‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್ ಬದುಕಿದ್ದಾನೆ. ಆದರೆ, ಆತನ ರೂಪ ಬದಲಾಗಿದೆ. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಅನು ಸಿರಿಮನೆ ಪತಿಯನ್ನು ಕಳೆದುಕೊಂಡಿದ್ದೇನೆ ಎಂದು ನಂಬಿ ಕಣ್ಣೀರು ಹಾಕುತ್ತಿದ್ದಾಳೆ. ಆತ ಬದುಕಿದ್ದಾನೆ ಎಂಬ ವಿಚಾರ ಗೊತ್ತಾದರೂ ಅದನ್ನು ನಂಬೋದು ಆಕೆಗೆ ಕಷ್ಟ ಆಗಬಹುದು. ಇದಕ್ಕೆ ಕಾರಣ ಆರ್ಯವರ್ಧನ್ಗೆ ನೆನಪೆಲ್ಲವೂ ಅಳಿಸಿ ಹೋಗಿದ್ದು ಹಾಗೂ ಮುಖದ ರೂಪ ಬದಲಾಗಿದ್ದು. ಈ ವಿಚಾರದ ಬಗ್ಗೆ ಜೋಗ್ತವ್ವ ಸತ್ಯ ಹೇಳಿದ್ದಾಳೆ. ಆದರೆ ಇದನ್ನು ಅನು ಸಿರಿಮನೆ ಹೇಗೆ ಸ್ವೀಕರಿಸುತ್ತಾಳೆ, ನಿಜ ವಿಚಾರ ಆಕೆಗೆ ಗೊತ್ತಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಅನು ಸಿರಿಮನೆ ನೀರಿನಲ್ಲಿ ಜಾರಿ ಬಿದ್ದಿದ್ದಳು. ಆಕೆಯನ್ನು ಕೊಲ್ಲಲು ಝೇಂಡೆ ಪ್ಲ್ಯಾನ್ ರೂಪಿಸಿದ್ದ. ಅನು ನೀರಿಗೆ ಬಿದ್ದಿದ್ದು ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ. ನೀರಿನಲ್ಲಿ ಬಿದ್ದ ನಂತರದಲ್ಲಿ ಸಂಜು (ಹೊಸ ಆರ್ವರ್ಧನ್) ಆಕೆಯನ್ನು ಬದುಕಿಸಿದ್ದ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ಆಕೆ ನೇರವಾಗಿ ವಠಾರಕ್ಕೆ ತೆರಳಿದ್ದಾಳೆ. ಅನು ಇಲ್ಲದೆ ರಾಜ ನಂದಿನಿ ವಿಲಾಸ ಬಡವಾಗಿದೆ.
ರಾಜ ನಂದಿನಿ ವಿಲಾಸಕ್ಕೆ ಜೋಗ್ತವ್ವ ಬಂದಿದ್ದಾಳೆ. ಬಂದವಳೇ ಭವಿಷ್ಯ ಹೇಳಿದ್ದಾಳೆ. ‘ಮಗಳು ಇಲ್ಲದ ಮನೆ ಮನೆ ಹೇಗೆ ಆಗ್ತದೆ? ಆಕೆಗೆ ಇಲ್ಲಿಗೆ ಬರೋಕೆ ಹೇಳಿ. ಆಕೆಯ ಸಂತೋಷ ಆಕೆಯ ಕಣ್ಣೆದುರೇ ಇದೆ. ಅದನ್ನು ಗುರುತಿಸೋಕೆ ಹೇಳಿ’ ಎಂದು ಜೋಗ್ತವ್ವ ಹೇಳಿದ್ದಾಳೆ. ಆರ್ಯವರ್ಧನ್ ಬದುಕಿದ್ದಾನೆ ಎಂಬ ವಿಚಾರವನ್ನು ಜೋಗ್ತವ್ವ ಪರೋಕ್ಷವಾಗಿ ಹೇಳಿದ್ದಾಳೆ. ಇದು ಅನುಗೆ ತಿಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕೈ ತಪ್ಪಿ ಹೋದ ಅಪರಾಧಿ:
