‘ಗೋಲ್ಡ್ ಸುರೇಶ್​ ಸೋತಿಲ್ಲ’: ಮುಖ್ಯವಾದ ಸಂದೇಶ ನೀಡಿದ ಕಿಚ್ಚ ಸುದೀಪ್

|

Updated on: Dec 16, 2024 | 10:14 PM

ಗೋಲ್ಡ್ ಸುರೇಶ್ ಅವರು ಕಷ್ಟಪಟ್ಟು ಕ್ಯಾಪ್ಟನ್ ಆಗಿದ್ದರು. ಆದರೆ ಅದರ ಫಲ ಅವರಿಗೆ ಸಿಗಲಿಲ್ಲ. ಇನ್ನೇನು ಫಿನಾಲೆ ಸಮೀಪಿಸುತ್ತಿದೆ ಎನ್ನುತ್ತಿರುವಾಗಲೇ ಗೋಲ್ಡ್ ಸುರೇಶ್ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಅವರು ಹೊರಡುವುದಕ್ಕೂ ಮುನ್ನ ಕಿಚ್ಚ ಸುದೀಪ್ ಕಡೆಯಿಂದ ಸಂದೇಶ ಬಂತು. ಸುದೀಪ್ ಹೇಳಿದ ಮಾತು ಕೇಳಿ ಎಲ್ಲರಿಗೂ ಸ್ವಲ್ಪ ಸಮಾಧಾನ ಆಯಿತು.

‘ಗೋಲ್ಡ್ ಸುರೇಶ್​ ಸೋತಿಲ್ಲ’: ಮುಖ್ಯವಾದ ಸಂದೇಶ ನೀಡಿದ ಕಿಚ್ಚ ಸುದೀಪ್
ಗೋಲ್ಡ್ ಸುರೇಶ್​, ಕಿಚ್ಚ ಸುದೀಪ್​
Follow us on

ಎಲಿಮಿನೇಟ್​ ಆಗಿ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗುವುದು ಬೇರೆ. ಆದರೆ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣದಿಂದ ಬಿಗ್ ಬಾಸ್​ ಮನೆಗೆ ವಿದಾಯ ಹೇಳುವುದು ನಿಜಕ್ಕೂ ಬೇಸರದ ಸಂಗತಿ. ಗೋಲ್ಡ್ ಸುರೇಶ್ ಅವರಿಗೆ ಈ ಪರಿಸ್ಥಿತಿ ಬಂದಿದೆ. ಚೆನ್ನಾಗಿ ಆಟ ಆಡುತ್ತಿರುವಾಗಲೇ ಅವರು ಬಿಗ್ ಬಾಸ್​ ಶೋನಿಂದ ಹೊರಗೆ ಬರಬೇಕಾಯಿತು. ಡಿಸೆಂಬರ್​ 16ರ ಸಂಚಿಕೆಯಲ್ಲಿ ಅವರು ದೊಡ್ಮನೆ ಬಿಟ್ಟು ಹೊರಬಂದಿದ್ದನ್ನು ತೋರಿಸಲಾಗಿದೆ. ಕಿಚ್ಚ ಸುದೀಪ್ ಕಡೆಯಿಂದ ಗೋಲ್ಡ್ ಸುರೇಶ್ ಅವರಿಗೆ ಒಂದು ಮುಖ್ಯವಾದ ಸಂದೇಶ ನೀಡಲಾಗಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಆಟದಿಂದ ಯಾರೇ ಎಲಿಮಿನೇಟ್​ ಆದರೂ ಅವರನ್ನು ವೇದಿಕೆಗೆ ಕರೆದು ಸುದೀಪ್​ ಮಾತನಾಡಿಸುತ್ತಾರೆ. ಆದರೆ ಈ ರೀತಿ ಅನಿವಾರ್ಯ ಕಾರಣಗಳಿಂದ ಮನೆ ಬಿಟ್ಟು ತೆರಳಬೇಕಾದ ಸಂದರ್ಭ ಬಂದರೆ ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವ ಅವಕಾಶ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಗೋಲ್ಡ್ ಸುರೇಶ್ ಕೂಡ ಅಂಥ ಚಾನ್ಸ್ ಮಿಸ್​ ಮಾಡಿಕೊಂಡು ದೊಡ್ಮನೆಯಿಂದ ಹೊರಗೆ ಕಾಲಿಟ್ಟಿದ್ದಾರೆ.

ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಅವರು ಕೂಡಲೇ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬರಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು. ಅವರಿಗೆ 77ನೇ ದಿನದಲ್ಲಿ ಎಲ್ಲರೂ ಭಾವುಕ ವಿದಾಯ ಹೇಳಿದರು. ಅದೇ ವೇಳೆ ಮನೆಯೊಳಗಿನ ಟಿವಿಯಲ್ಲಿ ಸುದೀಪ್​ ಅವರ ಸಂದೇಶ ಬಿತ್ತರ ಆಯಿತು.

ಇದನ್ನೂ ಓದಿ: ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ ಜೋರು

‘ಮನೆಯಿಂದ ಎಮರ್ಜೆನ್ಸಿ ಇದ್ದರೆ ನಿಮಗೆ ಆ ಸಂದೇಶ ತಲುಪಿಸುತ್ತೇವೆ ಎಂದು ಹೇಳಿದ್ದೆವು. ನೀವು ಗಾಬರಿ ಆಗುವಂಥದ್ದು ಏನೂ ಇಲ್ಲ. ಆದರೆ ಈಗ ನೀವು ಮನೆಗೆ ತೆರಳಬೇಕು. ಸುರೇಶ್ ಅವರು ಸೋತು ಹೋಗುತ್ತಿಲ್ಲ. ಕ್ಯಾಪ್ಟನ್ ಆಗಿ ಗೆದ್ದು ಹೋಗುತ್ತಿದ್ದಾರೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಕಷ್ಟಪಟ್ಟು ಆಟ ಆಡಿ ಸುರೇಶ್ ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಆದರೆ ಅರ್ಧಕ್ಕೆ ಶೋನಿಂದ ಹೊರಗೆ ಬಂದಿದ್ದರಿಂದ ಅವರ ಶ್ರಮ ವ್ಯರ್ಥ ಆದಂತೆ ಆಗಿದೆ.

ನಿಜಕ್ಕೂ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ಏನು ಸಮಸ್ಯೆ ಆಗಿರಬಹುದು ಎಂಬುದನ್ನು ತಿಳಿಸಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲರಿಗೂ ಚಿಂತೆ ಆಗಿದೆ. ಏನೋ ಬಿಸ್ನೆಸ್​ ಕುರಿತ ಸಮಸ್ಯೆ ಇರಬಹುದು ಎಂದು ಐಶ್ವರ್ಯಾ ಅವರು ಊಹಿಸಿದ್ದಾರೆ. ಸುರೇಶ್ ತಂದೆಗೆ ಸಮಸ್ಯೆ ಆಗಿದೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಆದರೆ ಅಂಥ ಸಮಸ್ಯೆ ಏನೂ ಆಗಿಲ್ಲ ಎಂಬ ಸ್ಪಷ್ಟನೆ ಕೂಡ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.