
‘ಕರ್ಣ’ ಧಾರಾವಾಹಿ ಮೂಲಕ ಕಿರಣ್ ರಾಜ್ (Kiran Raj) ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದಿದೆ. ‘ಕನ್ನಡತಿ’ ಧಾರಾವಾಹಿ ಬಳಿಕ ಅವರು ಹಿರಿತೆರೆಯಲ್ಲಿ ತೊಡಗಿಕೊಂಡರು. ಈಗ ‘ಜಾಕಿ 42’ ಸಿನಿಮಾ ಕೆಲಸಗಳ ಮಧ್ಯೆಯೇ ಅವರು ಕಿರುತೆರೆಗೂ ಸಮಯ ಮೀಸಲಿಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಅಜ್ಜಿ. ಈ ಅಚ್ಚರಿಯ ವಿಚಾರವನ್ನು ಕಿರಣ್ ರಾಜ್ ಟಿವಿ9 ಕನ್ನಡ ಡಿಜಿಟ್ ಜೊತೆ ಹಂಚಿಕೊಂಡಿದ್ದಾರೆ.
‘ಕರ್ಣ’ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಸಿಕ್ಕ ಬಗ್ಗೆ ಕಿರಣ್ ರಾಜ್ ಖುಷಿ ಹೊರಹಾಕಿದ್ದಾರೆ. ‘ಧಾರಾವಾಹಿ ನಂಬರ್ 1 ಬಂದಿದ್ದು ಖುಷಿ ತಂದಿದೆ. ಜನರು ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಒಂದೊಳ್ಳೆಯ ಕಥೆ ಸಿಕ್ಕರೆ ಟಿವಿಯಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಆಗ ಕರ್ಣ ಬಂತು. ನಾನು ಧಾರಾವಾಹಿ ಮಾಡಲು ನನ್ನ ಅಜ್ಜಿ ಕೂಡ ಕಾರಣ. ಅವರಿಗೆ 70 ವರ್ಷ ಆಗಿದೆ. ಅವರು ಊರಲ್ಲಿ ಇರುತ್ತಾರೆ. ಅವರು ನೋಡೋದು ಧಾರಾವಾಹಿ ಮಾತ್ರ. ಹೀಗಾಗಿ, ಅವರ ಖುಷಿಗೆ ಈ ಧಾರಾವಾಹಿ ಮಾಡುತ್ತಿದ್ದೇನೆ’ ಎಂದಿದ್ದಾರೆ ಕಿರಣ್ ರಾಜ್.
‘ನಾನು ನಟನಾಗಿ ಒಂದು ಪಾತ್ರ ಮಾಡ್ತಾ ಇದ್ದೀನಿ ಅಷ್ಟೇ. ಹೀಗಾಗಿ, ತೆರೆಮೇಲೆ ಅವರಿಗೆ ಆ ಪಾತ್ರ ಕಾಣಬೇಕೆ ಹೊರತು ನಾನು ಕಾಣಬಾರದು. ನನಗೆ ಏನು ಬೇಕೋ ಅದನ್ನು ಮಾಡೋಕೆ ಆಗಲ್ಲ. ಜನರು ಏನನ್ನು ಇಷ್ಟ ಪಡ್ತಾರೋ ಅದನ್ನು ಮಾಡಬೇಕು. ಪಾತ್ರಗಳಲ್ಲಿ ಎಕ್ಸಿಪಿರಿಮೆಂಟ್ ಮಾಡುತ್ತಲೇ ಇರಬೇಕು’ ಎನ್ನುತ್ತಾರೆ ಅವರು.
‘ಎಂಟರ್ಟೇನ್ಮೆಂಟ್ ಅನ್ನೋ ಪದದ ಅರ್ಥ ವಿಸ್ತ್ರತವಾಗಿದೆ. ಕನ್ನಡದವರು ವಿದೇಶದ ಸೀರಿಸ್ಗಳನ್ನು ನೊಡುತ್ತಾರೆ. ಅವುಗಳು ಕನ್ನಡಕ್ಕೂ ಡಬ್ ಆಗಿ ಬರುತ್ತಿವೆ. ಹೀಗಾಗಿ, ನಾವು ಏನಾದರೂ ವಿಶೇಷವಾಗಿ ಮಾಡಿದಾಗಲೇ ಜನರು ನೋಡೋದು’ ಎಂದಿದ್ದಾರೆ ಅವರು. ಈ ಮೂಲಕ ‘ಕರ್ಣ’ ಧಾರಾವಾಹಿಯಲ್ಲಿ ಫೈಟ್ ಹಾಗೂ ಸಾಂಗ್ ಇಟ್ಟಿದ್ದಕ್ಕೆ ಕಾರಣ ನೀಡಿದ್ದಾರೆ.
ಇದನ್ನೂ ಓದಿ: ‘ಕರ್ಣ’ ಗೆದ್ದ ಬಳಿಕ ಕಿರಣ್ ರಾಜ್ ಡೈಲಾಗ್ ನೋಡಿ
‘ನನ್ನ ರಿಯಲ್ ಲೈಫ್ಗೂ ಕರ್ಣ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಯಾರಾದರೂ ಏನಾದರೂ ಕೊಟ್ಟರೆ ಅದನ್ನು ಮರಳಿ ಕೊಡುತ್ತೇನೆ. ತಪ್ಪೇ ಇಲ್ಲದಿದ್ದರೂ ಕರ್ಣ ತಂದೆಗೆ ತಲೆ ಬಾಗುತ್ತಾನೆ. ನನ್ನ ನಿಜ ಜೀವನದಲ್ಲೂ ನಾನು ಅದೇ ರೀತಿ ಇರೋದು. ಕರ್ಣ ಪಾತ್ರಕ್ಕೂ, ನನ್ನ ನಿಜ ಜೀವನಕ್ಕೂ ಇದೊಂದೇ ಹೋಲಿಕೆ ಇದೆ. ಫ್ಯಾಮಿಲಿಯವರು ಬಿಟ್ಟು ಇನ್ಯಾರೇ ಆ ರೀತಿ ಮಾಡಿದರೂ ನಾನು ಅದನ್ನು ಸಹಿಸಿಕೊಳ್ಳಲ್ಲ’ ಎನ್ನುತ್ತಾರೆ ಕಿರಣ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.