ವರ್ತೂರು ಸಂತು ಮೇಲೆ ಸುಳ್ಳು ಆರೋಪ ಮಾಡಿದ ಕಾರ್ತಿಕ್​ ಕಿಚ್ಚನ ಕ್ಲಾಸ್

|

Updated on: Jan 13, 2024 | 11:30 PM

Karthik Mahesh: ಸಂಗೀತಾ ಬಗ್ಗೆ ತಾವು ಆಡಿದ ಮಾತನ್ನು ವರ್ತೂರು ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದ ಕಾರ್ತಿಕ್​ಗೆ ಸರಿಯಾಗಿ ಬುದ್ಧಿ ಹೇಳಿದರು ಸುದೀಪ್.

ವರ್ತೂರು ಸಂತು ಮೇಲೆ ಸುಳ್ಳು ಆರೋಪ ಮಾಡಿದ ಕಾರ್ತಿಕ್​ ಕಿಚ್ಚನ ಕ್ಲಾಸ್
ಸುದೀಪ್
Follow us on

ಬಿಗ್​ಬಾಸ್ (BiggBoss) ಕನ್ನಡ ಸೀಸನ್ ಫಿನಾಲೆಗೆ ಎರಡೇ ವಾರ ಉಳಿದಿದೆ. ಮನೆಯಲ್ಲಿ ಕಂಟೆಸ್ಟಂಟ್​ಗಳ ನಡುವೆ ಸ್ಪರ್ಧೆ ಜೋರಾಗಿದೆ. ಆದರೆ ಗೆಲ್ಲುವ ಅರ್ಹತೆ ಇರುವ ಸ್ಪರ್ಧಿಗಳು ಎನಿಸಿಕೊಂಡಿರುವ ಕೆಲ ಸ್ಪರ್ಧಿಗಳು ಯಾಕೋ ಹಿಂದೆ ಉಳಿದಿದ್ದಾರೆ. ಅವರಲ್ಲಿ ಕಾರ್ತಿಕ್ ಮಹೇಶ್ ಸಹ ಒಬ್ಬರು. ಟಾಸ್ಕ್​ ಮೂಲಕವಲ್ಲದಿದ್ದರೂ ವ್ಯಕ್ತಿತ್ವ, ಒಳ್ಳೆಯತನದಿಂದ ಅವರು ವೀಕ್ಷಕರ ಮನಸ್ಸು ಗೆಲ್ಲಬಹುದಿತ್ತು, ಆದರೆ ತಾವು ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸಿ ಅವರನ್ನು ಕೆಟ್ಟವರಾಗುವ ಪ್ರಯತ್ನದಲ್ಲಿ ಎಲ್ಲರ ಮುಂದೆ ಬತ್ತಲಾಗಿದ್ದಾರೆ.

ಶನಿವಾರದ ಪಂಚಾಯಿತಿ ಆರಂಭಿಸಿದ ಸುದೀಪ್, ವಾರವೆಲ್ಲ ಬಹಳ ಚೆನ್ನಾಗಿ ಟಾಸ್ಕ್​ಗಳನ್ನು ಆಡಿದ, ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ, ತಂತ್ರ-ಪ್ರತಿತಂತ್ರಗಳನ್ನು ಮಾಡಿದ ಮನೆಯ ಸದಸ್ಯರನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್, ಬಳಿಕ ಮನೆಯಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಚರ್ಚೆ ಆರಂಭಿಸಿದರು.

ವರ್ತೂರು ಸಂತು, ಕಾರ್ತಿಕ್ ಅನ್ನು ನಾಮಿನೇಟ್ ಮಾಡಿದ್ದು ಏಕೆಂದು ಕೇಳಿದಾಗ ಅವರಿಂದ ಸೂಕ್ತ ಉತ್ತರ ಬರಲಿಲ್ಲ, ಕೊನೆಗೆ ಕಾರ್ತಿಕ್, ತಾವು ಆಡಿದ ಮಾತನ್ನು ನಾನು ಆಡಿದ್ದೆಂದರು ಹಾಗಾಗಿ ನಾಮಿನೇಟ್ ಮಾಡಿದೆ ಎಂದರು. ಏನದು ಎಂದಾಗ, ನಾನು ನನ್ನ ಪಾಡಿಗೆ ಹೋಗುತ್ತಿದ್ದೆ ಆಗ ನನ್ನನ್ನು ಕರೆದು ಮನೆಯ ಶನಿ ಯಾರೆಂದು ಕೇಳಿದರು. ಅದಕ್ಕೆ ‘ವಿನಯ್ ಆ?’ ಎಂದು ಪ್ರಶ್ನೆ ಮಾಡಿದೆ ಆಗ ಅಲ್ಲ ಇನ್ನೊಬ್ಬರು ಎಂದು ಕಾರ್ತಿಕ್ ಹೇಳಿದರು. ಯಾರು ಎಂದು ಕೇಳಿದಾಗ ‘ಸಂಗೀತಾ’ ಎಂದು ಕಾರ್ತಿಕ್ ಹೇಳಿದರು. ಆದರೆ ಕಳೆದ ವಾರ ನೀವು ಕೇಳಿದಾಗ ಅದನ್ನು ಅಲ್ಲಗಳೆದರು. ಅದಾದ ಮೇಲೆ ನನ್ನ ಬಳಿ ಬಂದು ನಾನೇ ಸಂಗೀತಾ ಹೆಸರು ಹೇಳಿದ್ದೆಂದು ವಾದಿಸಿದರು ಹಾಗಾಗಿ ನಾಮಿನೇಟ್ ಮಾಡಿದೆ ಎಂದರು.

