
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾ ಇದ್ದಾರೆ. ಆದರೆ ಅವರು ಮಾಡುವ ಕೆಲವು ತಮಾಷೆಯಿಂದ ತೊಂದರೆ ಕೂಡ ಉಂಟಾಗುತ್ತದೆ. ಅಚ್ಚರಿ ಎಂದರೆ, ಈಗ ಬಿಗ್ ಬಾಸ್ ಮನೆ ಒಳಗಿನ ವಿಷಯ ಮಹಿಳಾ ಆಯೋಗದ (Women Commission) ತನಕ ತಲುಪಿದೆ! ಹೌದು, ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟಕ್ಕೂ ಗಿಲ್ಲಿ ಮಾಡಿದ ತಪ್ಪು ಏನು? ಸಹ ಸ್ಪರ್ಧಿ ರಿಷಾ (Risha) ಅವರ ಬಟ್ಟೆಗಳನ್ನು ಮುಟ್ಟಿದ್ದು. ಈ ವಿಚಾರವನ್ನು ಇಟ್ಟುಕೊಂಡು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಾತ್ ರೂಮ್ ಒಳಗೆ ಹೋಗಿದ್ದ ರಿಷಾ ಅವರು ದೀರ್ಘ ಸಮಯ ತೆಗೆದುಕೊಂಡರು. ತಮಗೆ ನೀರು ಬೇಕು ಎಂದು ಗಿಲ್ಲಿ ನಟ ಮನವಿ ಮಾಡಿದರೂ ಕೂಡ ರಿಷಾ ಅದಕ್ಕೆ ಸ್ಪಂದಿಸಲಿಲ್ಲ. ಅದರಿಂದಾಗಿ ಗಿಲ್ಲಿಗೆ ಕೋಪ ಬಂತು. ಆಗ ಗಿಲ್ಲಿ ನಡೆದುಕೊಂಡ ರೀತಿಯಿಂದ ಎಲ್ಲರಿಗೂ ಅಚ್ಚರಿ ಆಯಿತು.
ಗಿಲ್ಲಿ ಅವರು ರಿಷಾ ಅವರ ಬಟ್ಟೆಗಳನ್ನೆಲ್ಲ ತಂದು ಬಾತ್ ರೂಮ್ ಮುಂದೆ ಸುರಿದರು. ಆ ಬಳಿಕ ಗಿಲ್ಲಿ ಮತ್ತು ರಿಷಾ ನಡುವೆ ದೊಡ್ಡ ಜಗಳ ಆಯಿತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಲ್ಲದೇ, ಗಿಲ್ಲಿ ನಟ ಅವರು ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.
ಈ ದೂರಿನ ಅನ್ವಯ ಮಹಿಳಾ ಆಯೋಗವು ವಿಡಿಯೋ ಫೂಟೇಜ್ ಪರಿಶೀಲನೆ ಮಾಡುತ್ತಿದೆ. ಆದರೆ ಬಿಗ್ ಬಾಸ್ ಆಯೋಜಕರು ಯಾವುದೇ ವಿಡಿಯೋ ಫೂಟೇಜ್ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಈ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ರೀತಿಯಲ್ಲೇ ಬಿಗ್ ಬಾಸ್ ನಿರೂಪಣೆ ಮಾಡಿದ ಗಿಲ್ಲಿ ನಟ
ಜಗಳ ನಡೆದಾಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಆದರೂ ಕೂಡ ಇನ್ನುಳಿದ ಸ್ಪರ್ಧಿಗಳು ಕೇವಲ ವಾರ್ನಿಂಗ್ ನೀಡಿ ರಿಷಾ ಅವರನ್ನು ಉಳಿಸಿಕೊಂಡರು. ವಾರಾಂತ್ಯದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು. ಹೆಣ್ಮಕ್ಕಳ ಬಟ್ಟೆ, ಬ್ಯಾಗ್ಗಳಿಗೆ ಅನುಮತಿ ಇಲ್ಲದೇ ಕೈ ಹಾಕಬಾರದು ಎಂದು ಗಿಲ್ಲಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.