ಮಂಜು ಪಾವಗಡ ಅವರು ಇದ್ದಲ್ಲಿ ನಗು ಇರುತ್ತದೆ. ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಎಂತ ಗಂಭೀರ ಪರಿಸ್ಥಿತಿ ಇದ್ದರೂ ಅದನ್ನು ತಿಳಿಯಾಗಿಸುವ ಕಲೆ ಮಂಜುಗೆ ಗೊತ್ತು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರಿಗೂ ಇಷ್ಟವಾಗಿದ್ದರು. ಬಿಗ್ ಬಾಸ್ನಲ್ಲಿ ಅವರು ಮಾಡುತ್ತಿದ್ದ ಕಾಮಿಡಿಗೆ ಸಾಕಷ್ಟು ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಅವರೇ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಹಾಗೆಯೇ ಆಗಿತ್ತು. ಮಂಜು ಮತ್ತು ಅರವಿಂದ ಕೆ.ಪಿ. ನಡುವೆ ನಡೆದ ಹಣಾಹಣಿಯಲ್ಲಿ ಮಂಜು ಗೆದ್ದರು. ಈಗ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬರುತ್ತಿವೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಕಳೆದ ವರ್ಷದ ಕ್ರಿಸ್ಮಸ್ ನಿಮಿತ್ತ ತೆರೆಕಂಡ ‘ರೈಡರ್’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದ ಪ್ರಮೋಷನ್ಗಾಗಿ ತಂಡ ಸ್ಟಾರ್ ಸುವರ್ಣ ವಾಹಿನಿಯ ‘ಗಾನ ಬಜಾನ 2’ಗೆ ಬಂದಿತ್ತು. ಈ ವಿಶೇಷ ಕಾರ್ಯಕ್ರಮವನ್ನು ಸ್ಟಾರ್ ಸುವರ್ಣ ಈಗ ಪ್ರಸಾರ ಮಾಡಿದೆ. ಇದರ ಪ್ರೋಮೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಮಂಜು ಪಾವಗಡ ‘ರೈಡರ್’ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಕುಮಾರ್ ಅವರು ಕೂಡ ಸುವರ್ಣ ವೇದಿಕೆ ಮೇಲೆ ಇದ್ದರು. ಅವರು ಮಂಜು ಬಗ್ಗೆ ಜೋಕ್ ಮಾಡಿದ್ದಾರೆ. ‘ಮಂಜು ಅವರು ನಮ್ಮ ಸಿನಿಮಾದಲ್ಲಿ ಸೆಕೆಂಡ್ ಹೀರೋ’ ಎಂದರು ನಿಖಿಲ್. ಈ ವಿಚಾರ ಕೇಳಿ ಎಲ್ಲರೂ ಅಚ್ಚರಿಪಟ್ಟರು. ಆ ಬಳಿಕ ಮಾತನಾಡಿದ ನಿಖಿಲ್, ‘ನಮ್ಮ ಸಿನಿಮಾದಲ್ಲಿ ಮಂಜು ಒಂದು ಸೆಕೆಂಡ್ ಬಂದು ಹೋಗುತ್ತಾರೆ. ಈ ಕಾರಣಕ್ಕೆ ಅವರು ನಮ್ಮ ಚಿತ್ರದ ಸೆಕೆಂಡ್ ಹೀರೋ’ ಎಂದು ನಕ್ಕರು.
ಆ ಬಳಿಕ ಮಂಜುಗೆ ಟಾಸ್ಕ್ ಒಂದನ್ನು ನೀಡಲಾಯಿತು. ಈ ಟಾಸ್ಕ್ ಮಾಡೋಕೆ ಹೋಗಿ ಅವರು ಪೇಚಿಗೆ ಸಿಲುಕಿದ್ದಾರೆ. ಈ ಪ್ರೋಮೋ ಕೂಡ ಸಖತ್ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ಅನುಷಾ ರೈ ಅವರು ಒಂದು ಪಾತ್ರ ಮಾಡಿದ್ದಾರೆ. ಅವರು ಕೂಡ ಪ್ರಮೋಷನ್ಗೆ ಬಂದಿದ್ದರು. ಈ ವೇಳೆ ಅನುಷಾಗೆ ಹಣ್ಣು ತಿನ್ನಿಸುವ ಟಾಸ್ಕ್ಅನ್ನು ಮಂಜುಗೆ ನೀಡಲಾಯಿತು.
ಡಂಬೆಲ್ಗೆ ಒಂದು ಪೋರ್ಕ್ ಸಿಕ್ಕಿಸಲಾಗಿತ್ತು. ಈ ಡಂಬೆಲ್ಅನ್ನು ಎಡಗೈನಲ್ಲಿ ಎತ್ತಿ ಅದರಲ್ಲಿ ಹಣ್ಣನ್ನು ಸಿಕ್ಕಿಸಿಕೊಂಡು ಅನುಷಾಗೆ ತಿನ್ನಿಸಬೇಕು. ಇದನ್ನು ಮಾಡೋಕೆ ಅವರು ತುಂಬಾನೇ ಕಷ್ಟಪಟ್ಟರು. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ವಿಚಿತ್ರ ಹೆಸರಲ್ಲಿ ಅವಾರ್ಡ್ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್ ಬಾಸ್ ವಿನ್ನರ್ಗೆ ಏನಾಯ್ತು?