
ನಟ ಕಾಕ್ರೋಚ್ ಸುಧಿ (Cockroach Sudhi) ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆಗಿದ್ದಾರೆ. ಹೀರೋಗಳ ಎದುರು ಅವರು ವಿಲನ್ ಆಗಿ ಅಬ್ಬರಿಸಿದ್ದಾರೆ. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೂಡ ಅವರು ಅಬ್ಬರಿಸುತ್ತಿದ್ದಾರೆ. ಸಂದರ್ಭ ಬಂದಾಗಲೆಲ್ಲ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ತಮ್ಮ ತಪ್ಪು ಇದ್ದಾಗಲೇ ಏರುಧ್ವನಿಯಲ್ಲೇ ಮಾತನಾಡಲು ಬಂದ ಕಾಕ್ರೋಚ್ ಸುಧಿಗೆ ಕಿಚ್ಚ ಸುದೀಪ್ (Kichcha Sudeep) ಅವರು ಖಡಕ್ ತಿರುಗೇಟು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬ ಪಾಠವನ್ನು ಸುದೀಪ್ ಅವರು ಮಾಡಿದ್ದಾರೆ.
ಅಷ್ಟಕ್ಕೂ ಕಿಚ್ಚ ಸುದೀಪ್ ಅವರು ಗರಂ ಆಗಲು ಕಾರಣ ಇದೆ. ಮೊದಲ ವಾರದಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಆದರೆ ಆ ಟಾಸ್ಕ್ನ ನಿಯಮಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸ್ಪರ್ಧಿಗಳು ವಿಫಲರಾದರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದರಿಂದ ಆಟ ಅರ್ಧಕ್ಕೆ ನಿಂತಿತು. ಅಂತಿಮವಾಗಿ ಟಾಸ್ಕ್ ರದ್ದಾಯಿತು. ಆಗ ಕಾಕ್ರೋಚ್ ಸುಧಿ ಅವರು ಕೂಗಾಡಿದ್ದರು.
ಟಾಸ್ಕ್ ರದ್ದಾಗಿದ್ದಕ್ಕೆ ಉಸ್ತುವಾರಿ ಹಾಗೂ ಇತರ ಸ್ಪರ್ಧಿಗಳೇ ಕಾರಣ ಎಂದು ಕಾಕ್ರೋಚ್ ಸುಧಿ ಅವರು ಗರಂ ಆಗಿ ಮಾತನಾಡಿದ್ದರು. ಆ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಆಗಲೂ ಕೂಡ ಸುಧಿ ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಿಚ್ಚ ಸುದೀಪ್ ಅವರು ತಮ್ಮದೇ ಶೈಲಿಯಲ್ಲಿ ಬುದ್ದಿ ಹೇಳಿ ಸುಧಿಯ ವಾಲ್ಯೂಮ್ ಕಡಿಮೆ ಆಗುವಂತೆ ಮಾಡಿದರು.
‘ಏರುಧ್ವನಿಯಲ್ಲಿ ವಾದ ಮಾಡುವುದಲ್ಲ. ಮಾಡುವ ವಾದದಲ್ಲಿ ಸತ್ವ ಇದ್ದರೆ ಏರುಧ್ವನಿಯ ಅಗತ್ಯವೇ ಇಲ್ಲ’ ಎಂಬುದನ್ನು ಸುದೀಪ್ ಅವರು ಅರ್ಥ ಮಾಡಿಸಿದರು. ಬಿಗ್ ಬಾಸ್ ಮನೆಗೆ ಕಾಲಿಡುವಾಗ ಕಾಕ್ರೋಚ್ ಸುಧಿ ಅವರು ದೊಡ್ಡ ದೊಡ್ಡ ಡೈಲಾಗ್ ಹೊಡೆದಿದ್ದರು. ‘ನನ್ನನ್ನು ನಾನು ನೋಡಿಕೊಳ್ಳಲು ಬಿಗ್ ಬಾಸ್ ಬೇಕಿಲ್ಲ. ನನ್ನನ್ನು ಜಗತ್ತಿಗೆ ತೋರಿಸಲು ಇಲ್ಲಿಗೆ ಬಂದಿದ್ದೇನೆ’ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಆದರೆ ಒಂದು ವಾರ ಕಳೆದರೂ ಕೂಡ ಸುಧಿ ಅವರು ನುಡಿದಂತೆ ನಡೆದುಕೊಂಡಿಲ್ಲ ಎಂಬುದನ್ನು ಕಿಚ್ಚ ಸುದೀಪ್ ನೆನಪಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಸ್ಪರ್ಧಿಗಳನ್ನು ಮನೆಗೆ ಕಳಿಸಬಹುದು: ಸುಳಿವು ಕೊಟ್ಟ ಸುದೀಪ್
ಮೊದಲ ವಾರದ ಟಾಸ್ಕ್ ರದ್ದಾಗುವಲ್ಲಿ ಕಾಕ್ರೋಚ್ ಸುಧಿ ಮಾತ್ರವಲ್ಲದೇ ಬೇರೆ ಸ್ಪರ್ಧಿಗಳ ಹೊಣೆ ಕೂಡ ಇದೆ. ಹಾಗಾಗಿ ಎಲ್ಲರಿಗೂ ಸುದೀಪ್ ಅವರು ವಾರ್ನಿಂಗ್ ನೀಡಿದರು. ಒಂದು ಟಾಸ್ಕ್ ರೂಪಿಸುವುದರ ಹಿಂದೆ ಬಿಗ್ ಬಾಸ್ ತಂಡದ ಶ್ರಮ ಇರುತ್ತದೆ. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಟಾಸ್ಕ್ ರದ್ದಾದರೆ ಅದರ ಪರಿಣಾಮ ಬೇರೆ ರೀತಿ ಇರುತ್ತದೆ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.