬಳಸಿ ಜೋರಾಗಿ ನೀರು ಎರಚಿದರು. ವಿನಯ್ ಅಂತೂ ಸಂಗೀತಾ ಉಸಿರೆಳೆಯುವುದನ್ನೇ ಕಾದು ಅದೇ ಸಮಯಕ್ಕೆ ನೀರು ಮೂಗು ಮತ್ತು ಬಾಯಿಗೆ ಎರಚಿದರು. ಆ ನಂತರ ಬಂದ ನಮ್ರತಾ, ಪವಿ, ವರ್ತೂರು ಸಹ ಅದನ್ನೇ ಮಾಡಿ ಸೋಪಿನ ನೊರೆ ಕಣ್ಣು, ಬಾಯಿ, ಮೂಗಿಗೆ ಹೋಗುವಂತೆ ಮಾಡಿ ಸಂಗೀತಾ ಮೇಲೇಳುವಂತೆ ಮಾಡಿದರು.
ಇದನ್ನೂ ಓದಿ:ಈ ವಾರ ಬಿಗ್ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್ಗೆ ಎಷ್ಟನೆ ಸ್ಥಾನ?
ಬಳಿಕ ಡ್ರೋನ್ ಪ್ರತಾಪ್ರ ಬಳಿ ಹೋದ ತಂಡ ಅವರ ಮೇಲೂ ನೀರಿನ ಸತತ ದಾಳಿ ಮಾಡಿತು, ಪ್ರತಾಪ್, ತಾನು ಕೂತಿದ್ದ ಕುರ್ಚಿಯಲ್ಲಿಯೇ ವಿಲ-ವಿಲನೆ ಒದ್ದಾಡಿದರೂ ಸಹ ಆಟಗಾರರು ನೀರು ಎರಚುವುದು ಬಿಡಲಿಲ್ಲ. ಪ್ರತಾಪ್ಗೆ ಆಗುತ್ತಿದ್ದ ಹಿಂಸೆ ಗಮನಿಸಿ, ಬಿಗ್ಬಾಸ್ ಆಟವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಹೇಳಿದರು. ಬಿಗ್ಬಾಸ್ನ ನಿರ್ಣಯ ವರ್ತೂರು ಸಂತೋಷ್ ತಂಡಕ್ಕೆ ಸಮಾಧಾನವಾಗಲಿಲ್ಲ.
ಸೋಪಿನ ಪುಡಿ ಬೆರೆಸಿದ ನೀರು ಕಣ್ಣು, ಬಾಯಿ, ಮೂಗಿಗೆಲ್ಲ ಹೋದ ಕಾರಣದಿಂದ ಸಂಗೀತಾ ಹಾಗೂ ಪ್ರತಾಪ್ ತೀವ್ರ ಬಾಧೆಯಲ್ಲಿದ್ದರು. ಸೀಕ್ರೆಟ್ ರೂಂಗೆ ಹೋಗಿ ಪ್ರತಾಪ್ ಕಣ್ಣೀರು ಸಹ ಹಾಕಿದರು. ಅವರನ್ನು ಅಗತ್ಯ ಚಿಕಿತ್ಸೆಗಾಗಿ ಹೊರಗೆ ಕಳಿಸಿದ ಕಾರಣ ಆ ನಂತರದ ಇಡೀ ದಿನ ಅವರು ಬಿಗ್ಬಾಸ್ ಮನೆಯಲ್ಲಿ ಕಂಡು ಬರಲಿಲ್ಲ. ಮನೆಯ ಇತರೆ ಕೆಲವು ಸ್ಪರ್ಧಿಗಳು ಅವರಿಗೆ ಏನೂ ಆಗದಿದ್ದರೆ ಸಾಕೆಂದು ಮಾತನಾಡಿಕೊಂಡರು ಸಹ. ಈ ಘಟನೆ ಮಂಗಳವಾರ ನಡೆದಿದ್ದು, ಅದರ ಪ್ರಸಾರ ಗುರುವಾರ ಆಗಿರುವ ಕಾರಣ, ಶನಿವಾರದ ವೀಕೆಂಡ್ ಪಂಚಾಯ್ತಿಗೆ ಇಬ್ಬರೂ ಹಾಜರಾಗುವ ಸಾಧ್ಯತೆ ಇದೆ. ಡ್ರೋನ್ ಪ್ರತಾಪ್ ಈಗಾಗಲೇ ಬಿಗ್ಬಾಸ್ ಮನೆಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಸಂಗೀತಾ ತಂಡಕ್ಕಿಂತಲೂ ಹೆಚ್ಚು ಕ್ರೂರವಾಗಿ ವರ್ತೂರು ತಂಡ ಆಡಿದ್ದು ಮೇಲ್ನೋಟಕ್ಕೆ ಕಾಣಿಸಿತು. ಶನಿವಾರದ ಎಪಿಸೋಡ್ನಲ್ಲಿ ನಟ ಸುದೀಪ್ ಆಟಗಾರರ ಈ ವರ್ತನೆಯನ್ನು ಹೇಗೆ ವಿಮರ್ಶಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 pm, Fri, 8 December 23