ಬಿಗ್ಬಾಸ್ಗೆ ನೊಟೀಸ್ ಕೊಟ್ಟ ರಾಮನಗರ ಪೊಲೀಸ್, ವಿಡಿಯೋ ಸಲ್ಲಿಸುವಂತೆ ಸೂಚನೆ
ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ಆಯೋಜಕರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ. ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರ ಸಮ್ಮಾನಕ್ಕೆ ಧಕ್ಕೆ ತಂದ ಆರೋಪ ಬಿಗ್ಬಾಸ್ ಶೋ ಮೇಲೆ ಕೆಲ ಸ್ಪರ್ಧಿಗಳ ಮೇಲೆ ಇದ್ದು, ಇದೇ ಕಾರಣಕ್ಕೆ ಬಿಗ್ಬಾಸ್ಗೆ ಕುಂಬಳಗೋಡು ಪೊಲೀಸರು ನೊಟೀಸ್ ನೀಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಎರಡು ವಾರವಾಗಿದೆ. ಆರಂಭದಿಂದಲೇ ಬಿಗ್ಬಾಸ್ ವಿವಾದಕ್ಕೆ ಕಾರಣವಾಗಿದೆ. ಸ್ಪರ್ಧಿಗಳಂತೂ ಜಗಳ ಮಾಡಲೆಂದೇ ಬಂದಿರುವಂತೆ ಮೊದಲ ದಿನದಿಂದಲೇ ಜಗಳ ಆರಂಭ ಮಾಡಿದ್ದಾರೆ. ಇದರ ನಡುವೆ ರಾಮನಗರ ಪೊಲೀಸರು ಬಿಗ್ಬಾಸ್ಗೆ ನೊಟೀಸ್ ಒಂದನ್ನು ನೀಡಿದ್ದಾರೆ. ಬಿಗ್ಬಾಸ್ನ ವಿಡಿಯೋಗಳನ್ನು ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿರೆಂದು ಸೂಚನೆ ನೀಡಿದ್ದಾರೆ. ವಿಡಿಯೋಗಳ ಜೊತೆಗೆ ಸಂಭಾಷಣೆಯನ್ನೂ ಸಹ ನೀಡುವಂತೆ ಸೂಚನೆ ನೀಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ರ ಆರಂಭದಿಂದಲೇ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಇಡಲಾಗಿತ್ತು. ಅದರಂತೆ ಆರಂಭದ ದಿನವೇ ಕೆಲವು ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕೆಲವುನ ಸ್ಪರ್ಧಿಗಳನ್ನು ನರಕಕ್ಕೆ ಕಳಿಸಲಾಗಿತ್ತು. ನರಕಕ್ಕೆ ಹೋದ ಸ್ಪರ್ಧಿಗಳು ನೆಲದ ಮೇಲೆ ಹಾಕಲಾದ ಬೆಡ್ನಲ್ಲಿ ಮಲಗಬೇಕಿತ್ತು. ಅವರಿಗೆ ಊಟದ ಬದಲಿಗೆ ಕೇವಲ ಗಂಜಿ ಕೊಡಲಾಗಿತ್ತು. ಕೂರಲು ಕುರ್ಚಿ ವ್ಯವಸ್ಥೆ ಇರಲಿಲ್ಲ. ಅವರನ್ನು ಜೈಲಿನ ಮಾದರಿಯ ಸರಳುಗಳ ಹಿಂದೆ ಇಡಲಾಗಿತ್ತು. ಕುಡಿಯಲು ನೀರಿಗೆ ಒಂದು ಮಡಿಕೆ ಇಡಲಾಗಿತ್ತು. ನೀರು, ಊಟಕ್ಕೆ ಸ್ವರ್ಗವಾಸಿಗಳ ಅನುಮತಿ ಕೇಳಬೇಕಿತ್ತು, ಶೌಚಾಲಯ ಹೋಗಲು ಸಹ ಅನುಮತಿ ಕೇಳ ಬೇಕಿತ್ತು. ಕೆಲವೊಮ್ಮೆ ಸ್ವರ್ಗವಾಸಿಗಳು ಅನುಮತಿ ಕೊಡುತ್ತಿರಲಿಲ್ಲ. ಹಣ್ಣು ತಿಂದಿದ್ದಕ್ಕೆ, ಉಪ್ಪಿನ ಕಾಯಿ ತಿನ್ನಲು ಸಹ ನರಕವಾಸಿಗಳು ಸ್ವರ್ಗವಾಸಿಗಳ ಜೊತೆಗೆ ಜಗಳ ಆಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದು