ವಿನಯ್ ಹೇಳಿದ ಮಾತಿಗೆ ಸಂಗೀತಾ ರೆಬೆಲ್, ಅಸಮಾಧಾನ ವ್ಯಕ್ತಪಡಿಸಿದ ಶ್ರುತಿ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಈ ಶನಿವಾರ ನಟಿ ಶ್ರುತಿ ಬಿಗ್ಬಾಸ್ ಮನೆಗೆ ಬಂದಿದ್ದರು. ಈ ವೇಳೆ ವಿನಯ್, ಸಂಗೀತಾಗೆ ಹೇಳಿದ ಮಾತಿಗೆ ಶ್ರುತಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರ ಈ ಶನಿವಾರದ ಎಪಿಸೋಡ್ಗೆ ಸುದೀಪ್ ಆಗಮಿಸಿರಲಿಲ್ಲ. ಸುದೀಪ್ ಸಿಸಿಎಲ್ನಲ್ಲಿ ಬ್ಯುಸಿಯಾಗಿರುವ ಕಾರಣ ವೀಕೆಂಡ್ ಪಂಚಾಯಿತಿ ಕಾರ್ಯಕ್ರಮಕ್ಕೆ ಸುದೀಪ್ ಬದಲಿಗೆ ನಟಿ ಶ್ರುತಿ ಆಗಮಿಸಿದ್ದರು. ಆದರೆ ಅವರು ಸುದೀಪ್ ರೀತಿ ಪಂಚಾಯಿತಿ ನಡೆಸಲಿಲ್ಲ, ಆದರೆ ಮನೆಯ ಒಳಗೆ ಸ್ಪರ್ಧಿಗಳ ದೂರುಗಳನ್ನು, ಆರೋಪಗಳನ್ನು ಆಲಿಸಿ, ತಕ್ಕ ಮಟ್ಟಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ಆದರೆ ಇದು ಇನ್ನಷ್ಟು ಮನಸ್ಥಾಪಕ್ಕೆ ಕಾರಣವಾಯ್ತು.
ಬಿಗ್ಬಾಸ್ ಮನೆಯ ಒಳಗೆ ನ್ಯಾಯಾಲಯದ ರೀತಿ ಕಟಕಟೆಯನ್ನು ನಿರ್ಮಿಸಲಾಗಿತ್ತು. ನ್ಯಾಯಾಧೀಶೆಯಾಗಿ ಶ್ರುತಿ ಪೀಠದಲ್ಲಿ ಕೂತಿದ್ದರು. ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಕಟ-ಕಟೆಯಲ್ಲಿ ನಿಂತು ಆರೋಪಗಳನ್ನು ಎದುರಿಸಿದರು, ತಮ್ಮ ಪರವಾಗಿ ತಾವೇ ವಾದ ಮಂಡಿಸಿದರು. ಅಂತಿಮ ತೀರ್ಪನ್ನು ನ್ಯಾಯಾಧೀಶೆ ಶ್ರುತಿ ನೀಡಿದರು.
ನ್ಯಾಯಾಲಯದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟಿದ್ದು ವಿನಯ್, ಸಂಗೀತಾ, ಡ್ರೋನ್ ಪ್ರತಾಪ್ ಅವರ ವಿಚಾರ. ವಿನಯ್, ವಾರವೆಲ್ಲ ಅಗ್ರೆಸ್ಸಿವ್ ಆಗಿದ್ದು, ವಾರಾಂತ್ಯದಲ್ಲಿ ಸುದೀಪ್ ಎದುರು ಸಭ್ಯನಂತೆ ವರ್ತಿಸುತ್ತಾರೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಸಂಗೀತಾ, ನಮ್ರತಾ ಇನ್ನಿತರರು ಹೌದು ಎಂದರು. ಡ್ರೋನ್ ಪ್ರತಾಪ್ ಬೇಕೆಂದೇ ಹಳ್ಳಿಯವನಂತೆ ವರ್ತಿಸುತ್ತಿದ್ದಾನೆ ಎಂಬ ಆರೋಪ ಬಂತು. ತನಿಷಾ, ನಮ್ರತಾ. ವಿನಯ್, ವರ್ತೂರು ಸಂತು ಅವರುಗಳು ಈ ಆರೋಪಕ್ಕೆ ದನಿ ಗೂಡಿಸಿದರು. ಆದರೆ ಪ್ರತಾಪ್, ತಮ್ಮನ್ನು ತಾವು ಚೆನ್ನಾಗಿ ಡಿಫೆಂಡ್ ಮಾಡಿಕೊಂಡರು.
ಇದನ್ನೂ ಓದಿ:‘ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ’; ವಿನಯ್ಗೆ ನಡುಕ ಹುಟ್ಟಿಸಿದ ನಟಿ ಶ್ರುತಿ
ಸಂಗೀತಾ-ವಿನಯ್ ನಡುವಿನ ಜಗಳ ಸಾಕಷ್ಟು ಚರ್ಚೆಯಾಯಿತು. ಆಡಿರುವ ಮಾತನ್ನು ಸುದೀಪ್ ಎದುರು ಒಪ್ಪಿಕೊಳ್ಳುವುದಿಲ್ಲ. ನನ್ನ ಹಾಗೂ ಕಾರ್ತಿಕ್ ಅನ್ನು ಡುಬಾಕ್ ಜೋಡಿ ಎಂದಿದ್ದನ್ನು ನಾನೇ ಕೇಳಿಸಿಕೊಂಡಿದ್ದೀನಿ. ಆದರೆ ಸುದೀಪ್ ಕೇಳಿದಾಗ ಇಲ್ಲ, ನೆನಪಿಲ್ಲ ಎಂದಿದ್ದರು ಎಂದು ಸಂಗೀತಾ ಆರೋಪ ಮಾಡಿದರು. ತನಗೆ ನೆನಪಿರಲಿಲ್ಲ ಎಂದು ಮತ್ತೆ ವಿನಯ್ ಹೇಳಿದರು. ಕಟ-ಕಟೆಯಿಂದ ಇಳಿದು ಹೋಗುವಾಗ ಮತ್ತೆ ಸಂಗೀತಾಗೆ ಡುಬಾಕ್ ಎಂದು ರೇಗಿಸಿ ಹೋದರು ವಿನಯ್.
ಇದನ್ನು ಅಲ್ಲಿಯೇ ಖಂಡಿಸಿದ ಸಂಗೀತಾ, ಇಷ್ಟೆಲ್ಲ ಮಾತಿನ ಬಳಿಕವೂ ವಿನಯ್ ನನ್ನನ್ನು ಡುಬಾಕ್ ಎನ್ನುತ್ತಿದ್ದಾನೆ ಎಂದರು. ಆದರೆ ವಿನಯ್, ಬೇರೆ ಏನೋ ಅಲ್ಲದ ಕಾರಣವನ್ನು ಶ್ರುತಿಯ ಮುಂದೆ ನೀಡಿದರು. ಆದರೆ ವಿನಯ್ ಮಾಡಿದ್ದನ್ನು ಶ್ರುತಿ ಒಪ್ಪಲಿಲ್ಲ. ಈಗಾಗಲೇ ಮುಗಿದ ವಿಷಯವನ್ನು ಹೇಗೆ ನೀವು ಮತ್ತೆ ಎತ್ತುತ್ತೀರಿ ಎಂದು ಪ್ರಶ್ನೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