ಸಿನಿಮಾ ರಂಗದಂತೆ ಕಿರುತೆರೆ ಲೋಕದಲ್ಲೂ ದೊಡ್ಡ ಸ್ಪರ್ಧೆ ಇದೆ. ಎಲ್ಲಾ ವಾಹಿನಿಗಳು ಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಎದುರು ಬರಲು ಪ್ರಯತ್ನಿಸುತ್ತಿವೆ. ಅದ್ದೂರಿಯಾಗಿ ಧಾರಾವಾಹಿಗಳನ್ನು ನಿರ್ಮಾಣ ಮಾಡಲು ವಾಹಿನಿಯವರು ಆದ್ಯತೆ ನೀಡುತ್ತಾರೆ. ಈಗ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ‘ಒಲವಿನ ನಿಲ್ದಾಣ’ (Olavina Nildana Serial) ಹೆಸರಿನ ಧಾರಾವಾಹಿ ಪ್ರಸಾರ ಕಾಣಲು ರೆಡಿ ಆಗಿದೆ. ಈ ಧಾರಾವಾಹಿಯ ಪ್ರೋಮೋಗಳನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಒಲವಿನ ನಿಲ್ದಾಣ’ ಧಾರಾವಾಹಿಯ ಶೀರ್ಷಿಕೆ ಗೀತೆ ವಾಸುಕಿ ವೈಭವ್ (Vasuki Vaibhav) ಕಂಠದಲ್ಲಿ ಮೂಡಿ ಬಂದಿದ್ದು ಸಾಕಷ್ಟು ಗಮನ ಸೆಳೆಯುತ್ತಿದೆ.
‘ಒಲವಿನ ನಿಲ್ದಾಣ’ ಧಾರಾವಾಹಿಯಲ್ಲಿ ಅಕ್ಷಯ್ ನಾಯಕ್ ಹಾಗೂ ಅಮಿತಾ ಸದಾಶಿವ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಸಿದ್ಧಾಂತ್ ಪಾತ್ರದಲ್ಲಿ ಅಕ್ಷಯ್ ನಾಯಕ್ ಕಾಣಿಸಿಕೊಂಡರೆ, ಅಮಿತಾ ಅವರು ತಾರಿಣಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಮಿತಾ ಅವರು ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಒಂದು ಧಾರಾವಾಹಿಯಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಈಗ ‘ಒಲವಿನ ನಿಲ್ದಾಣ’ ಧಾರಾವಾಹಿ ಮೂಲಕ ಅವರು ಕನ್ನಡ ಕಿರತೆರೆ ಪ್ರೇಕ್ಷಕರಿಗೆ ಪರಿಚಯಗೊಳ್ಳುತ್ತಿದ್ದಾರೆ. ಅಕ್ಷಯ್ ಕೂಡ ಕಿರುತೆರೆಯಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ.
ಧಾರಾವಾಹಿ ಕಥೆ ಏನು ಎಂಬ ಬಗ್ಗೆ ಅಮಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಇದು ಒಂದು ಪ್ರೇಮಕಥೆ. ಇದು ಈಗಿನ ಜನರೇಷನ್ ಕಥೆ. ಕಥಾ ನಾಯಕಿ ಸದಾ ಕನಸು ಕಾಣುವ ಹುಡುಗಿ. ತನ್ನ ಹುಡುಗನ ಬಗ್ಗೆ ಆಕೆ ಒಂದಷ್ಟು ಕನಸು ಕಂಡಿರುತ್ತಾಳೆ. ಕಥಾ ನಾಯಕ ಸದಾ ಪ್ರಾಕ್ಟಿಕಲ್ ಆಗಿ ನಡೆದುಕೊಳ್ಳುವ ಹುಡುಗ. ಆತ ಕುಟುಂಬ ಜವಾಬ್ದಾರಿ ನಿರ್ವಹಿಸುತ್ತಾ, ದುಡ್ಡು ಮಾಡಬೇಕು ಎಂಬ ಗುರಿ ಹೊಂದಿರುತ್ತಾನೆ. ಬೆಂಗಳೂರಿನಿಂದ ತೀರ್ಥಹಳ್ಳಿ ಹೋಗುವ ಬಸ್ನಲ್ಲಿ ಇವರ ಇಬ್ಬರ ಮಧ್ಯೆ ಅಚಾನಕ್ಕಾಗಿ ಲವ್ ಆಗುತ್ತದೆ. ನಂತರ ಏನಾಗುತ್ತದೆ ಎಂಬುದು ಧಾರಾವಾಹಿಯ ಕಥೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಅಮಿತಾ.
ಶ್ರುತಿ ನಾಯ್ಡು ಪ್ರೊಡಕ್ಷನ್ ಮೂಲಕ ‘ಒಲವಿನ ನಿಲ್ದಾಣ’ ಧಾರಾವಾಹಿ ಮೂಡಿ ಬರುತ್ತಿದ್ದು, ರಮೇಶ್ ಇಂದಿರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜುಲೈ 6ರಿಂದ ಈ ಧಾರಾವಾಹಿ ಸಂಜೆ 6 ಗಂಟೆಗೆ ಪ್ರಸಾರ ಕಾಣಲಿದೆ. ಮಂಡ್ಯ ರಮೇಶ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಾಸುಕಿ ವೈಭವ್ ಅವರು ಹಾಡಿದ ಟೈಟಲ್ ಹಾಡಿಗೆ ಈಗಾಗಲೇ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ
Megha Shetty: ಕಲರ್ಸ್ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
Published On - 4:38 pm, Wed, 6 July 22