ಬಿಗ್​ಬಾಸ್ ಮನೆಯಲ್ಲಿ ಉರಗ ಪ್ರೇಮಿ ಸ್ನೇಕ್ ಶ್ಯಾಮ್: ಹಿರಿಯ ಸದಸ್ಯನ ಒಪ್ಪಿ-ಅಪ್ಪುತ್ತಾರಾ ಮನೆ ಮಂದಿ

Bigg Boss 10: ಬಿಗ್​ಬಾಸ್ ಮನೆಗೆ ಕರ್ನಾಟಕದ ಹಿರಿಯ ಉರಗ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರನ್ನು ಬಿಗ್​ಬಾಸ್ ಮನೆಗೆ ಕರೆತರಲಾಗಿದೆ. ಮನೆಯ ಹಿರಿಯ ಸದಸ್ಯರಾದ ಸ್ನೇಕ್ ಶಾಮ್ ಅವರನ್ನು ಇತರ ಸದಸ್ಯರು ಒಪ್ಪುತ್ತಾರಾ?

ಬಿಗ್​ಬಾಸ್ ಮನೆಯಲ್ಲಿ ಉರಗ ಪ್ರೇಮಿ ಸ್ನೇಕ್ ಶ್ಯಾಮ್: ಹಿರಿಯ ಸದಸ್ಯನ ಒಪ್ಪಿ-ಅಪ್ಪುತ್ತಾರಾ ಮನೆ ಮಂದಿ
ಸ್ನೇಕ್ ಶ್ಯಾಮ್
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:03 AM

ಬಿಗ್​ಬಾಸ್ (Bigg Boss) ಮನೆಗೆ ಸಿನಿಮಾ ನಟ-ನಟಿಯರು, ಸೋಷಿಯಲ್ ಮೀಡಿಯಾ ತಾರೆಯರನ್ನು ಮಾತ್ರವೇ ಕರೆತರಲಾಗುತ್ತದೆ ಎಂಬ ಆರೋಪವಿದೆ. ಅದಕ್ಕೆ ಅನ್ವರ್ಥವಾಗಿ ಬೇರೆ-ಬೇರೆ ವಿಭಾಗದಲ್ಲಿ ಸೇವೆ ಸಲ್ಲಿಸಿರುವವರನ್ನು ಕರೆತರುವ ಪ್ರಯತ್ನ ಮಾಡಿದಂತೆ ತೋರುತ್ತಿದೆ. ಮಂಗಳಮುಖಿ ಉದ್ಯಮಿ ನಿತಾ ವನಜಾಕ್ಷಿಯನ್ನು ಬಿಗ್​ಬಾಸ್​ ಮನೆಯೊಳಗೆ ಕರೆತಂದ ಬೆನ್ನಲ್ಲೆ, ಇದೀಗ ಕರ್ನಾಟಕದ ಜನಪ್ರಿಯ ಉರಗ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರನ್ನು ಬಿಗ್​ಬಾಸ್ ಮನೆಗೆ ಕರೆಸಲಾಗಿದೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ತಮ್ಮದೇ ಆದ ವಿಭಿನ್ನ ಸ್ಟೈಲ್​ನಲ್ಲಿ ಬಿಗ್​ಬಾಸ್ ವೇದಿಕೆ ಬಂದ ಸ್ನೇಕ್ ಶ್ಯಾಮ್, ಪ್ರೀತಿಯಿಂದ, ಗೌರವದಿಂದ ಬಿಗ್​ಬಾಸ್ ಆಹ್ವಾನವನ್ನು ಒಪ್ಪಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಉರಗ ರಕ್ಷಣೆಯ ಈ ಹವ್ಯಾಸ ತಮಗೆ ಅಂಟಿದ್ದು ಹೇಗೆ ಎಂಬುದರ ಬಗ್ಗೆಯೂ ಮಾತನಾಡಿದ ಸ್ನೇಕ್ ಶಾಮ್, ನನಗೆ ಎಳವೆಯಿಂದಲೂ ಹಾವುಗಳ ಬಗ್ಗೆ ವಿಶೇಷ ಪ್ರೀತಿ. ಯಾವುದಾದರೂ ಸಿನಿಮಾದಲ್ಲಿ ಹಾವುಗಳಿದ್ದರೆ ಆ ಸಿನಿಮಾ ತಪ್ಪದೆ ನೋಡುತ್ತಿದ್ದೆ. ಶಿವನ ಕೊರಳಿನಲ್ಲಿರುವ ಹಾವು ನನಗೆ ಅತ್ಯಂತ ಪ್ರೀತಿಯ ಆಸಕ್ತಿಯ ವಿಷಯ ಎಂದರು.

