AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರಾವಾಹಿ ಕ್ಷೇತ್ರದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಟಿ.ಎನ್. ಸೀತಾರಾಮ್; ಏನದು?

ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಹೊಸದೊಂದು ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಈ ಬಗ್ಗೆ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು, ಜನರಿಂದ ಸಲಹೆ ಕೂಡ ಸ್ವೀಕರಿಸಿದ್ದಾರೆ. ಇದು ಒಂದು ಅಪರೂಪದ ಮತ್ತು ಮಹತ್ವದ ಯೋಜನೆ ಎಂದು ಸೀತಾರಾಮ್ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಧಾರಾವಾಹಿ ಕ್ಷೇತ್ರದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಟಿ.ಎನ್. ಸೀತಾರಾಮ್; ಏನದು?
Tn Seetharam
ಮದನ್​ ಕುಮಾರ್​
|

Updated on: Aug 14, 2025 | 10:51 PM

Share

ಕನ್ನಡ ಕಿರುತೆರೆಯಲ್ಲಿ ನಿರ್ದೇಶಕ ಟಿ.ಎನ್. ಸೀತಾರಾಮ್ (TN Seetharam) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಉತ್ತಮವಾದ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಅವರು ಮನರಂಜನೆ ನೀಡಿದ್ದಾರೆ. ಮಾಯಾಮೃಗ, ಮನ್ವಂತರ, ಮುಕ್ತ, ಮಗಳು ಜಾನಕಿ ಮುಂತಾದ ಸೀರಿಯಲ್​​ಗಳಿಂದ (Kannada Serial) ಸೀತಾರಾಮ್​​ ಅವರು ಕರ್ನಾಟಕದಲ್ಲಿ ಮನೆಮಾತಾದರು. ಇಂದಿಗೂ ಅವರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಅವರು ಹೊಸದೊಂದು ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ವೀಕ್ಷಕರಿಂದ ಸಲಹೆಗಳನ್ನು ಕೂಡ ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟಿ.ಎನ್. ಸೀತಾರಾಮ್ ಹಂಚಿಕೊಂಡ ಬರಹ ಹೀಗಿದೆ..

‘ನಮಸ್ಕಾರ, ಹಿಂದೆ ನಮ್ಮ ಚಿತ್ರಕೂಟ ಸಂಸ್ಥೆಯಿಂದ ಕತೆಗಾರ ಎಂಬ ಕನ್ನಡದ ಶ್ರೇಷ್ಠ ಕಥೆಗಳ ಮಾಲಿಕೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದ್ದೆವು. ಈಗ ಮತ್ತೊಂದು ಮಹತ್ವದ ಯೋಜನೆ ನಮ್ಮ ಮುಂದೆ ಇದೆ. ಕನ್ನಡದ, ಭಾರತದ ಮತ್ತು ಜಗತ್ತಿನ ಕೆಲವು ಸೂಕ್ತವಾದ ಶ್ರೇಷ್ಠ ಕಾದಂಬರಿ, ನಾಟಕ ಮತ್ತು ಕಥೆಗಳನ್ನು ಸರಳ ಎಪಿಸೋಡುಗಳಂತೆ ಚಿತ್ರೀಕರಿಸಿ ಭೂಮಿಕಾ ಟಾಕೀಸ್ (ಯೂಟ್ಯೂಬ್) ನಲ್ಲಿ ಧಾರಾವಾಹಿಯಾಗಿ ಪ್ರಸಾರ ಮಾಡುವ ಯೋಜನೆ ಇದೆ’.

‘ಇದೆಲ್ಲವೂ ಭಾಷಾಂತರವಾಗಿರುವುದಿಲ್ಲ. ಬದಲಿಗೆ ಭಾವಾಂತರವಾಗಿರುತ್ತವೆ. ಅವೆಲ್ಲವನ್ನೂ ನಮ್ಮ ನಾಡಿನ ಬದುಕಾಗಿ, ನಮ್ಮ ಕನ್ನಡದ ಆಡು ಭಾಷೆಯಾಗಿ, ನಮ್ಮ ನಾಡಿನ ದೇಸೀ ಪಾತ್ರಗಳ ಮೂಲಕವೇ ಇವನ್ನು ಧಾರಾವಾಹಿಯಾಗಿ ಚಿತ್ರಿಸಲಿದ್ದೇವೆ. ಅವು ಕನ್ನಡದ ಧಾರಾವಾಹಿಯಾಗಿ ಕಾಣಲಿದೆ. ಕನ್ನಡದ ಖ್ಯಾತ ಪುಸ್ತಕ ಸಂಸ್ಥೆ ವೀರಲೋಕದ ಜಾದೂಗಾರ ವೀರಕಪುತ್ರ ಶ್ರೀನಿವಾಸ್ ನಮ್ಮ ಬೆನ್ನಿಗೆ ನಿಂತು ಇದನ್ನು ನಿರ್ಮಿಸಲಿದ್ದಾರೆ’.

‘ಪ್ರಸಿದ್ಧ ಬರಹಗಾರ ಮತ್ತು ವಿಮರ್ಶಕ ಜೋಗಿಯವರು ಇದರ ಪ್ರಧಾನ ವಿನ್ಯಾಸ ಮತ್ತು ಕಥೆಗಳ ಆಯ್ಕೆಯ ಹೊಣೆ ಹೊರಲಿದ್ದಾರೆ. ಹೊಸ ತಲೆಮಾರಿನ ಆಧುನಿಕ ಲೋಕದ ಅನೇಕ ನಿರ್ದೇಶಕರನ್ನು ಬರಹಗಾರರನ್ನು ಮತ್ತು ನಿರ್ಮಾಣ ಸಂಸ್ಥೆಗಳನ್ನು ಈ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆ ಇದೆ. ಕನ್ನಡ ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರು ಇದಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.’

ಇದನ್ನೂ ಓದಿ: ಗಗನಾಗೆ ಹೊಸ ಧಾರಾವಾಹಿಯಲ್ಲಿ ನಟಿಸೋ ಅವಕಾಶ

‘ಈ ಅಪರೂಪದ, ಮಹತ್ವದ ಯೋಜನೆ ಬಗ್ಗೆ ನಿಮಗೆ ಏನನ್ನಿಸುತ್ತದೆ ದಯವಿಟ್ಟು ಒಂದು ಅಥವಾ ಎರಡು ವಾಕ್ಯಗಳಲ್ಲಿ ತಿಳಿಸಿ. ಹಾಗೆಯೇ ಸುಮಾರು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಎಪಿಸೋಡುಗಳು ಇರಬಹುದಾದ ಈ ಮಹತ್ವದ ಧಾರಾವಾಹಿಗೆ ಒಂದು ಸುಂದರ ಹೆಸರನ್ನು ದಯಮಾಡಿ ಸೂಚಿಸ ಬಲ್ಲಿರಾ?’ ಎಂದು ಸೋಶಿಯಲ್ ಮೀಡಿಯಾದಲ್ಲಿ ಟಿಎನ್ ಸೀತಾರಾಮ್ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.