ಚಿಕಿತ್ಸೆ ಪಡೆಯಲು ಸಂಜು ಆಸ್ಪತ್ರೆಗೆ ತೆರಳಿದ್ದ. ಆ ಬಳಿಕ ಆತ ತೆರಳಿದ್ದು ಅನು ಮನೆಗೆ. ಕಮಲಮ್ಮನ ವಠಾರದ ಬಳಿ ಬಸ್ನಿಂದ ಇಳಿದ ಸಂಜು ನೇರವಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಅನು ತಂದೆ ಸುಬ್ಬುಗೆ ಸಂಜುನ ಕಂಡು ಅಚ್ಚರಿ ಆಗಿದೆ. ಮನೆ ಒಳಗೆ ತೆರಳಿ ಟೀ ಹೀರಿದ ಸಂಜು ಮರಳಿ ಹೊರಗೆ ಬಂದಿದ್ದಾನೆ. ಈ ವೇಳೆ ಅನುನ ಹತ್ಯೆ ಮಾಡಲು ಪ್ರಯತ್ನಿಸಿದ ವ್ಯಕ್ತಿ ಕಣ್ಣಿಗೆ ಬಿದ್ದಿದ್ದಾನೆ. ಅನು ನೀರಿಗೆ ಬೀಳುವುದಕ್ಕೂ ಮೊದಲು ಸುಪಾರಿ ಕಿಲ್ಲರ್ ಅಲ್ಲಿ ಕಾಣಿಸಿಕೊಂಡಿದ್ದ. ಆತನ ಮೇಲೆ ಸಂಜುಗೆ ಅನುಮಾನ ಮೂಡಿತ್ತು.
ಸುಪಾರಿ ಕಿಲ್ಲರ್ ಕಾಣುತ್ತಿದ್ದಂತೆ ಆತನನ್ನು ಬೆನ್ನು ಹತ್ತಿ ಓಡಿದ್ದಾನೆ ಸಂಜು. ಇನ್ನೇನು ಕೈಗೆ ಸಿಕ್ಕಿದ ಎನ್ನುವಾಗ ಆತ ತಪ್ಪಿಸಿಕೊಂಡಿದ್ದ. ಆತ ಯಾರು? ಆತನ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಂಜುಗೆ ಇದೆ. ಈ ಕಾರಣಕ್ಕೆ ಆತನನ್ನು ಬೆನ್ನತ್ತಿ ಹೋಗಿದ್ದ. ಆದರೆ, ಈ ಪ್ರಯತ್ನ ವಿಫಲವಾಗಿತ್ತು.
ಮಾನ್ಸಿಗೆ ಹೆಚ್ಚಿದ ಅನುಮಾನ:
ಸಂಜು ನೇರವಾಗಿ ಕಮಲಮ್ಮನ ವಠಾರಕ್ಕೆ ಹೋಗಿದ್ದಾನೆ ಎಂಬ ವಿಚಾರ ತಿಳಿದು ಹರ್ಷನ ಹೆಂಡತಿ ಮಾನ್ಸಿ ಅನುಮಾನಕ್ಕೆ ಒಳಗಾಗಿದ್ದಾಳೆ. ಮೊದಲಿನಿಂದಲೂ ಆಕೆ ಸಂಜು ಮೇಲೆ ಅನುಮಾನ ಪಡುತ್ತಲೇ ಬರುತ್ತಿದ್ದಾಳೆ. ಆತನ ಹೆಸರು ಸಂಜು ಅಲ್ಲ ಎಂಬ ಅನುಮಾನವೂ ಅವಳಲ್ಲಿ ಇದೆ. ಈ ಕಾರಣಕ್ಕೆ ಆತನ ಬಗ್ಗೆ ಗೂಢಚರ್ಯ ಮಾಡುತ್ತಿದ್ದಾಳೆ. ಆಕೆಗೆ ಸಂಜುನ ಅಸಲಿ ಹೆಸರು ಬೇರೆ ಏನೋ ಇದೆ ಎಂಬ ಅನುಮಾನ ಬಹುವಾಗಿ ಕಾಡಿದೆ. ಈ ವಾದವನ್ನು ಮಾನ್ಸಿ ಎಲ್ಲರ ಎದುರು ಪ್ರಸ್ತುತ ಪಡಿಸಿದ್ದಾಳೆ. ಇದನ್ನು ಕೇಳಿ ಸಂಜು ತಾಯಿ ಪ್ರಿಯಾಗೆ ಶಾಕ್ ಆಗಿದೆ.
ಶ್ರೀಲಕ್ಷ್ಮಿ ಎಚ್.
Published On - 7:30 am, Tue, 11 October 22