ಕಮಲಮ್ಮನ ವಠಾರಕ್ಕೆ ಬಂದ ಆರ್ಯವರ್ಧನ್ಗೆ ಅಚ್ಚರಿಯ ಮೇಲೆ ಅಚ್ಚರಿ; ಅನು ಮನೆಯವರಿಗೆ ಮೂಡಿತು ಅನುಮಾನ
ಸಂಜು ಕೌನ್ಸಲಿಂಗ್ ಪಡೆಯಲು ಆಸ್ಪತ್ರೆಗೆ ತೆರಳಿದ್ದ. ಅಲ್ಲಿ ತನ್ನ ಪ್ರೀತಿಯ ಕಥೆ ಆತನಿಗೆ ನೆನಪಾಗಿದೆ. ಇದೇ ಖುಷಿಯಲ್ಲಿ ಆತ ಮನೆಗೆ ಬಂದಿದ್ದಾನೆ. ಬಸ್ ಹತ್ತಿದ್ದ ಸಂಜು ಇಳಿದುಕೊಂಡಿದ್ದು ಕಮಲಮ್ಮನ ವಠಾರದಲ್ಲಿ.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ (Jothe Jotheyali Serial) ಆರ್ಯವರ್ಧನ್ ಪಾತ್ರಧಾರಿ ಬದಲಾಗಿದ್ದಾರೆ. ಅನಿರುದ್ಧ ಜತ್ಕರ್ ಬದಲು ಹರೀಶ್ ರಾಜ್ ಅವರು ಈ ಪಾತ್ರವನ್ನು ಮಾಡುತ್ತಿದ್ದಾರೆ. ಹೊಸ ಆರ್ಯವರ್ಧನ್ನನ್ನು ಒಪ್ಪಿಕೊಳ್ಳೋಕೆ ವೀಕ್ಷಕರಿಗೆ ಸ್ವಲ್ಪ ಕಷ್ಟ ಆಗುತ್ತಿದೆ. ಆದರೆ, ದಿನಕಳೆದಂತೆ ಹೊಸ ಪಾತ್ರಧಾರಿಯನ್ನು ವೀಕ್ಷಕರು ಇಷ್ಟಪಡುತ್ತಿದ್ದಾರೆ. ಆರ್ಯವರ್ಧನ್ (Aryavardhan) ಅನ್ನು ಸಂಜು ಎಂದು ಪರಿಚಯಿಸಲಾಗಿದೆ. ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸಂಜುಗೆ ಹಳೆಯ ನೆನಪೆಲ್ಲವೂ ಮಾಸಿ ಹೋಗಿದೆ. ಇದರ ಜತೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿರುವುದರಿಂದ ಮುಖದ ಚಹರೆ ಕೂಡ ಬದಲಾಗಿದೆ. ಹೀಗಾಗಿ, ಆತನನ್ನು ಯಾರೂ ಗುರುತಿಸುತ್ತಿಲ್ಲ. ಈಗ ಸಂಜುಗೆ ನಿಧಾನವಾಗಿ ಹಳೆಯ ನೆನಪುಗಳು ಕಾಡುತ್ತಿವೆ. ಆತ ಆರ್ಯವರ್ಧನ್ ಆಗಿ ಬದಲಾಗುತ್ತಿದ್ದಾನೆ.
ಸಂಜು ಕೌನ್ಸಲಿಂಗ್ ಪಡೆಯಲು ಆಸ್ಪತ್ರೆಗೆ ತೆರಳಿದ್ದ. ಅಲ್ಲಿ ತನ್ನ ಪ್ರೀತಿಯ ಕಥೆ ಆತನಿಗೆ ನೆನಪಾಗಿದೆ. ಇದೇ ಖುಷಿಯಲ್ಲಿ ಆತ ಮನೆಗೆ ಬಂದಿದ್ದಾನೆ. ಬಸ್ ಹತ್ತಿದ್ದ ಸಂಜು ಇಳಿದುಕೊಂಡಿದ್ದು ಕಮಲಮ್ಮನ ವಠಾರದಲ್ಲಿ. ಇದು ಅನುಳ ಮೂಲ ಮನೆ. ತಾನು ಇಲ್ಲಿ ಇಳಿದುಕೊಂಡಿದ್ದು ಏಕೆ ಎಂಬುದು ಕೂಡ ಆತನಿಗೆ ಗೊತ್ತಾಗಿಲ್ಲ. ಈ ಕಾರಣದಿಂದ ಆತನಿಗೆ ಗೊಂದಲ ಕಾಡಿದೆ. ಕಮಲಮ್ಮನ ಮನೆ ಗೇಟ್ ತೆಗೆದು ಸಂಜು ಒಳಗೆ ಬಂದಿದ್ದಾನೆ.
