‘ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿ ಒಂದು ವಾರ ಕಳೆದಿದೆ. ಅತ್ತ ಹಿಂದಿಯಲ್ಲೂ ಬಿಗ್ ಬಾಸ್ ಪ್ರಾರಂಭ ಆಗುತ್ತಿದೆ. ‘ಬಿಗ್ ಬಾಸ್ ಹಿಂದಿ ಸೀಸನ್ 17’ಕ್ಕೆ ಅಕ್ಟೋಬರ್ 15ರಂದು ಚಾಲನೆ ಸಿಗಲಿದೆ. ಸಲ್ಮಾನ್ ಖಾನ್ ಅವರು ಈ ಶೋನ ನಡೆಸಿಕೊಡಲಿದ್ದಾರೆ. ವಿಶೇಷ ಎಂದರೆ, ಈ ಬಾರಿ ಹಿಂದಿ ಬಿಗ್ ಬಾಸ್ನಲ್ಲಿ (Bigg Boss) ಮೊಬೈಲ್ ಬಳಕೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ವೀಕ್ಷಕರ ವಲಯದಲ್ಲಿ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ಗೆ ಅದರದ್ದೇ ಆದ ನಿಯಮಗಳು ಇವೆ. ಆದರೆ, ಸಮಯಕ್ಕೆ ತಕ್ಕಂತೆ ಈ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಾ ಬರಲಾಗುತ್ತಿದೆ. ‘ಬಿಗ್ ಬಸ್’ ಮನೆ ಒಳಗೆ ಹೋದರೆ ಹೊರಗಿನ ಜಗತ್ತಿನ ಜೊತೆ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಳ್ಳಬೇಕು. ಮೊಬೈಲ್ ಬಳಕೆಯಂತೂ ಇಲ್ಲಿ ನಿಷಿದ್ಧ. ಆದರೆ, ಹಿಂದಿ ಬಿಗ್ ಬಾಸ್ನವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸ್ಪರ್ಧಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಮೊಬೈಲ್ ಇಲ್ಲದ ಬಿಗ್ ಬಾಸ್ ಹೇಗಿರುತ್ತದೆ ಎಂದು ಊಹಿಸಿಕೊಳ್ಳೋದು ಅನೇಕರ ಬಳಿ ಸಾಧ್ಯವಿಲ್ಲ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಪರಿಚಯಿಸಿದರೆ ಹೇಗೆ ಎನ್ನುವ ಆಲೋಚನೆ ವಾಹಿನಿಯವರಿಗೆ ಮೂಡಿದೆ. ಮನೆಯಲ್ಲಿರುವ ಸ್ಪರ್ಧಿಗಳು ಒಂದಷ್ಟು ಸಮಯ ಮಾತ್ರ ಮೊಬೈಲ್ ಬಳಕೆ ಮಾಡಬಹುದು ಎನ್ನುವ ಷರತ್ತನ್ನು ಹಾಕಲು ನಿರ್ಧರಿಸಲಾಗಿದೆ. ಒಂದೊಮ್ಮೆ ಹಿಂದಿಯಲ್ಲಿ ಇದು ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಕನ್ನಡ, ತೆಲುಗು ಭಾಷೆಯ ಬಿಗ್ ಬಾಸ್ನಲ್ಲೂ ಮೊಬೈಲ್ ಬಳಕೆಗೆ ಅವಕಾಶ ನೀಡಬಹುದು.
ಇದನ್ನೂ ಓದಿ: ಬಿಗ್ ಬಾಸ್ ಟಾಪ್ ಐದಕ್ಕೆ ಬರೋ ಸ್ಪರ್ಧಿಗಳು ಇವರೇ ನೋಡಿ..
ಸದ್ಯ ಮೊಬೈಲ್ ಬಳಕೆಗೆ ಅವಕಾಶ ನೀಡುವ ನಿರ್ಧಾರವನ್ನು ಅನೇಕರು ವಿರೋಧಿಸಿದ್ದಾರೆ. ಬಿಗ್ ಬಾಸ್ ಮನೆಗೆ ಮೊಬೈಲ್ ಪರಿಚಯಗೊಂಡರೆ ಆಟದ ನಿಜವಾದ ಮಜಾ ಹೋಗಿ ಬಿಡುತ್ತದೆ. ಎಲ್ಲರೂ ಮೊಬೈಲ್ನಲ್ಲೇ ಮುಳುಗಿರುತ್ತಾರೆ ಎನ್ನುವ ಅಭಿಪ್ರಾಯವನ್ನು ಅನೇಕರು ಹೊರಹಾಕಿದ್ದಾರೆ. ಈ ಹೊಸ ನಿಯಮದ ಬಗ್ಗೆ ಅಕ್ಟೋಬರ್ 15ರಂದು ಮಾಹಿತಿ ಸಿಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