Ranjani Raghavan: ನಟಿ ರಂಜನಿ ರಾಘವನ್​ ಪುಸ್ತಕ ಬರೆಯೋಕೆ ಶುರು ಮಾಡಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ

| Updated By: ಮದನ್​ ಕುಮಾರ್​

Updated on: Dec 08, 2022 | 3:52 PM

Swipe Right | Ranjani Raghavan Book: ‘ಕನ್ನಡತಿ’ ಸೀರಿಯಲ್​ ನಟಿ ರಂಜನಿ ರಾಘವನ್​ ಅವರು ‘ಸ್ವೈಪ್​ ರೈಟ್​’ ಕಾದಂಬರಿ ಬರೆದಿದ್ದಾರೆ. ಅವರ ಬರವಣಿಗೆಯ ಪಯಣ ಆರಂಭ ಆಗಿದ್ದರ ಕುರಿತು ಇಲ್ಲಿದೆ ಆಸಕ್ತಿಕರ ವಿಷಯ.

Ranjani Raghavan: ನಟಿ ರಂಜನಿ ರಾಘವನ್​ ಪುಸ್ತಕ ಬರೆಯೋಕೆ ಶುರು ಮಾಡಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ
ರಂಜನಿ ರಾಘವನ್
Follow us on

ನಟನೆಯಲ್ಲಿ ತೊಡಗಿಸಿಕೊಂಡವರು ಬರವಣಿಗೆ ಬಗ್ಗೆ ಗಮನ ನೀಡೋಕೆ ಸಮಯ ಸಿಗೋದು ಕಡಿಮೆ. ಅದರಲ್ಲೂ ಧಾರಾವಾಹಿ ನಟ-ನಟಿಯರು ಪ್ರತಿ ದಿನ ಶೂಟಿಂಗ್​ನಲ್ಲೇ ಮುಳುಗಿರುತ್ತಾರೆ. ಅದರ ನಡುವೆಯೂ ಕಥೆ, ಕಾದಂಬರಿ ಬರೆಯಬೇಕು ಎಂದರೆ ಸಮಯ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಆ ಎಲ್ಲ ನೆಪಗಳನ್ನು ಬದಿಗಿಟ್ಟು ನಟಿ ರಂಜನಿ ರಾಘವನ್​ (Ranjani Raghavan) ಅವರು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಅವರಿಗೆ ಬರವಣಿಗೆಯ ತುಡಿತ ಹೆಚ್ಚಿದ್ದು ಹೇಗೆ? ಅವರನ್ನು ಪ್ರೇರೇಪಿಸಿದ ಸಂಗತಿಗಳು ಯಾವವು? ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ರಂಜನಿ ರಾಘವನ್​ ಅವರ ಎರಡನೇ ಪುಸ್ತಕ ‘ಸ್ವೈಪ್​ ರೈಟ್​’ (Swipe Right Novel) ಡಿ.7ರಂದು ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕರಾದ ಯೋಗರಾಜ್​ ಭಟ್​, ಮಂಸೋರೆ, ಗೀತಸಾಹಿತಿ ಕವಿರಾಜ್​ ಮುಂತಾದವರ ಸಮ್ಮುಖದಲ್ಲಿ ‘ಸ್ವೈಪ್​ ರೈಟ್​’ ಕಾದಂಬರಿ ಬಿಡುಗಡೆ ಮಾಡಲಾಗಿದೆ. ಈ ಮೊದಲು ರಂಜನಿ ಬರೆದ ‘ಕಥೆ ಡಬ್ಬಿ’ ಕಥಾಸಂಕಲನಕ್ಕೆ ಓದುಗರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಈಗ ಎರಡನೇ ಕೃತಿಗೂ ಸಖತ್​ ಬೇಡಿಕೆ ಬಂದಿದೆ. ನಟಿಯಾಗಿದ್ದ ತಾವು ಬರವಣಿಗೆಯನ್ನು ಕೈಗೆತ್ತಿಕೊಂಡಿದ್ದು ಹೇಗೆ ಎಂಬ ಬಗ್ಗೆ ರಂಜನಿ ಮಾತನಾಡಿದ್ದಾರೆ.

