‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಕಳೆದ ಎರಡು-ಮೂರು ಎಪಿಸೋಡ್ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕೆಲಸದ ನಿಮಿತ್ತ ಆತ ಹೊರಗಡೆ ಹೋಗಿದ್ದ. ಈಗ ಆತನ ಎಂಟ್ರಿ ಆಗಿದೆ. ಅಷ್ಟೇ ಅಲ್ಲ, ಆತ ಎಂಟ್ರಿ ಕೊಡುವಾಗ ರಾವಣನ ರೂಪದಲ್ಲಿ ಬಂದಿದ್ದಾನೆ. ಇದನ್ನು ನೋಡಿ ಮನೆ ಮಂದಿ ಭಯಬಿದ್ದಿದ್ದಾರೆ. ಪೂಜೆ ಮಾಡುತ್ತಿದ್ದ ಸಾನಿಯಾ (Saniya) ಅಂತೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾಳೆ. ಹರ್ಷ ಈ ವೇಷ ಹಾಕಿ ಬರುವುದಕ್ಕೂ ಒಂದು ಕಾರಣ ಇದೆ. ಅದನ್ನೂ ಕೂಡ ಸೆಪ್ಟೆಂಬರ್ 28ರ ಎಪಿಸೋಡ್ನಲ್ಲಿ ತೋರಿಸಲಾಗಿದೆ.
ನವರಾತ್ರಿ ಆರಂಭ ಆಗಿದೆ. ಉತ್ತರ ಭಾರತದ ಭಾಗದಲ್ಲಿ ನವರಾತ್ರಿ ಸಮಯದಂದು ರಾವಣನ ಪ್ರತಿಕೃತಿ ದಹನ ಮಾಡುತ್ತಾರೆ. ರಾವಣ ಎಂದರೆ ಕೆಟ್ಟವನು. ಸಮಾಜದಲ್ಲಿರುವ ಕೆಟ್ಟ ಗುಣಗಳನ್ನು ನಾಶ ಮಾಡುವ ಉದ್ದೇಶದಿಂದ ರಾವಣನ ಪ್ರತಿಕೃತಿ ದಹನ ಮಾಡಲಾಗುತ್ತದೆ. ಈ ಆಚರಣೆ ನವರಾತ್ರಿ ಸಂದರ್ಭದಲ್ಲಿ ನಡೆಯುತ್ತದೆ. ಈ ಬಾರಿಯ ನವರಾತ್ರಿಯಲ್ಲಿ ರಾವಣನ ಪ್ರತಿಕೃತಿ ದಹನ ಮಾಡಬೇಕು ಎಂದು ಹರ್ಷ ನಿರ್ಧರಿಸಿದ್ದಾನೆ. ಈ ಕಾರಣದಿಂದಲೇ ರಾವಣನ ವೇಷ ಧರಿಸಿ ಬಂದಿದ್ದಾನೆ.
ಭುವಿಗೆ ಕ್ಲಾಸ್ ತೆಗೆದುಕೊಂಡ ಸುದರ್ಶನ್
ಸುದರ್ಶನ್ ಆದಿಯ ತಂದೆ. ಸಾನಿಯಾಗೆ ಮಾವ. ಸಾನಿಯಾ ಹಾಗೂ ಸುದರ್ಶನ್ ಪಿತೂರಿ ಮಾಡುವುದರಲ್ಲಿ ಎತ್ತಿದ ಕೈ. ಈ ಕಾರಣದಿಂದಲೇ ಆತ ಸದಾ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿರುತ್ತಾನೆ. ಆತನಿಗೆ ಆಸ್ತಿಯಲ್ಲಿ ಪಾಲು ಬೇಕು. ಈ ಕಾರಣಕ್ಕೆ ಭುವಿಯನ್ನು ಮುಂದೆ ಬಿಡಲು ಪ್ಲ್ಯಾನ್ ರೂಪಿಸಿದ್ದಾನೆ.
