ವಿಭಿನ್ನ ಧಾರಾವಾಹಿಗಳು ಮಾತ್ರವಲ್ಲದೇ ವಿಶಿಷ್ಟ ರಿಯಾಲಿಟಿ ಶೋಗಳನ್ನು ನೀಡುವಲ್ಲಿಯೂ ‘ಜೀ ಕನ್ನಡ’ (Zee Kannada) ವಾಹಿನಿ ಮುಂಚೂಣಿಯಲ್ಲಿದೆ. ಆ ಕಾರಣದಿಂದಾಗಿ ದೊಡ್ಡ ವೀಕ್ಷಕರ ವರ್ಗವನ್ನು ಸೆಳೆದುಕೊಳ್ಳಲು ಈ ವಾಹಿನಿಗೆ ಸಾಧ್ಯವಾಗಿದೆ. ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್, ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೀನ್ಸ್, ಕನ್ನಡದ ಕಣ್ಮಣಿ, ಯಾರಿಗುಂಟು ಯಾರಿಗಿಲ್ಲ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪ್ರಸಾರ ಮಾಡಿದ ಜೀ ಕನ್ನಡ ವಾಹಿನಿಯಲ್ಲಿ ಈಗ ಹೊಸದೊಂದು ಶೋ ಆರಂಭ ಆಲಿದೆ. ‘ಗೋಲ್ಡನ್ ಗ್ಯಾಂಗ್’ (Golden Gang) ಶೀರ್ಷಿಕೆಯಲ್ಲಿ ಶುರು ಆಗಲಿರುವ ಈ ಕಾರ್ಯಕ್ರಮವನ್ನು ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ನಡೆಸಿಕೊಡಲಿದ್ದಾರೆ. ಈಗಾಗಲೇ ಈ ಶೋನ ಪ್ರೋಮೋಗಳು ಗಮನ ಸೆಳೆದಿವೆ. ‘ಗೋಲ್ಡನ್ ಗ್ಯಾಂಗ್’ ಯಾವಾಗ ಆರಂಭ ಆಗಲಿದೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜ.8ರಿಂದ ಈ ಹೊಚ್ಚ ಹೊಸ ರಿಯಾಲಿಟಿ ಶೋ ಪ್ರಸಾರ ಆರಂಭಿಸಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ವೀಕ್ಷಕರು ‘ಗೋಲ್ಡನ್ ಗ್ಯಾಂಗ್’ ನೋಡಿ ಎಂಜಾಯ್ ಮಾಡಬಹುದು.
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ‘ಗೋಲ್ಡನ್ ಗ್ಯಾಂಗ್’ ಒಂದು ವಿಶೇಷ ಕಾರ್ಯಕ್ರಮ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಯಾಕೆಂದರೆ ಇದು ಸ್ನೇಹಿತರಿಗಾಗಿ ರೂಪಿಸಲಾಗಿರುವ ಕಾರ್ಯಕ್ರಮ. ಪ್ರತಿ ರಿಯಾಲಿಟಿ ಶೋಗಳಲ್ಲಿ ಮನರಂಜನೆಯ ಜೊತೆಗೆ ಒಂದು ಭಾವನಾತ್ಮಕ ಸಂದೇಶವನ್ನು ನೀಡಲು ಜೀ ಕನ್ನಡ ವಾಹಿನಿ ಪ್ರಯತ್ನಿಸುತ್ತಿದೆ. ಈ ಬಾರಿ ‘ಗೋಲ್ಡನ್ ಗ್ಯಾಂಗ್’ ಮೂಲಕ ಚಂದನವನದ ಬಹುಕಾಲದ ಗೆಳೆಯ-ಗೆಳತಿಯರ ಸ್ನೇಹ ಸಮ್ಮಿಲನದ ಕಥೆಯನ್ನು ವೀಕ್ಷಕರಿಗೆ ಪರಿಚಯಿಸಲು ವೇದಿಕೆ ಸಜ್ಜಾಗಿದೆ.
ಜೀವನದ ಎಲ್ಲ ಪ್ರಮುಖ ಘಟ್ಟಗಳಲ್ಲೂ ಭಾಗವಾಗಿರುವ ಸ್ನೇಹಿತರು ಪ್ರತಿಯೊಬ್ಬರ ಪಾಲಿಗೂ ಮಹತ್ವದ ಪಾತ್ರ ವಹಿಸುತ್ತಾರೆ. ಕುಟುಂಬದಷ್ಟೇ ಸರಿಸಮನಾಗಿ, ನಂತರ ತಾವೂ ಕೂಡ ಕುಟುಂಬದ ಭಾಗವಾಗುವ ಸ್ನೇಹಿತರಿಗೆ ಜೀ ಕನ್ನಡ ವಾಹಿನಿ ಈ ಕಾರ್ಯಕ್ರಮವನ್ನು ಅರ್ಪಿಸುತ್ತಿದೆ. ಇದರ ಜೊತೆಗೆ ಒಂದಷ್ಟು ಮೋಜು-ಮಸ್ತಿ, ಆಟ-ತುಂಟಾಟ ಕೂಡ ಈ ಶೋನಲ್ಲಿ ಇರಲಿದೆ. ಇವುಗಳಿಂದ ವೀಕ್ಷಕರಿಗೆ ಮಸ್ತ್ ಮನರಂಜನೆ ಸಿಗಲಿದೆ.
‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆಗೆ ಕಿರುತೆರೆಯಲ್ಲಿ ಮೋಡಿ ಮಾಡಿದ ಧಾರಾವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರುಗು ತಂದಂತಹ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದಂತಹ ಸಿನಿಮಾಗಳು, ವಿವಿಧ ಕ್ಷೇತ್ರಗಳಾದ ರಾಜಕೀಯ ದಿಗ್ಗಜರು, ಕ್ರೀಡಾ ತಾರೆಗಳು, ಪತ್ರಿಕೋದ್ಯಮದ ಪ್ರಮುಖರು ಕೂಡ ಭಾಗವಹಿಸುವ ನಿರೀಕ್ಷೆಗಳಿವೆ. ಆ ಮೂಲಕ ವೀಕ್ಷಕರಿಗೆ ‘ಗೋಲ್ಡನ್ ಗ್ಯಾಂಗ್’ ವಿಶೇಷ ಅನುಭೂತಿ ನೀಡಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ತಮ್ಮ ಸ್ನೇಹವಲಯದ ಪರಿಚಯ ಮಾಡಿಕೊಡುತ್ತಾರೆ. ತಮ್ಮ ಬಾಲ್ಯ ಮತ್ತು ಯೌವನವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾರೆ. ಈಗಾಗಲೇ ಬಿಡುಗಡೆಗೊಂಡಿರುವ ಕೆಲವು ಪ್ರೋಮೋಗಳಿಂದ ಕಾರ್ಯಕ್ರಮದ ಝಲಕ್ ತಿಳಿದಿದೆ. ಜೊತೆಗೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ಇಂಥ ವಿನೂತನ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ ಮಾಡುತ್ತಿರುವುದು ವಿಶೇಷ. ಕಿರುತೆರೆಯಿಂದಲೇ ಬಂದ ಗಣೇಶ್ ಅವರು ಈ ಶೋ ಮೂಲಕ ಬಹುಕಾಲದ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಇದನ್ನೂ ಓದಿ:
ನಮ್ಮ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದವರನ್ನು ಕೂಡಲೇ ಬಂಧಿಸಬೇಕು; ಗಣೇಶ್
ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್ ‘ಪುಟ್ಟಕ್ಕನ ಮಕ್ಕಳು’