ಇದನ್ನೂ ಓದಿ:ಯಾರಿಗೂ ಬೇಡವಾದ ಕಾರ್ತಿಕ್ ಮಹೇಶ್, 10 ರೂಪಾಯಿಗೂ ಕೇಳುವವರಿಲ್ಲ

ಆಗಲೂ ಸಹ ಕಾರ್ತಿಕ್, ನಾನು ಹೇಳಿಲ್ಲ, ವರ್ತೂರು ಅವರೇ ಆ ಮಾತು ಹೇಳಿದ್ದಾರೆ. ಈಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು. ಘಟನೆ ನಡೆಯುವಾಗ ಅಲ್ಲಿಯೇ ಇದ್ದ ತನಿಷಾ, ‘ಇಲ್ಲ ಕಾರ್ತಿಕ್ ಅವರೇ ಸಂಗೀತಾ ಶನಿ’ ಎಂದಿದ್ದು ಎಂದರು. ಆಗಲೂ ಸಹ ಕಾರ್ತಿಕ್ ಒಪ್ಪಲಿಲ್ಲ, ಕೊನೆಗೆ ಸುದೀಪ್, ‘ಕಾರ್ತಿಕ್, ಆ ಮಾತನ್ನು ಹೇಳಿದ್ದು ನೀವೇ’ ಎಂದರು. ಅಲ್ಲಿಗೆ ಕಾರ್ತಿಕ್ ಸುಮ್ಮನಾದರು. ಕ್ಷಮೆ ಸಹ ಕೇಳಿದರು.

ಆದರೆ ಸುದೀಪ್, ‘ಮನೆಯಲ್ಲಿ ನೀವುಗಳು ಮಾತ್ರವೇ ಇದ್ದೀರಿ, ಹಾಗಾಗಿ ಒಬ್ಬರ ಬಗ್ಗೆ ಒಬ್ಬರು ಮಾತನಾಡುವುದು ಸಹಜ, ಅದನ್ನು ತಪ್ಪು ಎಂದು ಹೇಳಲಾಗದು ಆದರೆ ನೀವು ಆಡಿದ ಮಾತನ್ನು ಇನ್ನೊಬ್ಬರ ಮೇಲೆ ಹಾಕಿ, ಅವರನ್ನು ಕೆಟ್ಟವರನ್ನಾಗಿಸುವುದು ಸರಿಯಲ್ಲ. ವೈಯಕ್ತಿಕವಾಗಿ ನನಗೆ ಅದು ಇಷ್ಟವಿಲ್ಲ, ಅದು ನಡೆಯುವುದಕ್ಕೆ ನಾನು ಬಿಡುವುದಿಲ್ಲ. ವರ್ತೂರು ಅವರು ಒಳ್ಳೆಯ ಆಟಗಾರರೊ ಇಲ್ಲವೋ ಗೊತ್ತಿಲ್ಲ ಆದರೆ ಅವರಲ್ಲಿ ಒಂದು ಅಮಾಯಕತೆ ಇದೆ. ಅವರು ತಪ್ಪು ಮಾಡಿದಾಗ ಸ್ವತಃ ಒಪ್ಪಿಕೊಳ್ಳುತ್ತಾರೆ. ಅವರ ಆ ನಿಜಗುಣ, ಸುಳ್ಳು ಆರೋಪದಿಂದ ಹಾಳಾಗಬಾರದು ಎಂಬ ಕಾರಣಕ್ಕೆ ನಾನು ಇಂದು ಮಾತನಾಡಬೇಕಾಯ್ತು’ ಎಂದರು.

ಬಳಿಕ ಕಾರ್ತಿಕ್, ವರ್ತೂರು ಬಳಿ ಕ್ಷಮೆ ಕೇಳಿದರು. ಸಂಗೀತಾ ಬಳಿ ಕ್ಷಮೆ ಕೇಳುವ ಯತ್ನ ಮಾಡಿದರು ಆದರೆ ಅವರು ಕಾರ್ತಿಕ್ ಮಾತು ಕೇಳಿಸಿಕೊಳ್ಳದೆ ಹೊರಟು ಹೋದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