‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಜಗಳಕ್ಕೆ ಬರ ಇಲ್ಲ. ಈ ವಾರದ ಕ್ಯಾಪ್ಟನ್ ಆಗಿ ಐಶ್ವರ್ಯಾ ಹಾಗೂ ತ್ರಿವಿಕ್ರಮ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಅದು ರಾಜಕೀಯದ ಥೀಮ್ನಲ್ಲಿದೆ. ರಾಜಕೀಯ ಎಂದಮೇಲೆ ಜಗಳ ಇರಲೇಬೇಕು. ಎರಡು ಗುಂಪುಗಳ ನಡುವೆ ಈ ಆಟ ನಡೆಯುತ್ತಿದೆ. ಒಂದು ಟೀಮ್ಗೆ ಐಶ್ವಯಾ ಲೀಡರ್ ಆಗಿದ್ದರೆ, ಇನ್ನೊಂದಕ್ಕೆ ತ್ರಿವಿಕ್ರಮ್ ಲೀಡರ್ ಆಗಿದ್ದಾರೆ. ಚೈತ್ರಾ ಕುಂದಾಪುರ ಅವರು ತ್ರಿವಿಕ್ರಮ್ ಅವರ ಟೀಮ್ನಲ್ಲಿ ಇದ್ದಾರೆ.
ಇದು ಶಕ್ತಿ ಮತ್ತು ಯುಕ್ತಿಯ ಆಟ. ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿ ಆಟ ಆಡಬೇಕಾಗುತ್ತದೆ. ಹಾಗಾಗಿ ತಮ್ಮ ಟೀಮ್ನ ಸದಸ್ಯರಾದ ಚೈತ್ರಾ ಕುಂದಾಪುರ ಅವರನ್ನು ತ್ರಿವಿಕ್ರಮ್ ಅವರು ಕ್ಯಾಪ್ಟನ್ ರೂಮಿಗೆ ಕರೆದುಕೊಂಡು ಹೋದರು. ಕ್ಯಾಪ್ಟನ್ ರೂಮಿನಲ್ಲಿ ಚೈತ್ರಾ ಮತ್ತು ತ್ರಿವಿಕ್ರಮ್ ಅವರು ಮಾತನಾಡುತ್ತಿರುವಾಗ ಐಶ್ವರ್ಯಾ ಅವರ ಗಮನ ಆ ಕಡೆ ಹರಿಯಿತು. ಆಗಲೇ ಜಗಳ ಶುರುವಾಯಿತು.
ಕ್ಯಾಪ್ಟನ್ ರೂಮಿಗೆ ಬೇರೆಯವರನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೆ ಗೇಮ್ ಬಗ್ಗೆ ತಂತ್ರಗಾರಿಕೆ ಮಾಡಲು ಚೈತ್ರಾ ಅವರನ್ನು ಕ್ಯಾಪ್ಟನ್ ರೂಮಿಗೆ ತ್ರಿವಿಕ್ರಮ್ ಕರೆದುಕೊಂಡು ಹೋಗಿದ್ದಾರೆ. ಅದನ್ನು ನೋಡಿ ಐಶ್ವರ್ಯಾ ಕೆಂಡಾಮಂಡಲ ಆಗಿದ್ದಾರೆ. ‘ಮೊದಲು ಇವರನ್ನು ಹೊರಗಡೆ ಕರೆದುಕೊಂಡು ಹೋಗಿ’ ಎಂದು ಐಶ್ವರ್ಯಾ ಕೂಗಾಡಿದ್ದಾರೆ.
ಇದನ್ನೂ ಓದಿ: ಲಾಯರ್ ಅಲ್ಲ ಎಂದವರಿಗೆ ಬಿಗ್ ಬಾಸ್ನಿಂದ ಬಂದು ತಿರುಗೇಟು ಕೊಟ್ಟ ಜಗದೀಶ್
ಐಶ್ವರ್ಯಾ ಮತ್ತು ತ್ರಿವಿಕ್ರಮ್ ಅವರು ಜೋಡಿಯಾಗಿ ಕ್ಯಾಪ್ಟನ್ ಆಗಿರುವುದರಿಂದ ಕ್ಯಾಪ್ಟನ್ ರೂಮಿನ ಮೇಲೆ ಇಬ್ಬರಿಗೂ ಸಮಾನ ಅಧಿಕಾರ ಇದೆ. ಕ್ಯಾಪ್ಟನ್ ಅಲ್ಲದವರು ಆ ರೂಮಿನ ಒಳಗೆ ಹೋದರೆ ಬಿಗ್ ಬಾಸ್ ಶಿಕ್ಷೆ ನೀಡಬಹುದು. ಆ ಕಾರಣದಿಂದಲೇ ಐಶ್ವರ್ಯಾ ಅವರು ಈ ಪರಿ ಸಿಟ್ಟಾಗಿದ್ದಾರೆ. ಚೈತ್ರಾ ಅವರನ್ನು ಕೂಡಲೇ ಹೊರಗೆ ಕಳಿಸಬೇಕು ಎಂದು ಅವರು ಕೂಗಾಡಿದರು.
ಪೋಸ್ಟರ್ ಕಾಪಾಡಿಕೊಳ್ಳುವ ಟಾಸ್ಕ್ನಲ್ಲಿ ಎರಡೂ ತಂಡದವರು ಕಿತ್ತಾಡಿಕೊಂಡಿದ್ದಾರೆ. ತಳ್ಳಾಟ, ನೂಕಾಟ ಕೂಡ ನಡೆದಿದೆ. ಉಗ್ರಂ ಮಂಜು, ಗೋಲ್ಡ್ ಸುರೇಶ್ ಮುಂತಾದವರಿಗೆ ಗಾಯಗಳು ಕೂಡ ಆಗಿವೆ. ಸ್ಪರ್ಧಿಗಳ ತಳ್ಳಾಟ ಮಿತಿ ಮೀರಿದ್ದರಿಂದ ‘ಈ ಕೂಡಲೇ ಆಟ ನಿಲ್ಲಿಸಿ’ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:36 pm, Thu, 24 October 24