ತೆಲುಗು ಬಿಗ್ಬಾಸ್ ಸೀಸನ್ 07ರ (BiggBoss) ಫಿನಾಲೆ ಕೆಲವು ದಿನಗಳ ಹಿಂದಷ್ಟೆ ಮುಗಿದಿತ್ತು. ಈ ಬಾರಿ ತೆಲುಗು ಬಿಗ್ಬಾಸ್ ಹಳೆಯ ಎಲ್ಲ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಈ ವರೆಗಿನ ತೆಲುಗು ಬಿಗ್ಬಾಸ್ ಸೀಸನ್ ಎನಿಸಿಕೊಂಡಿತು. ಅದಕ್ಕೆ ಪ್ರಮುಖ ಕಾರಣವಾಗಿದ್ದು ಪಲ್ಲವಿ ಪ್ರಶಾಂತ್ ಎಂಬ ಯುವ ರೈತ. ನಟನೆ ಹಿನ್ನೆಲೆ ಇರದ, ರೈತನಾಗಿದ್ದ ಪಲ್ಲವಿ ಪ್ರಶಾಂತ್, ಬಿಗ್ಬಾಸ್ ಮನೆಯಲ್ಲಿ ಆಡಿದ ರೀತಿಗೆ ತೆಲುಗು ಜನ ಫಿದಾ ಆಗಿದ್ದರು. ನಿರೀಕ್ಷೆಯಂತೆ ಪಲ್ಲವಿ ಪ್ರಶಾಂತ್ ಗೆದ್ದರು. ಆದರೆ ಗೆದ್ದು ಹೊರಬಂದ ಬಳಿಕ ಅವರ ಗ್ರಹಚಾರ ಕೆಟ್ಟಿತು, ಬಿಗ್ಬಾಸ್ ಗೆದ್ದ ಖುಷಿಯಲ್ಲಿರುವಾಗಲೇ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ಬಿಗ್ಬಾಸ್ ಫಿನಾಲೆ ನಡೆದು ಪಲ್ಲವಿ ಪ್ರಶಾಂತ್ ವಿಜೇತರೆಂದು ಘೋಷಿಸಿದ ಬಳಿಕ ಅನ್ನಪೂರ್ಣ ಸ್ಟುಡಿಯೋದ ಹೊರಗೆ ಗಲಾಟೆ ನಡೆದಿತ್ತು. ಬಿಗ್ಬಾಸ್ನ ರನ್ನರ್ ಅಪ್ ಆದ ಅಮರ್ದೀಪ್ರ ಕಾರಿನ ಗಾಜುಗಳನ್ನು ಒಡೆದು ಹಲ್ಲೆಗೆ ಯತ್ನಿಸಲಾಗಿತ್ತು. ಮಾತ್ರವಲ್ಲದೆ ಇನ್ನಿಬ್ಬರು ಮಹಿಳಾ ಕಂಟೆಸ್ಟಂಟ್ಗಳ ಕಾರುಗಳ ಗಾಜುಗಳನ್ನು ಸಹ ಒಡೆಯಲಾಗಿತ್ತು. ಅದಾದ ಬಳಿಕ ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಮೆರವಣಿಗೆ ಮಾಡಲಾಗಿತ್ತು, ಆ ವೇಳೆ ನಡೆದ ಗಲಾಟೆಯಲ್ಲಿ ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಬಸ್ಸುಗಳನ್ನು ಜಖಂ ಮಾಡಲಾಗಿತ್ತು. ಇದೇ ಕಾರಣಕ್ಕೆ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದ ಹೈದರಾಬಾದ್ ದಕ್ಷಿಣ ವಲಯದ ಪೊಲೀಸರು ಪಲ್ಲವಿ ಪ್ರಶಾಂತ್, ಅವರ ಸಹೋದರ ಮಹಾವೀರ್, ಮೆರವಣಿಗೆ ಮಾಡಿದ್ದ ವಾಹನ ಚಾಲನೆ ಮಾಡಿದ್ದ ಡ್ರೈವರ್ ಹಾಗೂ ಮತ್ತೊಬ್ಬರನ್ನು ಬಂಧಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲವು ಜಾಮೀನಿ ನೀಡಲು ನಿರಾಕರಿಸಿ ನಾಲ್ವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮರು ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಇದೀಗ ನಾಲ್ಕೂ ಮಂದಿಗೆ ಜಾಮೀನು ನೀಡಿದೆ. ಅನುದೀಪ್ ಕಾರಿನ ಗಾಜು ಒಡೆದ ಘಟನೆಯಲ್ಲಿ ಪಲ್ಲವಿ ಪ್ರಶಾಂತ್ ಹಸ್ತಕ್ಷೇಪ ಇಲ್ಲ ಎಂದು ನ್ಯಾಯಾಲಯಕ್ಕೆ ಪಲ್ಲವಿ ಪ್ರಶಾಂತ್ ಪರ ವಕೀಲರು ಮನದಟ್ಟು ಮಾಡಿದ್ದಾರೆ. ಅಲ್ಲದೆ, ನಿಯಮ ಬಾಹಿರವಾಗಿ ಮೆರವಣಿಗೆ ಮಾಡಿದ್ದು ಸಹ ಪಲ್ಲವಿ ಪ್ರಶಾಂತ್ ಅವರ ನಿರ್ಣಯ ಆಗಿರಲಿಲ್ಲ ಎಂದಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ಪಲ್ಲವಿ ಪ್ರಶಾಂತ್ ಹಾಗೂ ಅವರೊಟ್ಟಿಗೆ ಬಂಧನವಾಗಿದ್ದ ಇನ್ನು ಮೂವರಿಗೆ ಜಾಮೀನು ನೀಡಿದೆ.
ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ತಲೆ ಮರೆಸಿಕೊಂಡ್ರಾ? ಕೇಸ್ ಹಾಕಿದ ಬಳಿಕ ಸಿಕ್ತು ಸ್ಪಷ್ಟನೆ
ಅಮರ್ದೀಪ್ ಕಾರಿನ ಗಾಜು ಒಡೆದ ಪ್ರಕರಣದಲ್ಲಿ ಒಟ್ಟು 12 ಜನರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಆ 12 ಜನ ಬಂಧಿತರಲ್ಲಿ ನಾಲ್ವರು ಅಪ್ರಾಪ್ತರು ಇದ್ದಾರೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಪೊಲೀಸ್ ಅಧಿಕಾರಿ ಶ್ರೀನಿವಾಸ ರೆಡ್ಡಿ, ಪಲ್ಲವಿ ಪ್ರಶಾಂತ್ ಬಗ್ಗೆ ಖಾರವಾಗಿಯೇ ಮಾತನಾಡಿದ್ದು, ‘‘ಬಿಗ್ಬಾಸ್ ಒಳಗೆ ಏನು ಘಟನೆ ನಡೆದಿದೆಯೋ ಅದಕ್ಕೂ ನಮಗೂ ಸಂಬಂಧವಿಲ್ಲ, ಅದನ್ನು ಸೆನ್ಸಾರ್ನವರು ನೋಡಿಕೊಳ್ಳುತ್ತಾರೆ. ರಸ್ತೆಯ ಮೇಲೆ ಅಂದು ನಡೆದಿದ್ದೇನು ಎಂಬುದನ್ನಷ್ಟೆ ನಾವು ಗಮನಿಸಿದ್ದೇವೆ. ಅನುಮತಿ ತೆಗೆದುಕೊಳ್ಳದೆ ಅವರು ಬೃಹತ್ ಮೆರವಣಿಗೆ ಮಾಡಿ, ಸಾರ್ವಜನಿಕರಿಗೆ ಸಮಸ್ಯೆ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ‘ರೈತು ಬಿಡ್ಡ’ (ರೈತನ ಮಗ) ಎಂದು ಹೇಳಿಕೊಳ್ಳುವ ಆತ (ಪಲ್ಲವಿ ಪ್ರಶಾಂತ್) ಆ ಹೆಸರಿನ ಸಿನಿಮಾ ಏನಾದರೂ ಮಾಡಿದ್ದಾನಾ? ನಾನೂ ಸಹ ರೈತನ ಮಗನೇ, ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ’’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