ಕಟೌಟ್ ಹಾಕಿಸಿಕೊಳ್ಳಬೇಕು, ನೂರು ವರ್ಷ ಬದುಕಬೇಕು: ಅಪರ್ಣಾಗಿತ್ತು ಹಲವು ಆಸೆ
‘ಮಜಾ ಟಾಕೀಸ್’, ‘ಯಡಿಯೂರು ಸಿದ್ಧಲಿಂಗೇಶ’ ಧಾರಾವಾಹಿಗಳಲ್ಲಿ ಅಪರ್ಣಾ ಜೊತೆಗೆ ಒಟ್ಟಿಗೆ ನಟಿಸಿದ್ದ ಕಲಾವಿದ ಮಂಡ್ಯ ರಮೇಶ್, ಅಪರ್ಣಾ ಜೊತೆಗಿನ ನೆನಪುಗಳ ಬುತ್ತಿಯನ್ನು ತೆರೆದಿಟ್ಟಿದ್ದಾರೆ.
ಅಪರ್ಣಾ ನಿಧನ ಹೊಂದಿದ್ದಾರೆ. ಅವರ ಹಠಾತ್ ಅಗಲಿಕೆ ಅವರ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದ, ಟಿವಿ ರಂಗದ ಗಣ್ಯರಿಗೂ ತೀವ್ರ ಆಘಾತ ತಂದಿದೆ. ಅಪರ್ಣಾ, 1984 ರಿಂದಲೂ ಚಿತ್ರರಂಗ, ಟಿವಿಯಲ್ಲಿ ಸಕ್ರಿಯರಾಗಿದ್ದರು. ಅಪರ್ಣಾ ಅವರು ಜೊತೆಗೆ ಹಲವು ವರ್ಷಗಳ ಕಾಲ ನಟಿಸಿರುವ ಮಂಡ್ಯ ರಮೇಶ್, ಅಪರ್ಣಾ ಜೊತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಪರ್ಣಾ ಅವರಿಗಿದ್ದ ಕೆಲವು ಆಸೆಗಳ ಬಗ್ಗೆ, ಕನಸುಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಅಪರ್ಣಾ ವಸ್ತಾರೆ ಅವರು ನಿರೂಪಕಿಯಾಗಿ ಹೆಸರಾಗಿದ್ದವರು, ಸಿನಿಮಾಗಳಲ್ಲಿಯೂ ಸಹ ನಾಯಕಿಯಾಗಿ, ಪೋಷಕ ಪಾತ್ರಗಳಲ್ಲಿಯೂ ಮಿಂಚಿದ್ದರು ಆದರೆ ಅವರು ಹಾಸ್ಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆದರೆ ‘ಮಜಾ ಟಾಕೀಸ್’ನಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡರು. ಚಿತ್ರ-ವಿಚಿತ್ರ ವೇಷಗಳನ್ನು ಹಾಕಿದರು, ನಕ್ಕರು, ಇತರರನ್ನು ನಗಿಸಿದರು. ತಮ್ಮ ಅಭಿನಯ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಅದೇ ಶೋನಲ್ಲಿ ಅಪರ್ಣಾ ಜೊತೆ ನಟಿಸುತ್ತಿದ್ದ ಮಂಡ್ಯ ರಮೇಶ್ ಅವರು ಅಪರ್ಣಾ ಸಾವಿಗೆ ಮರುಗಿದ್ದು, ಅವರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
‘ಅಪರ್ಣಾ ಅವರಿಗಿದ್ದ ಸಾಹಿತ್ಯ ಜ್ಞಾನ ಈಗಿನ ಯಾವುದೇ ನಟ-ನಟಿಯರಿಗೆ ಇರಲಿಕ್ಕೆ ಸಾಧ್ಯವಿಲ್ಲ. ಕೇವಲ ಸಾಹಿತ್ಯವಲ್ಲ ಹಲವು ಕಲಾಪ್ರಕಾರಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು. ಮತ್ತು ಅದನ್ನು ಮಾತುಕತೆಗಳಲ್ಲಿ ಸಹಜವಾಗಿ ತರುತ್ತಿದ್ದರು. ಅವರೊಟ್ಟಿಗೆ ಮಾತು ಕತೆ ಆಡುವುದೇ ಒಂದು ಅದ್ಭುತ ಅನುಭವ ಎಂಬುವಂತೆ ಭಾಸವಾಗುತ್ತಿತ್ತು. ಅವರಲ್ಲಿ ಎಲ್ಲರೊಂದಿಗೂ ಹೊಂದಿಕೊಳ್ಳುವ ಸಮಾನ ಮನಸ್ಕತೆ ಇತ್ತು. ಅಪರ್ಣಾ ಅವರು ಜಗಳವಾಡಿದರೂ ಸಹ ಕೇಳುವುದಕ್ಕೆ ಹಿತವೆನಿಸುವ ರೀತಿಯಲ್ಲಿಯೇ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು. ತಮ್ಮ ವಿಚಾರಗಳಲ್ಲಿ ಬಹಳ ಸ್ಪಷ್ಟತೆಯನ್ನು ಅಪರ್ಣಾ ಹೊಂದಿದ್ದರು’ ಎಂದಿದ್ದಾರೆ ಮಂಡ್ಯ ರಮೇಶ್.
