ಇದೇನಿದು ಅಚ್ಚರಿ, ಕಿರುತೆರೆಗೆ ಕಾಲಿಟ್ಟ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್
Mahanati: ‘ಕಾಟೇರ’ ದಂಥಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ತರುಣ್ ಸುಧೀರ್ ದಿಢೀರ್ ಎಂದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಏನು ಮಾಡಲು ಬಂದಿದ್ದಾರೆ ತರುಣ್ ಸುಧೀರ್?
ದೊಡ್ಡ ಪರದೆಯಲ್ಲಿ ಅವಕಾಶಗಳು ಕಡಿಮೆಯಾದಾಗಷ್ಟೆ ಸಿನಿಮಾ ನಟರು, ನಿರ್ದೇಶಕರು ಕಿರುತೆರೆ (Tv) ಕಡೆ ಮುಖ ಮಾಡುತ್ತಾರೆ ಎಂಬ ಮಾತು ಮುಂಚೆ ಇತ್ತು ಆದರೆ ಈಗದು ಬದಲಾಗಿದೆ. ಕೆಲವು ಸ್ಟಾರ್ ನಟರು ಮಾತ್ರ ರಿಯಾಲಿಟಿ ಶೋ ನಿರೂಪಕರಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ, ಸಿನಿಮಾಗಳಷ್ಟೆ ಜನಪ್ರಿಯತೆ, ಜನಾನುರಾಗ ಗಳಿಸುತ್ತಾರೆ. ಹಲವು ಸಿನಿಮಾ ನಟ-ನಟಿಯರು, ತಂತ್ರಜ್ಞರು ಟಿವಿ ರಿಯಾಲಿಟಿ ಶೋಗಳಲ್ಲಿ (Reality Show) ಭಾಗಿಯಾಗಿದ್ದಾರೆ. ಇತ್ತೀಚೆಗೆ ಸೂಪರ್-ಡೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ, ನಟ ತರುಣ್ ಸುಧೀರ್ ದಿಢೀರ್ ಎಂದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡಕ್ಕೆ ಹೊರಗಿನಿಂದ ನಾಯಕಿಯರನ್ನು ಕರೆತರುವ ಸಂಪ್ರದಾಯ ಮೊದಲಿನಿಂದಲೂ ಇದೆ. ಕೆಲವರಂತೂ ಕನ್ನಡದಲ್ಲಿ ಒಳ್ಳೆಯ ನಟಿಯರ ಕೊರತೆ ಇದೆಯೆಂಬ ಮಾತುಗಳನ್ನು ಆಗಾಗ್ಗೆ ಆಡುವುದುಂಟು. ಈ ಕೊರತೆಯನ್ನು ನೀಗಿಸಲೆಂದು ‘ಮಹಾನಟಿ’ ರಿಯಾಲಿಟಿ ಶೋ ಪ್ರಾರಂಭವಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ನಟಿಯಾಗುವ ಅರ್ಹತೆಯುಳ್ಳವರನ್ನು ಆರಿಸಿಕೊಂಡು ಬರಲಾಗಿದ್ದು, ರಿಯಾಲಿಟಿ ಶೋ ಮೂಲಕ ಒಬ್ಬ ‘ಮಹಾನಟಿ’ಯನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ:‘ಕಾಟೇರ 2’ ಬರುತ್ತಾ? ನಿರ್ದೇಶಕ ತರುಣ್ ಸುಧೀರ್ ಹೇಳಿದ್ದು ಹೀಗೆ…
ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ರಿಯಾಲಿಟಿ ಶೋನ ಪ್ರೋಮೋನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ. ನಟಿಯೊಬ್ಬರ ಗಳಿಕೆ ಬಗ್ಗೆ ಕೀಳಾಗಿ ಮಾತನಾಡುವ ವ್ಯಕ್ತಿಯೊಬ್ಬನಿಗೆ ತರುಣ್ ಸುಧೀರ್ ಬುದ್ಧಿಹೇಳುವ ವಿಡಿಯೋ ಒಂದನ್ನು ‘ಮಹಾನಟಿ’ಯ ಪ್ರೋಮೋ ಆಗಿ ಬಿಡುಗಡೆ ಮಾಡಲಾಗಿದೆ. ರಿಯಾಲಿಟಿ ಶೋ ಇದೇ ಶನಿವಾರದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
View this post on Instagram
‘ಮಹಾನಟಿ’ ರಿಯಾಲಿಟಿ ಶೋಗಾಗಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೀ ಕನ್ನಡ ತಂಡದವರು ಆಡಿಷನ್ ಮಾಡಿ ನಟಿಯಾಗಲು ಬಯಸುವ ಕೆಲವರನ್ನು ಆರಿಸಿ ತಂದಿದ್ದಾರೆ. ರಿಯಾಲಿಟಿ ಶೋ ಮೂಲಕ ಅವರಲ್ಲಿ ಅತ್ಯುತ್ತಮವಾದ ನಟಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ನಟಿಗೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಸಹ ನೀಡುವ ಸಾಧ್ಯತೆ ಇದೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಹಲವು ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಬಹಳ ಒಳ್ಳೆಯ ನಟರಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ‘ಮಹಾನಟಿ’ ರಿಯಾಲಿಟಿ ಶೋನಿಂದ ಯಾವ ಪ್ರತಿಭೆಗಳು ಹೊರಗೆ ಬರುತ್ತವೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Tue, 26 March 24