ಸುದೀಪ್ ಮಾತಿಗೂ ಬೆಲೆ ಕೊಡದೇ ಉದ್ದಟತನ ತೋರಿದ ಜಾಹ್ನವಿ: ಕ್ಯಾಮೆರಾದಲ್ಲಿ ಬಯಲಾಯ್ತು ಸತ್ಯ

ರಕ್ಷಿತಾ ಶೆಟ್ಟಿ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲು ಜಾಹ್ನವಿ ಹಾಗೂ ಅಶ್ವಿನಿ ಗೌಡ ಪ್ರಯತ್ನಿಸಿದರು. ಈ ವಿಚಾರವನ್ನು ಬಯಲಿಗೆ ಎಳೆಯಲಾಗಿದೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಹಾಗಿದ್ದರೂ ಕೂಡ ಜಾಹ್ನವಿ ಅವರಿಗೆ ಸ್ವಲ್ಪವೂ ಪಶ್ಚಾತ್ತಾಪ ಇಲ್ಲ. ಮರುಕ್ಷಣವೇ ಅವರು ಕಿಸಿಕಿಸಿ ನಕ್ಕಿದ್ದಾರೆ.

ಸುದೀಪ್ ಮಾತಿಗೂ ಬೆಲೆ ಕೊಡದೇ ಉದ್ದಟತನ ತೋರಿದ ಜಾಹ್ನವಿ: ಕ್ಯಾಮೆರಾದಲ್ಲಿ ಬಯಲಾಯ್ತು ಸತ್ಯ
Jahnavi, Kichcha Sudeep

Updated on: Oct 19, 2025 | 12:07 PM

ಬಿಗ್ ಬಾಸ್ ಎಂಬುದು ವ್ಯಕ್ತಿತ್ವಗಳ ಆಟ. ಹೊರ ಜಗತ್ತಿನಲ್ಲಿ ಬಣ್ಣದ ಮುಖವಾಡ ಹಾಕಿಕೊಂಡವರ ಅಸಲಿ ಮುಖ ಏನೆಂಬುದು ಬಿಗ್ ಬಾಸ್ ಮನೆ ಒಳಗೆ ಬಯಲಾಗುತ್ತದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋನಲ್ಲಿ 3 ವಾರಗಳು ಕಳೆದಿವೆ. ಅಷ್ಟರಲ್ಲಾಗಲೇ 4 ಮಂದಿ ಎಲಿಮಿನೇಟ್ ಆಗಿದ್ದಾರೆ. ಮಿಡ್ ಸೀಸನ್ ಫಿನಾಲೆ ನಡೆದಿದೆ. ಶನಿವಾರದ (ಅಕ್ಟೋಬರ್ 18) ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರಿಗೆ ಕಿಚ್ಚ ಸದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಕ್ಷಿತಾ ಶೆಟ್ಟಿಗೆ ನೋವಾಗುವಂತೆ ನಡೆದುಕೊಂಡಿದ್ದಕ್ಕೆ ಜಾಹ್ನವಿ ಹಾಗೂ ಅಶ್ವಿನಿ ಗೌಡ (Ashwini Gowda) ಅವರಿಗೆ ಸುದೀಪ್ ಗ್ರಹಚಾರ ಬಿಡಿಸಿದ್ದಾರೆ. ಹಾಗಿದ್ದರೂ ಕೂಡ ಜಾಹ್ನವಿ ಅವರಿಗೆ ಪಶ್ಚಾತ್ತಾಪ ಕಾಡುತ್ತಿಲ್ಲ.

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಡ್ರಾಮಾ ನಡೆದವು. ರಕ್ಷಿತಾ ಶೆಟ್ಟಿ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲು ಜಾಹ್ನವಿ ಮತ್ತು ಅಶ್ವಿನಿ ಗೌಡ ಪ್ರಯತ್ನಿಸಿದರು. ಮಧ್ಯರಾತ್ರಿ ತಾವೇ ಬೇಕಂತಲೇ ಗೆಜ್ಜೆ ಶಬ್ದ ಮಾಡಿ, ನಂತರ ಅದನ್ನು ರಕ್ಷಿತಾ ಶೆಟ್ಟಿ ಮೇಲೆ ಹೊರಿಸಲು ಯತ್ನಿಸಿದರು. ಅದನ್ನು ವಿರೋಧಿಸಿದ ರಕ್ಷಿತಾ ಶೆಟ್ಟಿ ವಿರುದ್ಧ ಜಾಹ್ನವಿ ಹಾಗೂ ಅಶ್ವಿನಿ ಗೌಡ ನಾಲಿಗೆ ಹರಿಬಿಟ್ಟಿದ್ದರು.

