ಡ್ರೋನ್ ವಿಚಾರದಲ್ಲಿ ಪ್ರತಾಪ್ (Drone Prathap) ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅವರಿಗೆ ಹೊಸ ಅವಕಾಶ ಸಿಗಲಿ ಎಂಬ ಕಾರಣದಿಂದಲೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಶೋನಲ್ಲಿ ವೇದಿಕೆ ಕಲ್ಪಿಸಿಕೊಡಲಾಗಿದೆ. ಈ ಶೋ ಆರಂಭ ಆದಾಗ ಡ್ರೋನ್ ಪ್ರತಾಪ್ ಅವರನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದರು. ಆಗ ಪ್ರತಾಪ್ ಅವರು ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದರು. 2ನೇ ವಾರದಲ್ಲಿ ಕಿಚ್ಚ ಸುದೀಪ್ ತುಂಬಿದ ಧೈರ್ಯದಿಂದ ಪ್ರತಾಪ್ ಅವರ ಆಟ ಬದಲಾಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸುದೀಪ್ ಅವರಿಂದ ಹೊಗಳಿಕೆ ಪಡೆಯುವ ಮಟ್ಟಕ್ಕೆ ಪ್ರತಾಪ್ ಅವರು ಬದಲಾಗಿದ್ದಾರೆ. 4ನೇ ವಾರದಲ್ಲಿ ಬೇರೆ ಸ್ಪರ್ಧಿಗಳು ಪ್ರತಾಪ್ ಅವರನ್ನು ಕ್ರಿಮಿನಲ್ ಎಂದು ಕರೆದಿದ್ದರು. ಆದರೆ ಅವರು ಕ್ರಿಮಿನಲ್ ಅಲ್ಲ ಎಂದು ಸುದೀಪ್ (Kichcha Sudeep) ಹೇಳಿದ್ದಾರೆ.
4ನೇ ವಾರದಲ್ಲಿ ಬಿಗ್ ಬಾಸ್ ಒಂದು ವಿಶೇಷ ಟಾಸ್ಕ್ ನೀಡಿದ್ದರು. ಮನೆಯ ಒಳಗೆ ನೂರಾರು ಬಲೂನ್ಗಳನ್ನು ಇರಿಸಲಾಗಿತ್ತು. ಆ ಪೈಕಿ ಕೆಲವು ಬಲೂನ್ಗಳ ಒಳಗೆ ನಾಮಿನೇಷೇನ್ ಪಾಸ್ಗಳು ಇದ್ದವು. ಯಾರಿಗೆ ಹೆಚ್ಚು ಪಾಸ್ಗಳು ಸಿಗುತ್ತವೆಯೋ ಅವರಿಗೆ ಹೆಚ್ಚು ಜನರನ್ನು ಬಚಾವ್ ಮಾಡುವ ಅಧಿಕಾರ ಬರುತ್ತದೆ. ಆದರೆ ತಮಗೆ ಸಿಕ್ಕ ಪಾಸ್ ಅನ್ನು ಇನ್ನೊಬ್ಬರು ಕಿತ್ತುಕೊಳ್ಳದಂತೆ ನೋಡಿಕೊಳ್ಳಬೇಕಿತ್ತು. ಈ ಆಟದಲ್ಲಿ ಡ್ರೋನ್ ಪ್ರತಾಪ್ ಅವರು ತಮ್ಮ ಬುದ್ಧಿವಂತಿಕೆ ಉಪಯೋಗಿಸಿದ್ದರು.
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್
ಡ್ರೋನ್ ಪ್ರತಾಪ್ ಅವರಿಗೆ ಹಲವು ಪಾಸ್ಗಳು ಸಿಕ್ಕಿದ್ದವು. ಆದರೆ ತಮಗೆ ಸಿಕ್ಕಿದ್ದು ಒಂದೇ ಪಾಸ್ ಎಂಬ ರೀತಿಯಲ್ಲಿ ಅವರು ಬಿಂಬಿಸಿದ್ದರು. ಆ ಒಂದು ಪಾಸ್ ಅನ್ನು ಕಾರ್ತಿಕ್ ಮಹೇಶ್ ಕಿತ್ತುಕೊಂಡರು. ಆಗ ಬೇಸರವಾಗಿದ್ದಂತೆ ಡ್ರೋನ್ ಪ್ರತಾಪ್ ನಟಿಸಿದರು. ಬಿಗ್ ಬಾಸ್ ಎದುರು ಪಾಸ್ ತೋರಿಸುವ ಸಂದರ್ಭ ಬಂದಾಗ ತಮ್ಮ ಚಾಲಾಕಿತನ ಏನು ಎಂಬುದನ್ನು ಪ್ರತಾಪ್ ತೋರಿಸಿದರು. ಮೈಕ್ ಒಳಗೆ ತಾವು ಮುಚ್ಚಿಟ್ಟುಕೊಂಡಿದ್ದ ಇನ್ನುಳಿದ ಎಲ್ಲ ಪಾಸ್ಗಳನ್ನು ಡ್ರೋನ್ ಪ್ರತಾಪ್ ಹೊರಗೆ ತೆಗೆದರು. ಅದನ್ನು ನೋಡಿ ಎಲ್ಲರಿಗೂ ಅಚ್ಚರಿ ಆಯಿತು.
ಪ್ರತಾಪ್ ಅವರು ಈ ರೀತಿ ಮಾಡಿದ್ದು ಉತ್ತಮ ತಂತ್ರಗಾರಿಕೆಯೇ ಹೊರತು ಕ್ರಿಮಿನಲ್ ಬುದ್ಧಿ ಅಲ್ಲ ಎಂದು ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಸ್ಪಷ್ಟವಾಗಿ ಹೇಳಿದರು. ಆ ಮೂಲಕ ಪ್ರತಾಪ್ ಅವರಿಗೆ ಮೆಚ್ಚುಗೆ ಸಿಕ್ಕಿತು. ದಿನದಿಂದ ದಿನಕ್ಕೆ ಪ್ರತಾಪ್ ಅವರು ವೀಕ್ಷಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅವರ ಬಗ್ಗೆ ಈ ಮೊದಲು ಇದ್ದ ಅಭಿಪ್ರಾಯ ಬದಲಾಗುತ್ತಿದೆ. ತಮಗೆ ಸಿಕ್ಕ ಎಲ್ಲ ಪಾಸ್ಗಳನ್ನು ಮಹಿಳೆಯರಿಗೆ ನೀಡುವ ಮೂಲಕವೂ ಪ್ರತಾಪ್ ಅವರು ಗಮನ ಸೆಳೆದಿದ್ದಾರೆ. 5ನೇ ವಾರದಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ನೋಡುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.