‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ ಆಗಿದ್ದರು. ಈಗ ಅವರು ಗೆಸ್ಟ್ ಆಗಿ ದೊಡ್ಮನೆಗೆ ಬಂದಿದ್ದಾರೆ. ಸ್ಪರ್ಧಿಗಳಿಂದ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮಾಡಿಸಿ ಅವರು ಮರಳಿದ್ದಾರೆ. ಇದರ ನಡುವೆ ಒಂದು ಘಟನೆ ಆಯಿತು. ನಾಮಿನೇಷನ್ ಮಾಡುವಾಗ ಗೌತಮಿ ಜಾದವ್ ಅವರು ಮೋಕ್ಷಿತಾ ಮೇಲೆ ಕಪ್ಪು ಮಸಿ ಎರಚಿದರು. ಇದರಿಂದಾಗಿ ಅವರಿಬ್ಬರ ನಡುವಿನ ಮನಸ್ತಾಪ ಇನ್ನಷ್ಟು ಜಾಸ್ತಿ ಆಗುವುದು ಖಚಿತವಾಗಿದೆ.
ಈ ವಾರ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ‘ಕ್ಯಾಪ್ಟನ್ ಆದವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಬೇಕು’ ಎಂದು ಕಾರ್ತಿಕ್ ಮಹೇಶ್ ಹೇಳಿದರು. ಆಗ ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಮೋಕ್ಷಿತಾ ಹೆಸರನ್ನೇ ಗೌತಮಿ ಹೇಳುತ್ತಾರೆ ಎಂಬುದು ಎಲ್ಲರ ಊಹೆ ಆಗಿತ್ತು. ಅದು ಹಾಗೆಯೇ ನಡೆಯಿತು. ಕಳೆದ ವಾರ ಕ್ಯಾಪ್ಟೆನ್ಸಿ ಆಟವನ್ನು ಮೋಕ್ಷಿತಾ ಬಿಟ್ಟುಕೊಟ್ಟಿದ್ದನ್ನೇ ಕಾರಣವಾಗಿ ಇಟ್ಟುಕೊಂಡು ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಬಳಿಕ ಕಪ್ಪು ಮಸಿಯನ್ನು ಮೋಕ್ಷಿತಾ ಮೇಲೆ ಗೌತಮಿ ಎರಚಿದರು.
ಗೌತಮಿ ಜೊತೆ ಮಾತನಾಡಲು ಕೂಡ ಮೋಕ್ಷಿತಾ ಇಷ್ಟಪಡುತ್ತಿಲ್ಲ. ಹಾಗಾಗಿ ನಾಮಿನೇಷನ್ಗೆ ತಮ್ಮ ಹೆಸರನ್ನು ಸೂಚಿಸಿದರು ಕೂಡ ಮೋಕ್ಷಿತಾ ಅವರು ವಾದ ಮಾಡಲಿಲ್ಲ. ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ಮತ್ತೆ ಒಂದಾಗಲಿ ಎಂಬ ಆಸೆ ಕೆಲವು ಪ್ರೇಕ್ಷಕರಿಗೆ ಇದೆ. ಆದರೆ ಅದಕ್ಕೆ ಮೋಕ್ಷಿತಾ ಸಿದ್ಧರಿಲ್ಲ. ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು ಗೌತಮಿ ಜೊತೆ ತಾವು ಕೈ ಜೋಡಿಸಲ್ಲ ಎಂದು ಈಗಾಗಲೇ ಮೋಕ್ಷಿತಾ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಗೌತಮಿಯ ಖುಷಿ ಸಹಿಸದೇ ಬಾತ್ ರೂಮ್ ಸೇರಿಕೊಂಡ ಮೋಕ್ಷಿತಾ
ಶೋ ಶುರುವಾದ ಕೆಲವೇ ದಿನಗಳಲ್ಲಿ ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಆಪ್ತವಾಗಿದ್ದರು. ಆದರೆ ಬರುಬರುತ್ತಾ ಮೋಕ್ಷಿತಾ ಅವರಿಗೆ ಈ ಗುಂಪು ಸರಿ ಎನಿಸಲಿಲ್ಲ. ನಂತರ ಅವರು ಪ್ರತ್ಯೇಕವಾಗಿ ಆಟವಾಡುವ ನಿರ್ಧಾರಕ್ಕೆ ಬಂದರು. ತಮಗೆ ಇರುವ ಭಿನ್ನಾಭಿಪ್ರಾಯ ಏನು ಎಂಬುದನ್ನು ನೇರವಾಗಿ ಹೇಳಲು ಮೋಕ್ಷಿತಾ ಆರಂಭಿಸಿದರು. ಗೌತಮಿ ಜೊತೆ ಅವರಿಗೆ ಇರುವ ಕಿರಿಕ್ ಹೆಚ್ಚಾಗಲು ಅದು ಕಾರಣ ಆಯಿತು. ಈ ವಾರ ಮೋಕ್ಷಿತಾ ಜೊತೆ ತ್ರಿವಿಕ್ರಮ್, ಭವ್ಯಾ, ಧನರಾಜ್, ಶಿಶಿರ್, ರಜತ್, ಹನುಮಂತ, ಚೈತ್ರಾ ಕುಂದಾಪುರ ಕೂಡ ನಾಮಿನೇಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.