ಈ ಘಟನೆಯಿಂದ ರಕ್ಷಿತಾ ಶೆಟ್ಟಿ ಅವರಿಗೆ ಬಹಳ ನೋವಾಗಿ ಅಳುತ್ತಾ ಮಲಗಿದ್ದರು. ಇದನ್ನು ನೋಡಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಮಜಾ ತೆಗೆದುಕೊಂಡಿದ್ದರು. ಕುತಂತ್ರದಿಂದಲೇ ತಾವು ಇದೆಲ್ಲ ಮಾಡಿದ್ದು ಎಂಬುದು ಅವರಿಗೂ ಗೊತ್ತು. ಆದರೆ ಲೋಕದ ಎದುರಲ್ಲಿ ಇದನ್ನು ತಮಾಷೆ ಎಂದು ಬಿಂಬಿಸಲು ಅವರಿಬ್ಬರು ಪ್ರಯತ್ನಿಸಿದ್ದರು. ಆದರೆ ಅವರ ಆಟ ಸುದೀಪ್ ಮುಂದೆ ನಡೆಯಲಿಲ್ಲ.

ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಅಲ್ಲದೇ, ಮಧ್ಯರಾತ್ರಿಯಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ಗೆಜ್ಜೆ ಅಲ್ಲಾಡಿಸಿದ್ದನ್ನು ವಿಡಿಯೋ ಸಮೀತ ತೋರಿಸಿದರು. ಮೊದಲು ಮೊಂಡುವಾದ ಮಾಡಿದ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡರು. ಆದರೆ ಅವರ ಮುಖದಲ್ಲಿ ಹಾಗೂ ಮಾತಿನಲ್ಲಿ ಪಶ್ಚಾತ್ತಾಪ ಕಾಣಿಸಲಿಲ್ಲ!

ಇದನ್ನೂ ಓದಿ: ಕುತಂತ್ರದಿಂದ ಜಗಳ ಮಾಡಲು ಬಂದ ಅಶ್ವಿನಿ ಗೌಡ, ಜಾಹ್ನವಿ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ

ಅವರಿಬ್ಬರಿಗೆ ಪಶ್ಚಾತ್ತಾಪ ಕಾಡುತ್ತಿಲ್ಲ ಎಂದು ಮಂಜು ಭಾಷಿಣಿ ಹೇಳಿದರು. ಆ ಬಳಿಕ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ಸುದೀಪ್ ಅವರು ಸ್ಟೋರ್ ರೋಮಿಗೆ ಕಳಿಸಿದರು. ಅಲ್ಲಿಗೆ ಹೋದಾಗ ಜಾಹ್ನವಿ ಅವರು ಕಿಸಿಕಿಸಿ ಎಂದು ನಗುತ್ತಿದ್ದರು. ಸುದೀಪ್ ಅವರು ಅಷ್ಟೆಲ್ಲಾ ಬೈಯ್ದ ಮೇಲೂ ಕಿಂಚಿತ್ತೂ ಕೂಡ ಪಶ್ಚಾತ್ತಾಪ ಇಲ್ಲದೇ ಜಾಹ್ನವಿ ಅವರು ನಗುತ್ತಿರುವುದು ಸ್ಟೋರ್ ರೂಮ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಕಂಡು ಸುದೀಪ್ ಅವರು ಮತ್ತೆ ಕ್ಲಾಸ್ ತೆಗೆದುಕೊಂಡರು. ಒಟ್ಟಾರೆ ಈ ಘಟನೆಯಿಂದ ವೀಕ್ಷಕರ ಎದುರಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ಮುಖವಾಡ ಕಳಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.