‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಗೆ ಸಾಕಷ್ಟು ಟ್ವಿಸ್ಟ್ಗಳನ್ನು ನೀಡುತ್ತಿದ್ದಾರೆ ನಿರ್ದೇಶಕರು. ಆರ್ಯವರ್ಧನ್ ಪಾತ್ರಧಾರಿ ಬದಲಾಗಿದ್ದಾರೆ. ಅನಿರುದ್ಧ ಜತ್ಕರ್ ಮಾಡುತ್ತಿದ್ದ ಪಾತ್ರವನ್ನು ಈಗ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹೊಸ ಪಾತ್ರಧಾರಿಗೆ ವೀಕ್ಷಕರು ಹೊಂದಿಕೊಳ್ಳುತ್ತಿದ್ದಾರೆ. ಪಾತ್ರಧಾರಿ ಬದಲಾದ ಕಾರಣ ಕಥೆಯಲ್ಲಿ ಒಂದಷ್ಟು ವಿಚಾರಗಳನ್ನು ಬದಲಾಯಿಸಿಕೊಂಡಿದ್ದಾರೆ ನಿರ್ದೇಶಕರು. ಹೊಸ ಆರ್ಯವರ್ಧನ್ನ (Aryavardhan) ಸಂಜು ಎಂದು ಪರಿಚಯಿಸಲಾಗಿದೆ. ಆತನಿಗೆ ನೆನಪೆಲ್ಲವೂ ಅಳಿಸಿ ಹೋಗಿದೆ. ಅಷ್ಟೇ ಅಲ್ಲ, ಮುಖ ಬದಲಾಗಿದೆ. ಈತ ಯಾರು ಎಂದು ಬೆನ್ನತ್ತಿ ಹೋದ ಝೇಂಡೆಗೆ ಹಲವು ವಿಚಾರಗಳು ಗೊತ್ತಾಗಿದೆ.
ಆರ್ಯವರ್ಧನ್ ಸಹೋದರನ ಹೆಸರು ವಿಶ್ವಾಸ್ ದೇಸಾಯಿ. 700 ಕೋಟಿ ರೂಪಾಯಿ ಸಾಲ ಮಾಡಿಕೊಂಡ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ. ಆತನ ಮುಖದ ಚರ್ಮವನ್ನು ತೆಗೆದು ಆರ್ಯವರ್ಧನ್ಗೆ ಹಾಕಲಾಗಿದೆ. ಈ ಕಾರಣಕ್ಕೆ ವಿಶ್ವಾಸ್ ರೀತಿ ಕಾಣಿಸುತ್ತಿದ್ದಾನೆ ಆರ್ಯವರ್ಧನ್. ಹೀಗಾಗಿ ಆತ ವಿಶ್ವಾಸ್ ಎಂದು ಎಲ್ಲರೂ ನಂಬಿದ್ದಾರೆ. ‘ಈತ ನನ್ನ ಮಗ ವಿಶ್ವಾಸ್. ಆತನನ್ನು ನಾವು ಪ್ರೀತಿಯಿಂದ ಸಂಜು ಎಂದು ಕರೆಯುತ್ತೇವೆ’ ಎಂದು ರಾಜ ನಂದಿನಿ ಕುಟುಂಬಕ್ಕೆ ಪರಿಚಯ ಮಾಡಿದ್ದಳು ಸಂಜುವಿನ ತಾಯಿ ಪ್ರಿಯಾ.
ವಿಶ್ವಾಸ್ ದೇಸಾಯಿ ಚಿಕಿತ್ಸೆ ಪಡೆದ ಆಸ್ಪತ್ರೆಗೆ ತೆರಳಿದ ಝೇಂಡೆ ಅಲ್ಲಿ ಕೆಲವರನ್ನು ವಿಚಾರಿಸಿದ್ದ. ಆಗ ವಿಶ್ವಾಸ್ ಎಂಬ ರೋಗಿ ನಿಧನ ಹೊಂದಿದ್ದಾನೆ ಎಂಬ ವಿಚಾರ ಗೊತ್ತಾಗಿತ್ತು. ಇದನ್ನು ಕೇಳಿ ಝೇಂಡೆ ಶಾಕ್ಗೆ ಒಳಗಾಗಿದ್ದಾನೆ. ಇತ್ತ ವಿಶ್ವಾಸ್ ಮನೆಗೆ ಹೋಗಿಯೂ ಝೇಂಡೆ ವಿಚಾರಿಸಿದ್ದಾನೆ. ‘ವಿಶ್ವ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮನೆ ಕೆಲಸದವನು ಹೇಳಿದ್ದಾನೆ. ಇದನ್ನು ಕೇಳಿ ಝೇಂಡೆಗೆ ಅನುಮಾನ ವ್ಯಕ್ತವಾಗಿದೆ. ರಾಜ ನಂದಿನಿ ನಿವಾಸಕ್ಕೆ ಸೇರಿದ ವಿಶ್ವಾಸ್ ಯಾರು ಎಂಬ ಬಗ್ಗೆ ಸಾಕಷ್ಟು ಗೊಂದಲ ಮೂಡಿದೆ. ಆತನ ಎದುರು ದೊಡ್ಡ ಗೊಂದಲದ ಗೂಡೇ ಸೃಷ್ಟಿ ಆಗಿದೆ.
