‘ಮಗು ಉಳಿಸಲು 8 ಕೋಟಿ ರೂ. ಬೇಕು, ಪ್ಲೀಸ್ ಸಹಾಯ ಮಾಡಿ’; ಕೈ ಮುಗಿದು ಬೇಡಿಕೊಂಡ ಮಂಜು ಪಾವಗಡ
‘ದಯವಿಟ್ಟು ಮಗುವನ್ನು ಉಳಿಸಿ. ಅದರ ಮುಖದಲ್ಲಿ ನಗು ತರಿಸಿ. 8 ಲಕ್ಷ ಜನರು ತಲಾ 100 ರೂ. ನೀಡಿದರೆ 8 ಕೋಟಿ ಆಗುತ್ತದೆ’ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ವಿನ್ನರ್ ಆದ ಬಳಿಕ ಮಂಜು ಪಾವಗಡ ಅವರ ಖ್ಯಾತಿ ಕರುನಾಡಿನ ಮೂಲೆ ಮೂಲೆಗೂ ತಲುಪಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಲಕ್ಷಾಂತರ ಜನರು ಮಂಜು ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಈ ಜನಪ್ರಿಯತೆಯನ್ನೇ ಇಟ್ಟುಕೊಂಡು ಮಂಜು ಅವರು ಒಂದು ಸಮಾಜಮುಖಿ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವ ಉಳಿಸಲು ಅವರು ನೆರವಾಗುತ್ತಿದ್ದಾರೆ. ಮಗುವಿನ ಚಿಕಿತ್ಸೆಗೆ ಹಣದ ಸಹಾಯ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಮಗುವಿನ ಚಿಕಿತ್ಸೆಗೆ ಈಗ ಬೇಕಿರುವುದು ಬರೋಬ್ಬರಿ 8 ಕೋಟಿ ರೂ.!
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಂಜು ಪಾಗವಡ ಅವರು ಒಂದು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. ‘ತುಮಕೂರು ಜಿಲ್ಲೆ ಶಿರಾ ತಾಲೂಕಿನ ನವೀನ್ ಮತ್ತು ಜ್ಯೋತಿ ದಂಪತಿಯ ಮಗುವಿಗೆ ಅಪರೂಪದ ಕಾಯಿಲೆ ಬಂದಿದೆ. ಅದನ್ನು ಗುಣಪಡಿಸಲು ನಮ್ಮ ದೇಶದಲ್ಲಿ ಚಿಕಿತ್ಸೆ ಇಲ್ಲ. ಬೇರೆ ದೇಶದಿಂದ ಔಷಧಿ ತರಿಸಬೇಕು. ಒಂದು ಇಂಜೆಕ್ಷನ್ ಬೆಲೆ 16 ಕೋಟಿ ರೂಪಾಯಿ. ಈಗಾಗಲೇ 8 ಕೋಟಿ ರೂ. ಸಂಗ್ರಹ ಆಗಿದೆ. ಅದಕ್ಕಾಗಿ ತುಂಬ ಧನ್ಯವಾದಗಳು. ಇನ್ನೂ 8 ಕೋಟಿ ರೂ. ಬೇಕು’ ಎಂದು ಮಂಜು ಮಾಹಿತಿ ನೀಡಿದ್ದಾರೆ.
‘ಇನ್ನು 3 ತಿಂಗಳ ಒಳಗೆ 8 ಕೋಟಿ ರೂ. ಸಂಗ್ರಹ ಆಗಬೇಕಿದೆ. ಆದಷ್ಟು ಬೇಗ ನಮ್ಮ ಕೈಲಾದ ಸಹಾಯ ಮಾಡಿ. ಕೈಮುಗಿದು ಕೇಳಿಕೊಳ್ಳುತ್ತೇನೆ. ಆ ಮಗುವನ್ನು ಉಳಿಸಿಕೊಳ್ಳೋಣ. ನಮ್ಮ ಕೈಯಲ್ಲಾಗುವ ಸಹಾಯ ಮಾಡೋಣ. ಈ ದಂಪತಿ ತುಂಬ ಕಷ್ಟದಲ್ಲಿ ಇದ್ದಾರೆ. ಆ ಮಗು ಪರಿಸ್ಥಿತಿ ನೋಡೋಕೆ ಆಗುತ್ತಿಲ್ಲ. ಎಲ್ಲರೂ ಪ್ರಾರ್ಥನೆ ಮಾಡಿ. ದಯವಿಟ್ಟು ಮಗುವನ್ನು ಉಳಿಸಿ. ಅದರ ಮುಖದಲ್ಲಿ ನಗು ತರಿಸಿ. 8 ಲಕ್ಷ ಜನರು ತಲಾ 100 ರೂ. ನೀಡಿದರೆ 8 ಕೋಟಿ ಆಗುತ್ತದೆ’ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ.
View this post on Instagram
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿಯೇ ಬ್ಯಾಂಕ್ ಖಾತೆ ವಿವರಗಳನ್ನು ನೀಡಲಾಗಿದೆ. ಅನೇಕರು ಸ್ಪಂದಿಸುತ್ತಿದ್ದಾರೆ. ‘ಇದು ನಿಮ್ಮ ಮನೆ ಮಗು ಎಂದುಕೊಂಡು ದಯವಿಟ್ಟು ಇದಕ್ಕೆ ಮರುಜನ್ಮ ನೀಡಿ’ ಎಂದು ಮಗುವಿನ ತಂದೆ-ತಾಯಿ ಕೂಡ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:
ದಿವ್ಯಾ ಸುರೇಶ್ ಮನೆಯಲ್ಲೇ ಮಂಜುಗೆ ಗಣಪನ ಹಬ್ಬ; ‘ಆದಷ್ಟು ಬೇಗ ಮದುವೆ ಆಗಿ’ ಅಂದಿದ್ದು ಯಾರು?
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್