‘ಶಾಲೆಯಲ್ಲಿ ಸ್ಕಿಟ್​ ಮಾಡುವಾಗ ಪರಸ್ಪರ ಚರ್ಚೆ ಮಾಡುತ್ತಿದ್ದೆವು. ಸೀರಿಯಲ್​ನಲ್ಲೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕಲಾವಿದರು ಇಲ್ಲಿ ಹೇಳಿದ್ದನ್ನಷ್ಟೇ ಮಾಡಿ ಸುಮ್ಮನಾಗಬೇಕು ಎಂಬ ವಾತಾವರಣ ಎದುರಾಯಿತು. ಒಂದೆರಡು ಬಾರಿ ಏನೋ ಹೇಳಲು ಹೋಗಿ ಬೈಯ್ಯಿಸಿಕೊಂಡಿದ್ದೂ ಆಯ್ತು. ಹೇಳುವ ಅಗತ್ಯ ಇದೆ ಅಂತ ಅನಿಸಿದಾಗಲೂ ಬಾಯಿ ಮುಚ್ಚಿಕೊಂಡಿದ್ದುಂಟು’ ಎಂದಿದ್ದಾರೆ ರಂಜನಿ ರಾಘವನ್​. ಇಂಥ ಸಂದರ್ಭ ಎದುರಾಗಲೇ ಅವರಿಗೆ ಬರೆಯಬೇಕು ಎಂಬ ಹಂಬಲ ಶುರುವಾಯಿತು.

ಇದನ್ನೂ ಓದಿ: ರಂಜನಿ ರಾಘವನ್​ಗೆ ಸಿಕ್ತು ‘ಜನ ಮೆಚ್ಚಿದ ನಾಯಕಿ’ ಅವಾರ್ಡ್​; ಇಲ್ಲಿದೆ ಗ್ಯಾಲರಿ

ಬರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಸೀರಿಯಲ್​ ನಟಿ ಎಂದು ಗುರುತಿಸಿಕೊಂಡಿದ್ದರು. ನಟಿಯಾದವರು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ನಂತರ ಏನಾಯ್ತು ಎಂಬುದನ್ನು ರಂಜನಿ ವಿವರಿಸಿದ್ದಾರೆ. ‘ವಿಕಾಸ್​ ನೇಗಿಲೋಣಿ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನನಗೆ ಲೇಖಕ ಜೋಗಿ ಅವರ ಪರಿಚಯ ಆಯಿತು. ಕೊವಿಡ್​ ಸಂದರ್ಭದಲ್ಲಿ ಆಲೋಚನೆ ಮಾಡಲು ಸಮಯ ಸಿಕ್ಕಿತು. ಅದನ್ನು ಜೋಗಿ ಸರ್​ ಬಳಿ ಹೇಳಿಕೊಂಡೆ. ಬರೆಯಬೇಕು ಎಂಬುದರಲ್ಲಿ ನನಗೆ ಯಾವುದೇ ಒತ್ತಡ ಇರಲಿಲ್ಲ. ನಂತರ ಅವಧಿ ಆನ್​ಲೈನ್​ನಲ್ಲಿ ಕಥೆ ಬರೆಯಲು ಆರಂಭಿಸಿದೆ’ ಎಂದು ರಂಜನಿ ಹೇಳಿದ್ದಾರೆ.

ಇದನ್ನೂ ಓದಿ: Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

‘ನನ್ನ ಕಥೆಗಳಿಗೆ ಜನರು ಉತ್ತಮ ಸ್ಪಂದನೆ ನೀಡಿದರು. ಆಗ ನನಗೆ ಧೈರ್ಯ ಬಂತು. ಆ ಕಥೆಗಳನ್ನೇ ಪುಸ್ತಕವಾಗಿಸಿದೆವು. ಅದನ್ನು ಜನರು ಇಷ್ಟಪಟ್ಟಿದ್ದಾರೆ. ನಂತರ ಕಾದಂಬರಿ ಬರೆಯಬೇಕು ಎನಿಸಿತು. ಆಗ ‘ಸ್ವೈಪ್​ ರೈಟ್​’ ಬರೆಯಲು ಆರಂಭಿಸಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಇಲ್ಲಿನ ವಸ್ತು ವಿಷಯವನ್ನೇ ಆಯ್ದುಕೊಂಡೆ’ ಎಂದಿದ್ದಾರೆ ರಂಜನಿ ರಾಘವನ್​.

‘ಯಾವುದು ನನ್ನ ಮನಸ್ಸಿನಿಂದ ಬಂದಿದೆಯೋ ಅದು ಹೆಚ್ಚು ನೈಜವಾಗಿರಲಿದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂಬ ವಿಷಯವನ್ನು ಸ್ವೈಪ್​ ರೈಟ್​ ಪದ ಸೂಚಿಸುತ್ತದೆ. ರಿಯಲ್​ ಜಗತ್ತಿಗಿಂತ ವರ್ಚುವಲ್​ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಈ ಕಥೆ ಸಮಕಾಲೀನ ಆಗಿದೆ. ಈ ಬರವಣಿಗೆಯ ಜರ್ನಿ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತಿದೆ’ ಎಂದು ರಂಜನಿ ರಾಘವನ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.