ಆರ್ಯವರ್ಧನ್ ಹತ್ಯೆ ಮಾಡಲು ಯಾರೋ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಝೇಂಡೆಗೆ ಮೂಡಿತ್ತು. ಅದು ಅನು ಎಂದು ಆತ ಬಲವಾಗಿ ನಂಬಿದ್ದಾನೆ. ಹೀಗಿರುವಾಗಲೇ ರಾಜ ನಂದಿನಿ ನಿವಾಸಕ್ಕೆ ಹೊಸಬನ ಎಂಟ್ರಿ ಆಗಿರುವುದು ಆತನಿಗೆ ಸಾಕಷ್ಟು ಅನುಮಾನ ಮೂಡಿಸಿದೆ. ಆತ ಯಾರು ಎಂದು ಕಂಡು ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾನೆ.
ಸಂಜುಗೆ ಅನು ಮೇಲೆ ಪ್ರೀತಿ:
ಸಂಜು (ಆರ್ಯವರ್ಧನ್) ಅನೇಕ ಬಾರಿ ಅನು ಸಿರಿಮನೆಯನ್ನು ಭೇಟಿ ಮಾಡಿದ್ದಾನೆ. ಆತನಿಗೆ ಗೊತ್ತಿಲ್ಲದೆ ಆಕೆಯ ಮೇಲೆ ಪ್ರೀತಿ ಹುಟ್ಟುತ್ತಿದೆ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೆ ತಿಳಿಯುತ್ತಿಲ್ಲ. ‘ಅನು ಬೇರೊಬ್ಬನ ಹೆಂಡತಿ. ಅಷ್ಟೇ ಅಲ್ಲ ಪ್ರೆಗ್ನೆಂಟ್ ಕೂಡ. ಅವಳ ಮೇಲೆ ಪ್ರೀತಿ ಹುಟ್ಟುತ್ತದೆ ಎಂದರೆ ಏನರ್ಥ. ಅವಳಿಂದ ನಾನು ಅಂತರ ಕಾಯ್ದುಕೊಳ್ಳಬೇಕು’ ಎಂದು ಸಂಜು ನಿರ್ಧರಿಸಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಅನುಮೇಲೆ ಆತನಿಗೆ ಮತ್ತೆ ಒಲವು ಹುಟ್ಟಿದೆ. ಹೀಗಿರುವಾಗಲೇ ಹೆಂಡತಿಯ ಕರೆ ಬಂದಿದೆ.
ವಿಶ್ವಾಸ್ ದೇಸಾಯಿ ಪತ್ನಿ ಹೆಸರು ಆರಾಧನಾ. ಈಗ ಸಂಜು ಕೈಯಲ್ಲಿ ಇರುವ ಮೊಬೈಲ್ ಕೂಡ ವಿಶ್ವಾಸ್ದೆ. ವಿಶ್ವಾಸ್ ಮೃತಪಟ್ಟ ವಿಚಾರ ಆರಾಧನಾಗೆ ತಿಳಿದಿಲ್ಲ. ಇತ್ತ ಸಂಜುಗೆ ತನ್ನ ಹಿನ್ನೆಲೆ ಗೊತ್ತಿಲ್ಲ. ಹೀಗಾಗಿ, ತನ್ನ ಮೊಬೈಲ್ಗೆ ಬಂದ ಕರೆಯನ್ನು ಆತ ಸ್ವೀಕರಿಸಿದ್ದಾನೆ. ಆ ಕಡೆಯಿಂದ ಪತ್ನಿ ಆರಾಧನಾ ಮಾತನಾಡಿದ್ದಾಳೆ. ಇದರಿಂದ ಆತನ ಮನಸ್ಸು ಕೂಡ ಗೊಂದಲದ ಗೂಡಾಗಿದೆ.
ಶ್ರೀಲಕ್ಷ್ಮಿ ಎಚ್.