AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವುಗಳ ಪ್ರಪಂಚದ ಬಗ್ಗೆ ಅಪರೂಪದ ಮಾಹಿತಿಗಳನ್ನು ತೆರೆದಿಟ್ಟ ಸ್ನೇಕ್ ಶ್ಯಾಮ್

Bigg Boss 10: ಬಿಗ್​ಬಾಸ್ 10 ಮನೆಯಲ್ಲಿರುವ ಸ್ನೇಕ್ ಶಾಮ್, ಕರ್ನಾಟಕದ ಅಪರೂಪದ ಸಾಧಕ. 58 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಸ್ನೇಕ್ ಶಾಮ್, ಉರಗ ಪ್ರಪಂಚದ ಬಗ್ಗೆ ಅಗಾಧವಾದ ಮತ್ತು ಅಪರೂಪದ ಮಾಹಿತಿ ಹೊಂದಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಹಾವುಗಳ ಬಗೆಗೆ ತಮಗಿರುವ ಮಾಹಿತಿಯನ್ನು ತೆರೆದಿಟ್ಟಿದ್ದಾರೆ ಸ್ನೇಕ್ ಶಾಮ್.

ಹಾವುಗಳ ಪ್ರಪಂಚದ ಬಗ್ಗೆ ಅಪರೂಪದ ಮಾಹಿತಿಗಳನ್ನು ತೆರೆದಿಟ್ಟ ಸ್ನೇಕ್ ಶ್ಯಾಮ್
ಮಂಜುನಾಥ ಸಿ.
|

Updated on:Oct 14, 2023 | 7:36 PM

Share

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರಲ್ಲಿ ಉರಗ ರಕ್ಷಕ ಸ್ನೇಕ್ ಶ್ಯಾಮ್ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಮನೆಯ ಹಿರಿಯ ಸದಸ್ಯರಾಗಿರುವ ಸ್ನೇಕ್ ಶ್ಯಾಮ್ ನಿಧಾನಕ್ಕೆ ಎಲ್ಲರೊಟ್ಟಿಗೆ ಬೆರೆಯಲು ಪ್ರಾರಂಭಿಸಿದ್ದಾರೆ. ಪ್ರಸ್ತುತ ಬಿಗ್​ಬಾಸ್ ಮನೆಯಲ್ಲಿರುವ ಎಲ್ಲ ಸದಸ್ಯರ ಪೈಕಿ ನಿಜವಾದ ಸಾಧಕ ಸ್ನೇಕ್ ಶ್ಯಾಮ್ ಎಂದರೆ ತಪ್ಪಾಗಲಾರದು. ಕರ್ನಾಟಕ ಮಾತ್ರವೇ ಅಲ್ಲದೆ ಭಾರತದ ಅಪರೂಪದ ಉರಗ ರಕ್ಷಕ ಸ್ನೇಕ್ ಶ್ಯಾಮ್. ಹಾವುಗಳ ರಕ್ಷಣೆಯ ಜೊತೆಗೆ ಅವುಗಳ ಜೀವನ ಚಕ್ರದ ಬಗ್ಗೆಯೂ ಅಪಾರ ಜ್ಞಾನವನ್ನು ಸ್ನೇಕ್ ಶ್ಯಾಮ್ ಹೊಂದಿದ್ದಾರೆ.

58 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸಾಧಕ ಸ್ನೇಕ್‌ ಶ್ಯಾಮ್‌ ಈ ಸಲ ಬಿಗ್‌ಬಾಸ್‌ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿಯಾಗಿದ್ದಾರೆ. ಬಿಗ್​ಬಾಸ್ ಮನೆಯಲ್ಲೇನೋ ಅವರು ಅಸಮರ್ಥರ ಗುಂಪಿನಲ್ಲಿ ಇರಬಹುದು. ಆದರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಮಹಾ ಸಮರ್ಥರು. ತಮ್ಮ ಉರಗ ಜ್ಞಾನ ಎಂಥಹದ್ದು ಎಂಬುದನ್ನು ಮನೆಯ ಸದಸ್ಯರಿಗೆ ಪರಿಚಯ ಮಾಡಿಸಿದ್ದಾರೆ ಸ್ನೇಕ ಶ್ಯಾಮ್.

ಸ್ಪರ್ಧಿಗಳೆಲ್ಲ ಈಜುಕೊಳದ ಬಳಿ ಆರಮವಾಗಿ ಕೂತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್‌ ಅವರು ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ನಿರರ್ಗಳವಾಗಿ ತೆರೆದಿಟ್ಟಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆರಗಾದರು. ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೀಟಿಂಗ್ ಎರಡಕ್ಕೇನೇ. ನಮ್ ಥರ ಅಲ್ಲ, ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. ನಮ್ ಥರ ಒಂಬತ್ತು ತಿಂಗ್ಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ ಎಂದು ಮಾಹಿತಿ ನೀಡಿದರು ಸ್ನೇಕ್ ಶಾಮ್.

ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಉರಗ ಪ್ರೇಮಿ ಸ್ನೇಕ್ ಶ್ಯಾಮ್: ಹಿರಿಯ ಸದಸ್ಯನ ಒಪ್ಪಿ-ಅಪ್ಪುತ್ತಾರಾ ಮನೆ ಮಂದಿ

ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರತ್ತೆ. ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ. ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕತ್ತೆ. ಅವು ಯಾವವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು -ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತೆ. ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ ಎಂದು ಸ್ನೇಕ್ ಶ್ಯಾಮ್ ಹಾವುಗಳ ಸಂತಾನೋತ್ಪತ್ತಿಯ ಬಗೆ ಹೇಗೆ ಎಂಬುದನ್ನು ವಿವರಿಸಿದರು.

ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ. ನಮ್ಮ ಥರ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ. ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡುಹಾವು ಇಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರ್ತೀರಾ. ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್‌ನಲ್ಲೆಲ್ಲ ಓಡಾಡ್ತಿರತ್ತೆ, ಪಿಣಿಪಿಣಿಪಿಣಿ ಅಂತ. ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ. ”ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದು ಕಿಂಗ್ ಕೋಬ್ರಾ” ಎಂದು ಸ್ನೇಕ್ ಶ್ಯಾಮ್ ಹೇಳುತ್ತಿದ್ದರೆ ಸ್ಪರ್ಧಿಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ನೇರ ಪ್ರಸಾರ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sat, 14 October 23