ಸಂಜು ಒಳಗೆ ಬರುತ್ತಿದ್ದಂತೆ ಆತನಿಗೆ ಅನುನ ತಂದೆ ಸುಬ್ಬು ಎದುರಾಗಿದ್ದಾನೆ. ಸಂಜುನ ನೋಡಿ ಆತನಿಗೆ ಖುಷಿ ಆಗಿದೆ. ಹೀಗಾಗಿ, ವಠಾರದ ಒಳಗೆ ಆತನನ್ನು ಕರೆದು ತಂದಿದ್ದಾನೆ ಸುಬ್ಬು. ಮನೆ ಒಳಗೆ ಬರುತ್ತಿದ್ದಂತೆ ಸಂಜುಗೆ ಹಳೆಯ ನೆನಪುಗಳು ಕಾಡಿವೆ. ‘ನಾನು ಇಲ್ಲಿಗೆ ಏಕೆ ಬಂದೆ ಅನ್ನೋದು ಗೊತ್ತಿಲ್ಲ. ಆದರೆ, ನಾನು ಇದೇ ಸ್ಟಾಪ್ನಲ್ಲಿ ಇಳಿದೆ. ಇಲ್ಲಿಗೆ ಬಂದು ಅಭ್ಯಾಸವಾಗಿದೆ ಎಂಬಂತೆ ಭಾಸವಾಯಿತು. ಹೀಗಾಗಿ, ಇಲ್ಲಿ ಇಳಿದುಕೊಂಡೆ. ಆದರೆ, ಬಂದಿದ್ದು ಏಕೆ ಎಂಬುದೇ ಗೊತ್ತಾಗಿಲ್ಲ’ ಎಂದು ಸಂಜು ಹೇಳಿದ್ದಾನೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಹಾಗೂ ಅನುಮಾನ ಮೂಡಿದೆ.
ಸಂಜುಗೆ ಅನು ತಾಯಿ ಪುಷ್ಪಾ ಟೀ ಮಾಡಿಕೊಂಡು ಬಂದುಕೊಟ್ಟಿದ್ದಾಳೆ. ಇದನ್ನು ಕುಡಿದ ಸಂಜು ಟೀ ಅನ್ನು ಹೊಗಳಿದ್ದಾನೆ. ‘ಶುಂಠಿ ಟೀ. ನಾನು ಇದನ್ನು ಮೊದಲೇ ಎಲ್ಲೋ ಕುಡಿದ್ದೀನಿ ಅಂತ ಅನಿಸುತ್ತಿದೆ. ಟೀನಲ್ಲಿ ನನ್ನ ಹಳೆಯ ನೆನಪುಗಳನ್ನು ಬೆರೆಸಿ ಕೊಟ್ಟಂತೆ ಭಾಸವಾಯಿತು. ನಿಜಕ್ಕೂ ಟೀ ಉತ್ತಮವಾಗಿತ್ತು’ ಎಂದು ಮೆಚ್ಚುಗೆಯ ಮಾತನಾಡಿದ್ದಾನೆ ಸಂಜು. ‘ನನ್ನ ಅಳಿಯ ಆರ್ಯವರ್ಧನ್ ಬಿಟ್ರೆ ಈ ಟೀನ ಹೊಗಳಿದ್ದು ನೀವು ಮಾತ್ರ’ ಎಂಬ ಪುಷ್ಪ ಮಾತನ್ನು ಕೇಳಿ ಸಂಜುಗೆ ಮುಜುಗರ ಆಗಿದೆ.
ಅನು ನೀರಿಗೆ ಬಿದ್ದಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರದಲ್ಲಿ ಆಕೆಯನ್ನು ವಠಾರಕ್ಕೆ ಕರೆತರಲಾಗಿದೆ. ಆಕೆ ವಿಶ್ರಾಂತಿ ಪಡೆಯುತ್ತಿದ್ದಾಳೆ. ಇದೇ ಸಂದರ್ಭಕ್ಕೆ ಸಂಜು ಇಲ್ಲಿಗೆ ಬಂದಿರುವುದು ಕೆಲವರ ಅನುಮಾನಕ್ಕೆ ಕಾರಣವಾಗಿದೆ. ಅನು ಜತೆ ಸಂಜುಗೆ ಒಳ್ಳೆಯ ಬಾಂಧವ್ಯ ಇದೆ ಎಂಬ ಫೀಲ್ ಮೂಡುತ್ತಿದೆ. ಆದರೆ, ಅನುಗೆ ಸಂಜು ಪದೇ ಪದೇ ಎದುರಾಗುತ್ತಿರುವುದು ಸರಿ ಎನಿಸುತ್ತಿಲ್ಲ. ಮತ್ತೊಂದು ಕಡೆ ಅನುಗೆ ಆತನನ್ನು ನೋಡಿ ಅನುಕಂಪವೂ ಮೂಡುತ್ತಿದೆ.
ತನಿಖೆಗೆ ಮುಂದಾದ ಮಾನ್ಸಿ
ಹರ್ಷನ ಪತ್ನಿ ಮಾನ್ಸಿ ತನಿಖೆಗೆ ಮುಂದಾಗಿದ್ದಾಳೆ. ಸಂಜು ಎಂಬ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡು ಆತ ಯಾರು? ಆತನ ಹಿನ್ನೆಲೆ ಏನು ಎಂಬುದನ್ನು ಕಂಡು ಹಿಡಿಯಲು ಮುಂದಾಗಿದ್ದಾಳೆ. ಮಾನ್ಸಿ ತನಿಖೆ ಯಾವ ರೀತಿಯಲ್ಲಿ ಸಹಕಾರಿ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.