ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ನಲ್ಲಿ ರಿಷಬ್ ಶೆಟ್ಟಿ: ಇದು ವಿಶೇಷ ಸಂಚಿಕೆ
‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ 101ನೇ ಸಾಧಕರಾಗಿ ರಿಷಬ್ ಶೆಟ್ಟಿ ಅವರು ಬಂದಿದ್ದಾರೆ. ಸಾಧಕರ ಸೀಟ್ನಲ್ಲಿ ಕುಳಿತು ಅವರು ತಮ್ಮ ಬದುಕಿನ ಪಯಣವನ್ನು ಮೆಲುಕು ಹಾಕಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಗೆಲುವಿನ ಬಳಿಕ ಅವರಿಗೆ ಈ ಗೌರವ ಸಿಕ್ಕಿರುವುದು ವಿಶೇಷ.

ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ‘ಜೀ ಕನ್ನಡ’ ವಾಹಿನಿ ಕಡೆಯಿಂದ ಗೌರವ ಸಲ್ಲಿಸಲಾಗಿದೆ. ಜನಪ್ರಿಯ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಅವರು ಅತಿಥಿ ಆಗಿದ್ದಾರೆ. ಅಂದಹಾಗೆ, ಇದು ಒಂದು ವಿಶೇಷ ಸಂಚಿಕೆ. ಜೀ ಕನ್ನಡದ ಅವಾರ್ಡ್ ಶೋನಲ್ಲಿ ರಿಷಬ್ ಶೆಟ್ಟಿ ಅವರು ಭಾಗವಹಿಸಿದ್ದಾರೆ. ಈ ವೇಳೆ ರಮೇಶ್ ಅವರು ‘ವೀಕೆಂಡ್ ವಿತ್ ರಮೇಶ್’ ಶೋ ನಡೆಸಿಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ ಅವರನ್ನು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಕರೆತರಲು ಈ ಮೊದಲು ಕೂಡ ಪ್ರಯತ್ನ ನಡೆದಿತ್ತು. ಆದರೆ ಅವರು ಒಪ್ಪಿಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಅವರು ಬರಲು ಸಾಧ್ಯವಾಗಿರಲಿಲ್ಲ. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಬಿಡುವು ಮಾಡಿಕೊಂಡು ರಿಷಬ್ ಶೆಟ್ಟಿ ಅವರು ಸಾಧಕರ ಸೀಟ್ನಲ್ಲಿ ಬಂದು ಕುಳಿತಿದ್ದಾರೆ.
ಎಂದಿನಂತೆ ರಿಷಬ್ ಶೆಟ್ಟಿ ಅವರ ಬದುಕಿನ ಪಯಣವನ್ನು ಮೆಲುಕು ಹಾಕಲಾಗಿದೆ. ಬಾಲ್ಯದಿಂದ ಇಲ್ಲಿಯ ತನಕ ಅವರು ಸಾಗಿ ಬಂದ ಹಾದಿಯನ್ನು ವೀಕೆಂಡ್ ಟೆಂಟ್ನಲ್ಲಿ ತೋರಿಸಲಾಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಸ್ಪೂರ್ತಿ ಬಂದಿದೆ. ವಾಟರ್ ಕ್ಯಾನ್ ಬಿಸ್ನೆಸ್ ಮಾಡಿದ್ದು, ಚಹಾ ಪುಡಿ ಮಾರಿದ್ದು ಸೇರಿದಂತೆ ತಮ್ಮ ಬದುಕಿನ ಹಲವು ಘಟನೆಗಳನ್ನು ರಿಷಬ್ ಶೆಟ್ಟಿ ಅವರು ಮೆಲುಕು ಹಾಕಿದ್ದಾರೆ.
View this post on Instagram
ಈವರೆಗೂ ‘ವೀಕೆಂಡ್ ವಿತ್ ರಮೇಶ್’ ಸೀಟ್ನಲ್ಲಿ ನೂರು ಸಾಧಕರು ಕೂತಿದ್ದಾರೆ. 101ನೇ ಸಾಧಕರಾಗಿ ರಿಷಬ್ ಶೆಟ್ಟಿ ಅವರು ಹಾಟ್ ಸೀಟ್ ಏರಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಸಿನಿಮಾದ ಗೆಲುವಿಗಾಗಿ ರಮೇಶ್ ಅವರು ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ ಕಂಡು ರೊಚ್ಚಿಗೆದ್ದ ಮೈಸೂರಿನ ಅಭಿಮಾನಿಗಳು
ರಿಷಬ್ ಶೆಟ್ಟಿ ಅವರು ಸಾಗಿ ಬಂದ ಹಾದಿ ಸುಲಭದ್ದಾಗಿರಲಿಲ್ಲ. ಅವರು ಕೂಡ ಸಾಕಷ್ಟು ಏಳು-ಬೀಳುಗಳನ್ನು ಕಂಡು ಈ ಹಂತಕ್ಕೆ ಬಂದಿದ್ದಾರೆ. ಮೊದಲು ಅವರ ಹೆಸರು ಪ್ರಶಾಂತ್ ಶೆಟ್ಟಿ ಆಗಿತ್ತು. ತಂದೆಯ ಮಾರ್ಗದರ್ಶನದ ಮೇಲೆ ಅವರು ರಿಷಬ್ ಶೆಟ್ಟಿ ಎಂದು ಹೆಸರು ಬದಲಾಯಿಸಿಕೊಂಡರು. ಆ ಘಟನೆಯನ್ನು ಸಹ ಮೆಲುಕು ಹಾಕಲಾಗಿದೆ. ‘ಜೀವನದಲ್ಲಿ ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬಾರದು’ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




