ಕಾರ್ತಿಕ್, ಸಂಗೀತಾ ಮೇಲೆ ದ್ವೇಷ ತೀರಿಸಿಕೊಂಡ ವಿನಯ್ ಆಂಡ್ ಗ್ಯಾಂಗ್
Bigg Boss: ಬಿಗ್ಬಾಸ್ ಮನೆಯಲ್ಲಿ ಪಾತ್ರಗಳು ಅದಲು-ಬದಲಾಗಿದೆ. ರಾಕ್ಷಸರಾಗಿದ್ದವರು, ಗಂಧರ್ವರಾಗಿದ್ದಾರೆ. ಗಂಧರ್ವರು ರಾಕ್ಷಸರಾಗಿದ್ದಾರೆ. ವಿನಯ್ ಹಾಗೂ ಗ್ಯಾಂಗ್, ಕಾರ್ತಿಕ್, ಸಂಗೀತಾ ಹಾಗೂ ತನಿಷಾ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ (BiggBoss) ಮನೆಯಲ್ಲಿ ರಾಕ್ಷಸರ ಅಟ್ಟಹಾಸ ಮುಂದುವರೆದಿದೆ. ಆದರೆ ಪಾತ್ರಗಳಷ್ಟೆ ಬದಲಾಗಿದೆ. ಮಂಗಳವಾರದ ಎಪಿಸೋಡ್ನಲ್ಲಿ ಸಂಗೀತಾ, ಕಾರ್ತಿಕ್, ತನಿಷಾ, ಡ್ರೋನ್ ಪ್ರತಾಪ್, ಅವಿನಾಶ್, ಸಿರಿ ಅವರುಗಳು ರಾಕ್ಷಸರಾಗಿದ್ದರು ಗಂಧರ್ವರ ಮೇಲೆ ಅಟ್ಟಹಾಸ ಮೆರೆದರು. ಬುಧವಾರದ ಎಪಿಸೋಡ್ನ ಅಂತ್ಯದ ವೇಳೆಗೆ ವಿನಯ್, ತುಕಾಲಿ, ನಮ್ರತಾ, ವರ್ತೂರು ಸಂತೋಷ್, ಪವಿ, ಮೈಖಲ್ ಅವರುಗಳು ರಾಕ್ಷಸರಾದರು.
ಸಂಗೀತಾ ಗ್ಯಾಂಗ್ ರಾಕ್ಷಸರಾಗಿದ್ದಾಗ ಗಂಧರ್ವರಾಗಿದ್ದ ವಿನಯ್ ಆಂಡ್ ಗ್ಯಾಂಗ್ ಅನ್ನು ಸಖತ್ ಆಗಿ ಆಡಿಕೊಂಡಿದ್ದರು. ರಾಕ್ಷಸರ ಅಟ್ಟಹಾಸದಿಂದ ಬೇಸತ್ತಿದ್ದ ವಿನಯ್ ಆಂಡ್ ಗ್ಯಾಂಗ್, ರಾಕ್ಷಸರಾಗುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಅಂತೆಯೇ ಅವಕಾಶ ಸಿಕ್ಕೊಡನೆ ಹಳೆಯ ದ್ವೇಷವನ್ನೆಲ್ಲ ತೀರಿಸಿಕೊಂಡರು.
ಕಾರ್ತಿಕ್ ಅನ್ನು ವಿಶೇಷವಾಗಿ ಟಾರ್ಗೆಟ್ ಮಾಡಿದ ವಿನಯ್, ಕಾರ್ತಿಕ್ ಕಸದ ಬುಟ್ಟಿಗೆ ಎಸೆದಿದ್ದ ಆನೆಯ ಚಿಕ್ಕ ಮೂರ್ತಿಯನ್ನು ಕಾರ್ತಿಕ್ ಕೈಯಿಂದಲೇ ಎತ್ತಿಸಿಕೊಂಡು, ಅದನ್ನು ಟೇಬಲ್ ಮೇಲಿರಿಸಿ, ‘ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನು ಕಸದ ಬುಟ್ಟಿಗೆ ಹಾಕಿದ ನಾನು ದಡ್ಡ’ ಎಂದು ಹೇಳುವಂತೆ ವಿನಯ್ ಆದೇಶಿಸಿದರು. ಅಂತೆಯೇ ಕಾರ್ತಿಕ್ ಸಹ ಅದನ್ನು ಹೇಳಿದರು. ನಂತರ ಸಂಗೀತಾರನ್ನು ಕರೆಸಿದ ಗ್ಯಾಂಗ್, ‘ನಾನು ಗಯ್ಯಾಳಿ, ನಾನು ಮಾತುಗಳನ್ನು ತಿರುಚುವವಳು ಇತ್ಯಾದಿಗಳನ್ನು ಹೇಳುವಂತೆ ಹೇಳಿದರು. ಗಂಧರ್ವರ ವೇಷದಲ್ಲಿದ್ದ ಸಂಗೀತಾ ಸಹ ವಿನಯ್ ಆಂಗ್ ಗ್ಯಾಂಗ್ ಹೇಳಿದಂತೆ ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
ಆ ಬಳಿಕ ತನಿಷಾರನ್ನು ಕರೆಸಿ, ‘ನಾನು, ಸಂಗೀತಾ ಹಾಗೂ ಕಾರ್ತಿಕ್ ಮರವಾಗಿ ಮಾತನಾಡುತ್ತೇನೆ, ಅವರ ಪರವಾಗಿ ಮಾತುಗಳನ್ನು ತಿರುಚುತ್ತೀನಿ, ನಾನು ಗಯ್ಯಾಳಿ, ಬಾಯಿಬಡಕಿ ಎಂದು ಹೇಳುವಂತೆ ಹೇಳಿದರು. ಅಂತೆಯೇ ತನಿಷಾ ಸಹ ಅದನ್ನು ಹೇಳಿದರು. ಬಳಿಕ ಅವಿನಾಶ್ ಅನ್ನು ಕರೆಸಿ ‘ನಾನು ಮಾವುತ ಅಲ್ಲ ಕುದುರೆ’ ಎಂದು ಹೇಳುತ್ತಾ ಕುದುರೆಯಂತೆ ಓಡಾಡು ಎಂದರು. ಅಂತೆಯೇ ಅವಿನಾಶ್ ಸಹ ಹುಚ್ಚು ಕುದುರೆಯಂತೆ ಓಡಾಡಿದರು.
ವಿನಯ್ ಹಾಗೂ ಗ್ಯಾಂಗ್, ರಾಕ್ಷಸರಾಗುವ ಅವಕಾಶಕ್ಕಾಗಿ ಕಾದಿದ್ದರು. ಅಂತೂ ಅವರ ಆಸೆಯಂತೆ ರಾಕ್ಷಸರಾಗಿದ್ದಾರೆ. ಈಗ ಸಂಗೀತಾ ಹಾಗೂ ತಂಡವನ್ನು ಹೇಗೆ ಕಾಡಿಸುತ್ತಾರೆಯೋ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