ಇದನ್ನೂ ಓದಿ:ಸಮಾಜದ ಸವಾಲುಗಳ ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ಬಿಗ್​ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?

1976ರಿಂದಲೂ ಉರಗ ರಕ್ಷಣೆಯಲ್ಲಿ ನಾನು ತೊಡಗಿದ್ದೇನೆ. ಯಾವುದೇ ಮನೆಗೆ ಉರಗ ರಕ್ಷಣೆಗೆ ಹೋದಾಗಲೂ ಗಂಭೀರವಾಗಿ ಕೆಲಸ ಮಾಡಲು ಹೋಗುವುದಿಲ್ಲ ಬದಲಿಗೆ ಅವರ ಮನೆಯ ವ್ಯಕ್ತಿಯಾಗಿ ಹೋಗುತ್ತೇನೆ, ಹಾವು ಕಂಡು ಗಾಬರಿಯಾದ ಆ ಕುಟುಂಬದವರನ್ನು ನಗಿಸುವ ಪ್ರಯತ್ನ ಮಾಡುತ್ತೇನೆ, ಹಾವುಗಳ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡುತ್ತೇನೆ, ಆ ಕುಟುಂಬದ ಸದಸ್ಯನಂತೆ ವರ್ತಿಸಿ ಅಲ್ಲಿಂದ ಬರುತ್ತೇನೆ ಎಂದಿದ್ದಾರೆ.

1976ರ ಸಂದರ್ಭದಲ್ಲಿ ನಮ್ಮ ಮನೆಯ ಎದುರಿಗೆ ಪರಿಚಯದ ಮನೆಯೊಂದಕ್ಕೆ ಬಂದಿದ್ದ ನಾಗರ ಹಾವನ್ನು ಮೊದಲಿಗೆ ರಕ್ಷಿಸಿದೆ. ಅಂದಿನಿಂದಲೂ ಹಾವು ರಕ್ಷಣೆ ಮಾಡುತ್ತಲೇ ಇದ್ದೇನೆ. ಮೊದಲಿಗೆ ಇದೊಂದು ವೃತ್ತಿ ಎಂಬಂತೆ ಮಾಡಿರಲಿಲ್ಲ. 88ರಿಂದ ರಕ್ಷಿಸಿದ ಹಾವುಗಳ ಲೆಕ್ಕ ಇಡಲು ಆರಂಭಿಸಿದೆ. ಈ ವರೆಗೆ ಸುಮಾರು 58,000 ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಣೆ ಮಾಡಿದ್ದೇನೆ ಎಂದಿದ್ದಾರೆ.

ನನಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ಮಹಾ ಪ್ರಾಣ. ನನ್ನ ತಂದೆ-ತಾಯಿ ಸೇರಿದಂತೆ ನನ್ನ ಕುಟುಂಬದ ಹಲವು ಸದಸ್ಯರು ವೃತ್ತಿಯಲ್ಲಿ ಶಿಕ್ಷಕರು ಆದರೆ ನಾನು ಪ್ರಾಣಿಗಳ ಮೇಲೆ ಪ್ರೀತಿ ಬೆಳೆಸಿಕೊಂಡೆ. ಬದುಕು ನಿರ್ವಹಿಸಲು ಆಟೋ ಡ್ರೈವರ್ ಆದೆ. ಈಗ ಹಲವು ಹಸುಗಳನ್ನು, ಕುರಿ, ಕೋಳಿಗಳನ್ನು ಹಲವು ಬಗೆಯ ಪಕ್ಷಿಗಳನ್ನು ಸಾಕಿದ್ದೇನೆ. ಮನುಷ್ಯ ಬಹಳ ಸ್ವಾರ್ಥಿ ಆದರೆ ಪ್ರಾಣಿಗಳು ಹಾಗಲ್ಲ. ಸ್ವಲ್ಪ ಪ್ರೀತಿ ತೋರಿಸಿದರೂ ಸಹ ತಿರುಗಿ ದುಪ್ಪಟ್ಟು ಪ್ರೀತಿ ಕೊಡುತ್ತವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Sun, 8 October 23