AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಭಯಕ್ಕೆ ಮುಂಬೈಗೆ ಓಡಿ ಹೋಗಿದ್ದ ಹರೀಶ್ ರಾಯ್; ಅಲ್ಲಾಗಿತ್ತು ಭೂಗತ ಲೋಕದ ಪರಿಚಯ

‘ನಾನು 10ನೇ ತರಗತಿವರೆಗೆ ಮಾತ್ರ ಓದಿದೆ. ಒಂದು ದಿನ ಶಾಲೆಯಲ್ಲಿ ತಪ್ಪು ಮಾಡಿದೆ. ಅಪ್ಪನ ಕರೆದುಕೊಂಡು ಬನ್ನಿ ಎಂದರು. ಭಯದಿಂದ ಸ್ಕೂಲ್ ಬಿಟ್ಟು ಬಾಂಬೆಗೆ ಓಡಿ ಹೋದೆ. 2 ವರ್ಷ ಅಲ್ಲೇ ಇದ್ದೆ. ಉಡುಪಿಯವರ ಜೊತೆ ಇದ್ದೆ. ನಾನು ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತು. ಅವರು ಮರಳಿ ಕಳುಹಿಸಿದರು’ ಎಂದು ಹಳೆಯ ಘಟನೆಯ ಬಗ್ಗೆ ಹೇಳಿಕೊಂಡಿದ್ದರು.

ಅಪ್ಪನ ಭಯಕ್ಕೆ ಮುಂಬೈಗೆ ಓಡಿ ಹೋಗಿದ್ದ ಹರೀಶ್ ರಾಯ್; ಅಲ್ಲಾಗಿತ್ತು ಭೂಗತ ಲೋಕದ ಪರಿಚಯ
Hareesh Roy
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Nov 06, 2025 | 12:10 PM

Share

ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು. ಬದುಕಿ ಬಾಳಬೇಕಿದ್ದ ಅವರನ್ನು ಕ್ಯಾನ್ಸರ್ ಬಲಿ ಪಡೆದಿದೆ. ಹಲವು ವರ್ಷಗಳಿಂದ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಈಗ ಹರೀಶ್ ರಾಯ್ ಅವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ‘ಓಂ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಇದಲ್ಲದೆ, ‘ಕೆಜಿಎಫ್ 2’ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರ ಮಾಡಿದ್ದರು. ಅವರ ಹಿನ್ನೆಲೆ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಹರೀಶ್ ರಾಯ್ ಅವರು ಈ ಮೊದಲು ಟಿವಿ9 ಕನ್ನಡದ ಜೊತೆಗೆ ಮಾತನಾಡುವಾಗ ತಮ್ಮ ಹಿನ್ನೆಲೆಯ ಬಗ್ಗೆ ಹೇಳಿಕೊಂಡಿದ್ದರು. ‘ನಾವು ಉಡುಪಿಯವರು. ನನ್ನ ತಾಯಿ ಕಡೆಯವರು ಚಿನ್ನದ ಅಂಗಡಿ ಹೊಂದಿದ್ದರು. ನಮ್ಮ ತಂದೆಯವರು ದೊಡ್ಡ ಜಮೀನುದಾರರು. ಊಳುವವನೇ ಹೊಲದ ಒಡೆಯ ಎಂಬ ಇಂದಿರಾ ಗಾಂಧಿ ತಂದ ನಿಯಮದಿಂದ ಒಂದಷ್ಟು ತೋಟ ಹೋಯಿತು. ಆದರೂ ಸುಮಾರು ತೋಟ ಹಾಗೆಯೇ ಇತ್ತು’ ಎಂದು ಹರೀಶ್ ಹೇಳಿಕೊಂಡಿದ್ದರು.

‘ನನಗೆ ತಾಯಿಯ ಪ್ರೀತಿ ನನಗೆ ಸಿಗಲಿಲ್ಲ. ನಾನು ಬೇರೆಯವರ ಮನೆಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ಬಂತು. ಈ ಕಥೆಯನ್ನು ಇನ್ನೊಂದು ದಿನ ಹೇಳ್ತೀನಿ. ಒಂದುವರೆ ವರ್ಷ ಇದ್ದಾಗಲೇ ಬೆರೆಯವರ ಮನೆ ಸೇರಿದೆ. ನಾನು ಒಂದನೇ ತರಗತಿವರೆಗೆ ಬೇರೆಯವರ ಮನೆಯಲ್ಲೇ ಇದ್ದೆ. ನಂತರ ಮತ್ತೆ ಮನೆಗೆ ಬಂದೆ. ನನ್ನ ತಂದೆಗೆ ಕೋಪ ಜಾಸ್ತಿ. ನಾಗರ ಬೆತ್ತ ಎಂಬುದಿತ್ತು. ಅದರಲ್ಲಿ ನನ್ನ ತಂದೆ ಹೊಡೆಯುತ್ತಿದ್ದರು. ತುಂಬಾ ಏಟು ತಿಂದಿದ್ದೇನೆ’ ಎಂದಿದ್ದರು ಹರೀಶ್ ರಾಯ್.

‘ನಾನು 10ನೇ ತರಗತಿವರೆಗೆ ಮಾತ್ರ ಓದಿದೆ. ಒಂದು ದಿನ ಶಾಲೆಯಲ್ಲಿ ತಪ್ಪು ಮಾಡಿದೆ. ಅಪ್ಪನ ಕರೆದುಕೊಂಡು ಬನ್ನಿ ಎಂದರು. ಭಯದಿಂದ ಸ್ಕೂಲ್ ಬಿಟ್ಟು ಬಾಂಬೆಗೆ ಓಡಿ ಹೋದೆ. 2 ವರ್ಷ ಅಲ್ಲೇ ಇದ್ದೆ. ಉಡುಪಿಯವರ ಜೊತೆ ಇದ್ದೆ. ನಾನು ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತು. ಅವರು ಮರಳಿ ಕಳುಹಿಸಿದರು. ಬಾಂಬೆದಲ್ಲಿ ನನ್ನ ಮೇಲೆ ಕೆಲವು ಕೇಸ್​ಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದೆ. ಭೂಗತ ಜಗತ್ತಿನ ಪರಿಚಯವೂ ಆಗಿತ್ತು. ಹೀಗಾಗಿ, 1994ರಲ್ಲಿ ಬೆಂಗಳೂರಿಗೆ ಬಂದೆ’ ಎಂದಿದ್ದರು ಅವರು.

ಇದನ್ನೂ ಓದಿ: ಗೆದ್ದ ಕ್ಯಾನ್ಸರ್, ಖ್ಯಾತ ಖಳನಟ ಹರೀಶ್ ರಾಯ್ ನಿಧನ

‘ನನ್ನ ಗೆಳೆಯರೊಬ್ಬರು ಉಪೇಂದ್ರ ಅವರನ್ನು ಪರಿಚಯ ಮಾಡಿದರು. ಆ ಬಳಿಕ ಇಂಡಸ್ಟ್ರಿ ಪರಿಚಯ ಆಯಿತು. ಈ ವೇಳೆ ‘ಓಂ’ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು’ ಎಂದಿದ್ದರು ಹರೀಶ್ ರಾಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.