ಅನುನ ಕೊಲ್ಲಲು ಬಂದವರ ಹುಡುಕಿ ಹೊರಟನಾ ಆರ್ಯವರ್ಧನ್? ಝೇಂಡೆಗೆ ಆತಂಕ
ಅನುನ ಕೊಲ್ಲಲು ಬಂದವರನ್ನು ಸಂಜು ನೋಡಿದ್ದಾನೆ. ಅನು ನೀರಿಗೆ ಬಿದ್ದ ಸಂದರ್ಭದಲ್ಲಿ ಆಕೆಯ ಕಾಲಿಗೆ ಸಿಕ್ಕಿದ್ದ ಮೀನಿನ ಬಲೆಯ ತುಂಡನ್ನು ಆತ ಹಿಡಿದುಕೊಂಡು ಬಂದಿದ್ದಾನೆ.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ (Jote Joteyali serial) ಆರ್ಯವರ್ಧನ್ ನಿಧನ ಹೊಂದಿದ್ದಾನೆ ಅನ್ನೋದು ಎಲ್ಲರ ನಂಬಿಕೆ. ಆದರೆ, ಅಸಲಿಗೆ ಆರ್ಯವರ್ಧನ್ ಸತ್ತಿಲ್ಲ. ಆತ ಬದುಕಿದ್ದಾನೆ. ಅವನ ತಾಯಿ ಪ್ರಿಯಾಗೆ ಈ ವಿಚಾರ ಗೊತ್ತಿದೆ. ಆದರೆ, ಅದನ್ನು ಮುಚ್ಚಿಟ್ಟು ಸಾಕಷ್ಟು ಪಶ್ಚಾತಾಪ ಪಡುತ್ತಿದ್ದಾಳೆ. ಸತ್ಯವನ್ನು ಹೇಳಲೂ ಆಗದೆ, ಬಿಡಲೂ ಆಗದೆ ಒದ್ದಾಡುತ್ತಿದ್ದಾಳೆ. ಈ ಸತ್ಯ ಯಾವಾಗ ರಿವೀಲ್ ಆಗುತ್ತದೆ ಅನ್ನೋದು ಸದ್ಯದ ಕುತೂಹಲ. ಈ ಮಧ್ಯೆ ಅನುನ ಕೊಲ್ಲಲು ಪ್ಲ್ಯಾನ್ ನಡೆದಿತ್ತು. ಇದರ ತನಿಖೆಗೆ ಸ್ವತಃ ಸಂಜು (ಹೊಸ ಆರ್ಯವರ್ಧನ್) ಮುಂದಾಗುತ್ತಾನೆಯೇ ಎಂಬ ಕುತೂಹಲ ಮೂಡಿದೆ.
ಆರ್ಯವರ್ಧನ್ ಸಾವಿಗೆ ಅನು ಕಾರಣ ಎಂದು ಬಲವಾಗಿ ನಂಬಿದ್ದಾನೆ ಝೇಂಡೆ. ಅಪಘಾತಕ್ಕೂ ಮುನ್ನ ಆರ್ಯವರ್ಧನ್ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದನ್ನು ಹಿಂಬಾಲಿಸಿ ಮತ್ತೊಂದು ಕಾರು ಹೋಗಿತ್ತು. ಅದು ಅನು ಕಾರು ಎಂದು ಝೇಂಡೆ ನಂಬಿದ್ದಾನೆ. ಇದರ ಜತೆಗೆ ಝೇಂಡೆಯನ್ನು ರಾಜನಂದಿನಿ ನಿವಾಸದಿಂದ ದೂರ ಇಡಲಾಗಿದೆ. ಈ ಕಾರಣಕ್ಕೆ ಝೇಂಡೆ ಸಿಟ್ಟಾಗಿದ್ದಾನೆ. ಹೀಗಾಗಿ ಅನುನ ಕೊಲ್ಲಲು ನಿರ್ಧರಿಸಿದ್ದ.
ಅನುನ ಕೊಲ್ಲಲು ಬಂದವರನ್ನು ಸಂಜು ನೋಡಿದ್ದಾನೆ. ಅನು ನೀರಿಗೆ ಬಿದ್ದ ಸಂದರ್ಭದಲ್ಲಿ ಆಕೆಯ ಕಾಲಿಗೆ ಸಿಕ್ಕಿದ್ದ ಮೀನಿನ ಬಲೆಯ ತುಂಡನ್ನು ಆತ ಹಿಡಿದುಕೊಂಡು ಬಂದಿದ್ದಾನೆ. ಅನುನ ಕೊಲ್ಲೋಕೆ ಯಾರು ಪ್ರಯತ್ನಿಸಿದ್ದರು ಎಂಬುದನ್ನು ತನಿಖೆ ಮಾಡಲು ಸಂಜು ಮುಂದಾಗುವ ಸೂಚನೆ ಸಿಕ್ಕಿದೆ.