ಪೊಲೀಸರು ಬಂದು ಭುವಿಯನ್ನು ಕರೆದುಕೊಂಡು ಹೋಗಿದ್ದರು. ಆ ಬಳಿಕ ಪೊಲೀಸ್ ಠಾಣೆಗೆ ತೆರಳಿದ್ದ ಸುದರ್ಶನ್ ಭುವಿಯನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟೇ ಅಲ್ಲ ಭುವಿ ನನ್ನನ್ನು ಸೇವ್ ಮಾಡಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಈ ವಿಚಾರದಲ್ಲಿ ಭುವಿಗೆ ಅಚ್ಚರಿ ಆಗಿತ್ತು. ಸುದರ್ಶನ್ ಆ ರೀತಿ ಮಾಡೋದಕ್ಕೂ ಒಂದು ಕಾರಣ ಇದೆ. ಅದು ನಂತರ ಗೊತ್ತಾಗಿದೆ.
ಭುವಿ ಟೀ ಕೊಡುತ್ತಿದ್ದಂತೆ ಆ ಕಪ್ ಅನ್ನು ಕೆಳಗೆ ಬೀಳಿಸಿದ್ದಾನೆ ಸುದರ್ಶನ್. ‘ನೀನು ಮದುವೆ ಆಗುವಾಗ ನನಗೆ ಆಸ್ತಿ ಕೊಡಿಸುತ್ತೀನಿ ಎಂದು ಹೇಳಿದ್ದೆ. ಆದರೆ, ಆ ರೀತಿ ಮಾಡಿಲ್ಲ. ಇನ್ನು ಮೂರು ದಿನದಲ್ಲಿ ನೀನು ಆಸ್ತಿ ಕೊಡಿಸುವ ವಿಚಾರದಲ್ಲಿ ರತ್ನಮಾಲಾ ಜತೆ ಮಾತನಾಡಬೇಕು’ ಎಂದು ಸುದರ್ಶನ್ ಆವಾಜ್ ಹಾಕಿದ್ದಾನೆ. ಇದನ್ನು ಕೇಳಿ ಭುವಿ ಕಂಗಾಲಾಗಿದ್ದಾಳೆ.
ಸುಳ್ಳುಗಳ ಸರಮಾಲೆ
ಭುವಿ ಇತ್ತೀಚೆಗೆ ರತ್ನಮಾಲಾಳಿಂದ ಎಲ್ಲವನ್ನೂ ಮುಚ್ಚಿಡುತ್ತಿದ್ದಾಳೆ. ಆಕೆಗೆ ಮರೆವಿನ ಕಾಯಿಲೆ ಶುರುವಾಗಿದೆ. ತನಗೆ ಏನೂ ಸರಿ ಇಲ್ಲ ಎಂದು ರತ್ನಮಾಲಾಗೆ ಪದೇಪದೇ ಅನ್ನಿಸುತ್ತಲೇ ಇದೆ. ಈ ಬಗ್ಗೆ ಭುವಿ ಬಳಿ ರತ್ನಮಾಲಾ ಪ್ರಶ್ನೆ ಮಾಡಿದ್ದಳು. ಆದರೆ, ಭುವಿ ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾಳೆ. ನಿಮಗೆ ಏನು ಆಗೇ ಇಲ್ಲ ಎಂದು ಸಾಲು ಸಾಲು ಸುಳ್ಳು ಹೇಳಿದ್ದಾಳೆ. ರತ್ನಮಾಲಾ ಕಾರಿಗೆ ಯಾರೋ ಬಂದು ಗುದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಭುವಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಳು. ಪೊಲೀಸ್ ಠಾಣೆಗೆ ಹೋಗಿದ್ದು ಏಕೆ ಎಂಬ ವಿಚಾರವನ್ನೂ ಭುವಿ ಮುಚ್ಚಿಟ್ಟಿದ್ದಾಳೆ. ಸತ್ಯ ಹೇಳಿದರೆ ರತ್ನಮಾಲಾಗೆ ಮರೆವಿನ ಕಾಯಿಲೆ ಇದೆ ಎಂಬುದು ತಿಳಿದು ಹೋಗುತ್ತದೆ ಎಂಬ ಭಯ ಭುವಿಯದ್ದು. ಈ ಕಾರಣದಿಂದ ಆಕೆ ಎಲ್ಲ ವಿಚಾರಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾಳೆ.
ಶ್ರೀಲಕ್ಷ್ಮಿ ಎಚ್.