ಕೆಲವು ಸಾಮಾಜಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಈ ಕುರಿತು ಮಾನವಕ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ದೂರು ನೀಡಿದ್ದರು. ಯಾವುದೇ ವ್ಯಕ್ತಿಯ ಇಷ್ಟದ ವಿರುದ್ಧವಾಗಿ ಹಾಗೂ ಇಷ್ಟದ ಅನುಸಾರವಾಗಿಯೂ ಬಂಧನದಲ್ಲಿ ಇಡುವಂತಿಲ್ಲ, ಅಲ್ಲದೆ ವ್ಯಕ್ತಿಗೆ ನೀಡಬೇಕಾದ ಕನಿಷ್ಠ ಅಗತ್ಯಗಳಾದ ಪೌಷ್ಟಿಕ ಆಹಾರ, ಶೌಚಾಲಯ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ ಎಂದು ನಾಗಲಕ್ಷ್ಮಿ ಆರೋಪ ಮಾಡಿದ್ದರು. ಸ್ವರ್ಗ-ನರಕ ಕಾನ್ಸೆಪ್ಟ್ ಇದ್ದಾಗ ಕೆಲ ಸ್ಪರ್ಧಿಗಳು ಪರಸ್ಪರ ಜಗಳ ಆಡುವಾಗ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಮಹಿಳೆಯರ ಸಮ್ಮಾನಕ್ಕೆ ಧಕ್ಕೆ ತರುವಂತಹಾ ಹೇಳಿಕೆಗಳನ್ನು ಕೆಲ ಸ್ಪರ್ಧಿಗಳು ನೀಡಿದ್ದರು. ಈ ಕಾರಣಕ್ಕೆ ಪೊಲೀಸರಿಗೂ ಸಹ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಪತ್ರ ಬರೆದಿದ್ದರು.
ಇದನ್ನೂ ಓದಿ:ಬಿಗ್ಬಾಸ್ ಸ್ಪರ್ಧಿಗಳಿಗೆ ಉಡುಗೊರೆ ಕಳಿಸಿದ ಜನ, ಯಾರಿಗೆ ಏನು ಸಿಕ್ತು?
ಮಾವನ ಹಕ್ಕು ಆಯೋಗವು ಬಿಗ್ಬಾಸ್ಗೆ ನೋಟೀಸ್ ಕಳಿಸಿತ್ತು ಎನ್ನಲಾಗಿದೆ. ಅದರ ಬೆನ್ನಲ್ಲೆ ಇದೀಗ ಇದೇ ವಿಷಯವಾಗಿ ರಾಮನಗರದ ಕುಂಬಳಗೋಡು ಪೊಲೀಸರು ಬಿಗ್ಬಾಸ್ ಆಯೋಜಕರಿಗೆ ನೊಟೀಸ್ ನೀಡಿದ್ದಾರೆ. ಇನ್ಸಪೆಕ್ಟರ್ ಮಂಜುನಾಥ್ ಹೂಗಾರ್ ಅವರು ಬಿಗ್ಬಾಸ್ಗೆ ತೆರಳಿ ಆಯೋಜಕರಿಗೆ ನೊಟೀಸ್ ನೀಡಿದ್ದು, ಕೆಲವು ದಿನಾಂಕದ ಫುಟೇಜ್ ಮತ್ತು ಅದರ ಸಂಪೂರ್ಣ ಆಡಿಯೋ ಅನ್ನು ಸಹ ನೀಡುವಂತೆ ಸೂಚಿಸಲಾಗಿದೆ. ಎಡಿಟೆಡ್ ಅಲ್ಲದ ರಾ ವಿಡಿಯೋವನ್ನು ಠಾಣೆಗೆ ಬಂದು ನೀಡುವಂತೆ ಹೇಳಿರುವ ಜೊತೆಗೆ ಒಂದೊಮ್ಮೆ ಅಸಡ್ಡೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಈ ಹಿಂದೆಯೂ ಸಹ ಬಿಗ್ಬಾಸ್ಗೆ ಕೆಲವು ವಿಷಯಗಳಲ್ಲಿ ನೊಟೀಸ್ ನೀಡಿದ್ದಾರೆ. ಕಳೆದ ಬಿಗ್ಬಾಸ್ನಲ್ಲಿ ವರ್ತೂರು ಸಂತೋಷ್ ಅವರನ್ನು ಬಿಗ್ಬಾಸ್ ಮನೆಯಿಂದಲೇ ಬಂಧಿಸಿ ಕರೆದೊಯ್ದಿದ್ದರು. ಈ ಬಾರಿ ಜಗಳವಾಡುವ ವೇಳೆಯಲ್ಲಿ ಜಗದೀಶ್, ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದರು, ಅದೇ ವಿಷಯವಾಗಿ ಈಗ ನೊಟೀಸ್ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