ಇದನ್ನೂ ಓದಿ:ಅಪರ್ಣಾರ ಯಾವತ್ತೂ ಕಳೆಗುಂದದ ಮುಖ ನೋಡಿ ನಿಮಗೆ ವಯಸ್ಸೇ ಆಗಲ್ಲ ಎನ್ನುತ್ತಿದ್ದೆ: ಅರ್ಚನಾ ಉಡುಪ
‘ಮಜಾ ಟಾಕೀಸ್’ ನೆನಪುಗಳನ್ನು ತೆರೆದಿಟ್ಟ ಮಂಡ್ಯ ರಮೇಶ್, ‘ಅಪರ್ಣಾ ಅವರು ಬಹಳ ನಗಿಸುತ್ತಿದ್ದರು. ಸೃಜನ್ ಹಾಗೂ ಇತರರು ಎಷ್ಟು ನಗಿಸುತ್ತಿದ್ದರೋ ಅವರಿಗೆ ಪೈಪೋಟಿ ನೀಡುವಷ್ಟು ಅಪರ್ಣಾ ಸಹ ನಗಿಸುತ್ತಿದ್ದರು. ಶೋನಲ್ಲಿ ಅವರ ವಯಸ್ಸಿನ ಬಗ್ಗೆ, ಹಿರಿತನದ ಬಗ್ಗೆ ಜೋಕ್ಗಳನ್ನು ಮಾಡಲಾಗುತ್ತಿತ್ತು ಆದರೆ ಅದ್ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿ ಎಲ್ಲರನ್ನೂ ನಗಿಸಿ ತಾವೂ ಮನಸಾರೆ ನಗುತ್ತಿದ್ದರು. ‘ಮಜಾ ಟಾಕೀಸ್’ ತಂಡ ಆಸ್ಟ್ರೇಲಿಯಾಕ್ಕೆ ಹೋಗಿದ್ದಾಗಲಂತೂ ನಾವೆಲ್ಲ ಬಹಳ ಎಂಜಾಯ್ ಮಾಡಿದೆವು. ಆ ಪ್ರವಾಸದ ಬಗ್ಗೆ ಪುಸ್ತಕವನ್ನೇ ಬರೆಯಬಹುದು’ ಎಂದಿದ್ದಾರೆ ಮಂಡ್ಯ ರಮೇಶ್.
ಶೂಟಿಂಗ್ ಸೆಟ್ನಲ್ಲಿ ಅವರೊಟ್ಟಿಗೆ ನಾನು ಹೆಚ್ಚು ಮಾತನಾಡುತ್ತಿದ್ದೆ, ನಮ್ಮಿಬ್ಬರ ಸಮಾನ ಮನಸ್ಕತನ ನಮ್ಮನ್ನು ಗೆಳೆಯರನ್ನಾಗಿಸಿತ್ತು. ಸಾಕಷ್ಟು ವಿಷಯಗಳನ್ನು ಅವರು ಹೇಳಿಕೊಂಡಿದ್ದರು. ನಾನು ನೂರು ವರ್ಷ ಬದುಕಬೇಕು, ಆಗುವ ಎಲ್ಲ ಬದಲಾವಣೆಗಳನ್ನು ನೋಡಬೇಕು. ಚಿತ್ರಮಂದಿರದ ಮುಂದೆ ಒಂದು ಕಟೌಟ್ ಹಾಕಿಸಿಕೊಳ್ಳಬೇಕು, ಏಕೆ ಬರೀ ನಟರೇ ಕಟೌಟ್ ಹಾಕಿಸಿಕೊಳ್ಳಬೇಕು ನಟಿಯರದ್ದೂ ಕಟೌಟ್ ಹಾಕಬೇಕು, ನನ್ನದೂ ಕಟೌಟ್ ನಿಲ್ಲಬೇಕು’ ಎಂದು ಅಪರ್ಣಾ ಹೇಳಿದ್ದಾಗಿ ಮಂಡ್ಯ ರಮೇಶ್ ಹೇಳಿದರು.
‘ಅಪರ್ಣಾ ಅವರು ‘ಮಜಾ ಟಾಕೀಸ್’ನಲ್ಲಿದ್ದಾಗ ಅವರ ಪತಿ ನಾಗರಾಜ್ ಅವರು ಅವರಿಗೆ ಪ್ರತಿದಿನ ಊಟದ ಡಬ್ಬಿ ಕಳಿಸುತ್ತಿದ್ದರು. ಅದನ್ನು ಹೆಚ್ಚು ತಿಂದಿದ್ದೆಂದರೆ ನಾನೇ. ಸೆಟ್ನಲ್ಲಿ ಎಲ್ಲರಿಗೂ ಕೊಟ್ಟು ತಾವು ತಿನ್ನುತ್ತಿದ್ದರು. ಅವರಿಗೆ ತಾಯಿಯ ಗುಣವಿತ್ತು. ತಾನು ನಟನೆಯಲ್ಲಿ ಹಿರಿಯಳು, ಪ್ರತಿಭಾವಂತೆ ಎಂಬ ಹಮ್ಮನ್ನು ಬದಿಗಿಟ್ಟು ಕಿರಿಯರೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವೃದ್ಧರ ವರೆಗೂ ಎಲ್ಲರನ್ನೂ ಒಳಗೊಳ್ಳುವ ಗುಣ ಹಾಗೂ ಪ್ರಬುದ್ಧತೆ ಅಪರ್ಣಾ ಅವರಿಗಿತ್ತು’ ಎಂದಿದ್ದಾರೆ ಮಂಡ್ಯ ರಮೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