‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ-ಕಾವ್ಯಾ ನಡುವಿನ ಗೆಳೆತನ ವೀಕ್ಷಕರಿಗೆ ಇಷ್ಟವಾಗಿದೆ. ಈ ಗೆಳೆತನದಲ್ಲಿ ಕೆಲವೊಮ್ಮೆ ಗಿಲ್ಲಿಗೆ ನೋವು ಮಾಡಿದ್ದೇನೆ ಎಂದು ಕಾವ್ಯಾ ಈಗ ಕ್ಷಮೆ ಕೇಳಿದ್ದಾರೆ. ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ಕಾವ್ಯಾ, ಗಿಲ್ಲಿಗೆ ತಾವು ಮಾಡಿರುವ ತಪ್ಪುಗಳ ಬಗ್ಗೆ ಮಾತನಾಡಿ, ಕ್ಷಮೆ ಯಾಚಿಸಿದರು. ಈ ವೇಳೆ, "ಹೊರಗೆ ಹೋಗ್ತಿದ್ದಂತೆ ನಿನ್ನನ್ನು ಬ್ಲಾಕ್ ಮಾಡ್ತೀನಿ" ಎಂದು ಕಾವ್ಯಾ ಹೇಳಿದರು.

‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ
ಗಿಲ್ಲಿ-ಕಾವ್ಯಾ

Updated on: Jan 16, 2026 | 9:15 AM

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಗೆಳೆತನ ಮೂಡಿದೆ. ಈ ಗೆಳೆತನದಲ್ಲಿ ವೀಕ್ಷಕರಿಗೆ ಪರಿಶುದ್ಧತೆ ಕಾಣುತ್ತಿದೆ. ಕಾವ್ಯಾಗೆ ಏನೇ ಆದರೂ ಗಿಲ್ಲಿ ಅಲ್ಲಿ ನಿಲ್ಲುತ್ತಾರೆ. ತಮ್ಮ ಗೆಳತಿಯ ಪರ ಧ್ವನಿ ಎತ್ತುತ್ತಾರೆ. ಆದರೆ, ಕಾವ್ಯಾ ಎಲ್ಲಾ ಸಂದರ್ಭದಲ್ಲೂ ಗಿಲ್ಲಿ ಪರ ನಿಂತಿದ್ದಾರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಸಿಗುತ್ತದೆ. ಸ್ವತಃ ಕಾವ್ಯಾಗೆ ಹಾಗೆ ಅನಿಸಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ಗಿಲ್ಲಿ ಬಳಿ ಅವರು ಕ್ಷಮೆ ಕೇಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಕೊನೆಯ ವಾರ ಇದು. ಈ ಕಾರಣದಿಂದಲೇ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದರು. ಸೀಸನ್ ಉದ್ದಕ್ಕೂ ಯಾವುವಾದರೂ ಸ್ಪರ್ಧಿಯನ್ನು ನೋಯಿಸಿದ್ದರೆ ಅದಕ್ಕೆ ಕ್ಷಮೆ ಕೇಳಬೇಕು. ಗಿಲ್ಲಿ ನಟ ಅವರಿಗೆ ನೋವು ಮಾಡಿದಂತೆ ಕಾವ್ಯಾಗೆ ಅನಿಸಿದೆ. ಹೀಗಾಗಿ, ಅವರು ಕ್ಷಮೆ ಕೇಳಿದ್ದಾರೆ. ಈ ವೇಳೆ ಹೊರ ಹೋದ್ಮೇಲೆ ಬ್ಲಾಕ್ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದ್ದಾರೆ.

‘ಬೇಜಾರು ಮಾಡಿದ್ದೀಯಾ ಎಂದು ನೀನು ಯಾವಾಗಲೂ ಹೇಳಿಕೊಂಡೇ ಇಲ್ಲ. ಹಾಗಂತ ನಾನು ನಿನಗೆ ಬೇಜಾರು ಮಾಡೇ ಇಲ್ಲ ಅಂತ ಅಲ್ಲ. ನೀನು ಹೇಳಿಲ್ಲ ಅಷ್ಟೇ. ಅದು ನಿನ್ನ ದೊಡ್ಡತನ ಇರಬಹುದು. ಇದು ಶೋ ಎಂಬುದನ್ನು ನೋಡದೇ ಸಾಕಷ್ಟು ಬಾರಿ ನಿನ್ನ ಅಹಂಗೆ ಪೆಟ್ಟು ಕೊಟ್ಟಿದ್ದೇನೆ. ಕೆಲವೊಮ್ಮೆ ನಿನ್ನನ್ನು ಬೇರೆಯವರ ಮುಂದೆ ಬಿಟ್ಟುಕೊಟ್ಟಿದ್ದೇನೆ. ಇದಕ್ಕೆಲ್ಲ ಕಾರಣ ಇತ್ತು. ಅದು ನಿನಗೂ ಗೊತ್ತು. ಗೆಳೆತಿಯಾಗಿ ಯೋಚಿಸಿದಾಗ ನಿನಗೆ ನೋವು ಮಾಡಿದ್ದೇನೆ. ಕ್ಷಮೆ ಇರಲಿ’ ಎಂದರು ಕಾವ್ಯಾ.

ಇದನ್ನೂ ಓದಿ: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?
ಆ ಬಳಿಕ ಕಾವ್ಯಾ ಅವರು ಗಿಲ್ಲಿಗೆ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದರು. ‘ಇನ್ನು ಉಳಿದುಕೊಂಡಿರೋದು ಕೆಲವೇ ದಿನ ಮಾತ್ರ. ಇನ್ನಾದರೂ ರೇಗಿಸೋದನ್ನು ನಿಲ್ಲಿಸು. ಇಲ್ಲವಾದಲ್ಲಿ ಹೊರಗೆ ಹೋಗುತ್ತಿದ್ದಂತೆ ನಿನ್ನ ಬ್ಲಾಕ್ ಮಾಡೋದಂತೂ ಪಕ್ಕಾ’ ಎಂದು ಕಾವ್ಯಾ ಹೇಳಿದರು. ಆಗ ಗಿಲ್ಲಿ, ‘ನಾನು ಕಾಯ್ತಾ ಇದೀನಿ. ಧೈರ್ಯ ಇದ್ರೆ ಮಾಡು’ ಎಂದು ಸವಾಲು ಹಾಕಿದರು. ಸದ್ಯ ಈ ವಿಷಯ ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 9:15 am, Fri, 16 January 26