ವೀಕೆಂಡ್ ವಿತ್ ರಮೇಶ್ಗೆ ಡಿಕೆ ಶಿವಕುಮಾರ್, ಸಾಧಕರ ಕುರ್ಚಿಯಲ್ಲಿ ಟ್ರಬಲ್ ಶೂಟರ್
Weekend With Ramesh: ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ (Congress) ಅಧಿಕಾರ ಹಿಡಿದಿದೆ. ಸ್ವತಃ ಹಲವು ಕಾಂಗ್ರೆಸ್ಸಿಗರೇ ಊಹಿಸದಷ್ಟು ದೊಡ್ಡ ಗೆಲುವು ಈ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತಿದೆ. ಇದಕ್ಕೆ ಪ್ರಮುಖ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ಗೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವರ್ಣ ರಂಜಿತ ರಾಜಕೀಯ ಜೀವನ ಅನುಭವಿಸಿರುವ, ಅನುಭವಿಸುತ್ತಿರುವ ಡಿಕೆ ಶಿವಕುಮಾರ್ ಅವರ ಎಪಿಸೋಡ್, ವೀಕೆಂಡ್ ವಿತ್ ರಮೇಶ್ ಇತಿಹಾಸದಲ್ಲಿಯೇ ಮಹತ್ವದ ಎಪಿಸೋಡ್ ಆಗುವ ನಿರೀಕ್ಷೆ ಇದೆ.
ಕಳೆದ ವೀಕೆಂಡ್ನಲ್ಲಿ ನಟ ಜೈಜಗದೀಶ್ ಹಾಗೂ ಸಾಹಿತಿ ದೊಡ್ಡರಂಗೇಗೌಡ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ವಾರದ ಅತಿಥಿ ಯಾರೆಂಬುದನ್ನು ಜೀ ಕನ್ನಡದವರು ಇನ್ನೂ ಬಹಿರಂಗಗೊಳಿಸಿಲ್ಲ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಸುಳಿವು ಬಿಟ್ಟುಕೊಡುವ ಫೋಟೊಗಳನ್ನಾಗಲಿ ಜೀ ಕನ್ನಡ ಹಂಚಿಕೊಂಡಿಲ್ಲ.
ಆದರೆ ಕೆಲವು ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಎಪಿಸೋಡ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೇ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ರಾಜಕೀಯ ಮುಖಂಡರುಗಳು ಎಪಿಸೋಡ್ನಲ್ಲಿ ನೇರವಾಗಿ ಹಾಗೂ ವಿಡಿಯೋ ಮೂಲಕ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಬರಿಗೈಯಲ್ಲಿ ಹೋಗಿ ಮದುವೆ ಆಗಿದ್ದ ಸೋಮೇಶ್ವರ; ‘ವೀಕೆಂಡ್ ವಿತ್ ರಮೇಶ್’ ವೇದಿಕೆಯಲ್ಲಿ ಹೊರಬಿತ್ತು ಲವ್ಸ್ಟೋರಿ
ಡಿ.ಕೆ.ಶಿವಕುಮಾರ್ ಅವರ ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು. ಸಿಬಿಐ, ಇಡಿ, ಐಟಿ ಪ್ರಕರಣಗಳು, ಈ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವುಗಳ ಜೊತೆಗೆ ತಮ್ಮ ಕುಟುಂಬ, ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಇನ್ನೂ ಹಲವು ವಿಷಯಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ.
ಈ ಹಿಂದೆ ಕೆಲವು ರಾಜಕಾರಣಿಗಳು ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಏರಿದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಅವರುಗಳು ಅವರಲ್ಲಿ ಪ್ರಮುಖರು. ಇದೀಗ ಡಿಕೆ ಶಿವಕುಮಾರ್ ಅವರು ಸಾಧಕರ ಕುರ್ಚಿ ಏರಿ ತಮ್ಮ ಜೀವನದ ಪುಟಗಳನ್ನು ತೆರೆಯಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