ಸಂಜು ಆಸ್ಪತ್ರೆಗೆ ಹೊರಟಿದ್ದ. ಆತ ನಿಜಕ್ಕೂ ಆಸ್ಪತ್ರೆಗೆ ತೆರಳುತ್ತಾನಾ ಅಥವಾ ಕೊಲೆ ಮಾಡಲು ಸಂಚು ನಡೆದ ಜಾಗಕ್ಕೆ ಹೋಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ. ಅನು ನೀರಿಗೆ ಬಿದ್ದಿದ್ದು ಆಕಸ್ಮಿಕ ಅಲ್ಲ ಎಂಬುದನ್ನು ಹರ್ಷನಿಗೆ ಸಂಜು ಹೇಳಿದ್ದ. ಆದರೆ, ಈ ಮಾತನ್ನು ಹರ್ಷ ನಂಬಿಲ್ಲ.
ಸಂಜುಗೆ ಬರುತ್ತಿದೆ ಹಳೆಯ ನೆನಪು
ಸಂಜುಗೆ ಝೇಂಡೆ ಎದುರಾಗಿದ್ದ. ಈ ವೇಳೆ ಝೇಂಡೆಗೆ ಆರ್ಯವರ್ಧನ್ನ ಮೊಬೈಲ್ ಸಂಖ್ಯೆ ನೀಡಿದ್ದ ಸಂಜು. ಈತ ಸಂಜು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಇವನೇ ಆರ್ಯವರ್ಧನ್ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ, ಸಂಜು ಯಾಕೆ ಆರ್ಯವರ್ಧನ್ ಮೊಬೈಲ್ ಸಂಖ್ಯೆ ನೀಡಿದ ಎಂಬ ಅನುಮಾನ ಝೇಂಡೆಗೆ ಮೂಡಿದೆ. ಇನ್ನು ವಯಸ್ಸಿನ ವಿಚಾರ ಹೇಳುವಾಗ ‘ನನಗೆ ಈಗಷ್ಟೇ 46 ಮುಗಿದು 47 ತುಂಬಿದೆ’ ಎಂದು ಸಂಜು ಹೇಳಿದ್ದಾನೆ. ಇದು ಆರ್ಯವರ್ಧನ್ನ ವಯಸ್ಸು. ಹೀಗಾಗಿ, ಸಂಜು ಸುಪ್ತಮನಸ್ಸಿನಿಂದ ಆರ್ಯವರ್ಧನ್ ರೀತಿ ವರ್ತಿಸುತ್ತಿದ್ದಾನೆ. ಮುಂದೆ ಈ ವಿಚಾರ ಗೊತ್ತಾದಾಗ ಯಾರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಾನ್ಸಿಗೆ ಮೂಡಿದೆ ಅನುಮಾನ
ಆರ್ಯವರ್ಧನ್ ಮೊಬೈಲ್ ಸಂಖ್ಯೆಯನ್ನು ಸಂಜು ತನ್ನ ದೂರವಾಣಿ ಸಂಖ್ಯೆ ಎಂದು ನೀಡಿರುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹರ್ಷ ಹಾಗೂ ಮಾನ್ಸಿಗೆ ಮೀರಾ ಈ ವಿಚಾರವನ್ನು ತಿಳಿಸಿದ್ದಾಳೆ. ‘ದೇಸಾಯಿ ಕುಟುಂಬದವರಿಗೆ ನಮ್ಮಮೇಲೆ ಸಿಟ್ಟಿದೆ. ಈಗ ಬಂದಿರುವ ವ್ಯಕ್ತಿ ಸಾಮಾನ್ಯದವನಲ್ಲ. 700 ಕೋಟಿ ರೂಪಾಯಿ ಸಾಲ ಮಾಡಿಕೊಂಡು ಬಂದಿದ್ದಾನೆ. ಮುಂದೊಂದು ದಿನ ಈತ ತಾನೇ ಆರ್ಯವರ್ಧನ್ ಎಂದು ಹೇಳುತ್ತಾನೆ. ನನ್ನ ಮಾತು ನಿಜ ಆಗೇ ಆಗುತ್ತದೆ ಬೇಕಿದ್ದರೆ ನೋಡಿ’ ಎಂದು ಮಾನ್ಸಿ ಭವಿಷ್ಯ ನುಡಿದಿದ್ದಾಳೆ. ಮುಂದೊಂದು ದಿನ ಸಂಜು ನಾನೇ ಆರ್ಯವರ್ಧನ್ ಎಂದು ಹೇಳಿದರೂ ಅದನ್ನು ನಂಬೋಕೆ ಮನೆಯವರಿಗೆ ಕಷ್ಟ ಆಗಬಹುದು.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Wed, 5 October 22