ಒಂದರ ಹಿಂದೊಂದು ಸಮಸ್ಯೆಗೆ ಸಿಲುಕಿದ ಪ್ರತಾಪ್: ರೆಕ್ಕೆ ಕತ್ತರಿಸುವ ಬೆದರಿಕೆ ಹಾಕಿದ ವಿನಯ್
Bigg Boss 10: ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಈಸಿ ಟಾರ್ಗೆಟ್ ಆದಂತಾಗಿದ್ದಾರೆ. ಒಂದರ ಹಿಂದೊಂದು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಮೂದಲಿಗೆ, ಬೈಗುಳ, ಟೀಕೆಗಳನ್ನು ಕೇಳುತ್ತಿದ್ದಾರೆ. ವಿನಯ್ ಅಂತೂ, ಡ್ರೋನ್ನ ರೆಕ್ಕೆ ಕತ್ತರಿಸುತ್ತೀನಿ ಎಂದು ಬೆದರಿಕೆ ಸಹ ಹಾಕಿದ್ದಾರೆ. ಪ್ರತಾಪ್ ಬೆನ್ನಿಗೆ ನಿಲ್ಲುತ್ತಾರಾ ಸುದೀಪ್!
ಬಿಗ್ಬಾಸ್ (Bigg Boss) ಕನ್ನಡ ಸೀಸನ್ 10 ಪ್ರಾರಂಭವಾಗಿ ವಾರವಾಗುತ್ತಾ ಬಂದಿದ್ದು, ಕೆಲವು ಸ್ಪರ್ಧಿಗಳು ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲಿ ಡ್ರೋನ್ ಪ್ರತಾಪ್ ಸಹ ಒಬ್ಬರು. ಆದರೆ ಯಾಕೋ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಪದೇ ಪದೇ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಅಂತೂ ಒಳ್ಳೆ ಕೆಲಸ ಮಾಡಿದಾಗಲೂ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.
ಎಲ್ಲರೂ ಮಲಗಿದ ಮೇಲೆ ಭಾಗ್ಯಶ್ರೀ ಅವರಿಗೆ ರೊಟ್ಟಿ ಸುಟ್ಟು ಕೊಟ್ಟಿದ್ದು ಸಮಸ್ಯೆ ಆಗಿಬಿಟ್ಟಿದೆ. ಭಾಗ್ಯಶ್ರೀ ಅವರು ತಮಗೆ ಹೊಟ್ಟೆ ಹಸಿಯುತ್ತಿದೆ ಎಂದು ಹೇಳಿದ ಕಾರಣಕ್ಕೆ ಡ್ರೋನ್ ಪ್ರತಾಪ್ ಚಪಾತಿ ಹಾಕಿಕೊಟ್ಟರು. ಭಾಗ್ಯಶ್ರೀ ಸಹ ತಿಂದರು. ಆದರೆ ಬೆಳಿಗ್ಗೆ ವೇಳೆಗೆ ಅದು ಬೇರೆಯದ್ದೇ ರೂಪ ಪಡೆದುಕೊಂಡಿತು. ಎಲ್ಲರೂ ಮಲಗಿದ ಮೇಲೆ ಡ್ರೋನ್ ಪ್ರತಾಪ್ ಅಡುಗೆ ಮಾಡಿ ಕೊಟ್ಟ ಎಂಬುದು ಮನೆಯ ಸದಸ್ಯರ ಮಧ್ಯೆ ಚರ್ಚೆಗೆ ಕಾರಣವಾಯ್ತು. ಇನ್ನು ಭಾಗ್ಯಶ್ರೀ ಅವರು ಅಡುಗೆ ಮಾಡಿಕೊಡು ಎಂದು ನಾನು ಕೇಳಲಿಲ್ಲ, ಹೊಟ್ಟೆ ಹಸಿದಿದೆ ಎಂದೆ ಅಷ್ಟೆ, ಪ್ರತಾಪನೇ ರೊಟ್ಟಿ ಸುಟ್ಟು ಕೊಟ್ಟ ಎಂದರು.
ಅದಾದ ಬಳಿಕ ನಟ ವಿನಯ್ಗೂ ಪ್ರತಾಪ್ ನಡುವೆ ತುಸು ಗಂಭೀರ ಜಗಳವೇ ನಡೆಯಿತು. ಬೇಗ ಸ್ನಾನ ಮುಗಿಸಿ, ನಾನೂ ಸ್ನಾನ ಮಾಡಿಕೊಂಡು ಅಡುಗೆ ಮಾಡಬೇಕು ಎಂದು ಡ್ರೋನ್, ವಿನಯ್ ಬಳಿ ಹೇಳಿದರಂತೆ, ಅದಕ್ಕೆ ವಿನಯ್, ‘ನೀವು ಎಷ್ಟು ಚೆನ್ನಾಗಿ ಅಡುಗೆ ಮಾಡುತ್ತೀರೆಂದು ನನಗೆ ಗೊತ್ತು’ ಎಂದರಂತೆ. ಇದನ್ನು ಡ್ರೋನ್ ತನ್ನ ತಂಡದ ಸದಸ್ಯರ ಬಳಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಸಂಗೀತ ಹಾಗೂ ಕಾರ್ತಿಕ್ ಈ ವಿಷಯವನ್ನು ಮನೆಯ ಸದಸ್ಯರ ಮುಂದೆ ಇರಿಸಿದರು.
ಇದನ್ನೂ ಓದಿ: BBK 10: ಡ್ರೋನ್ ಪ್ರತಾಪ್ ಬಗ್ಗೆ ಹೀಯಾಳಿಸುವುದು ಬಿಟ್ಟಿಲ್ಲ ತುಕಾಲಿ ಸಂತು
ಆದರೆ ವಿನಯ್ ತಾನು ಹಾಗೆ ಹೇಳಲೇ ಇಲ್ಲ, ನಾನು ಬೇರೆಯವರ ಬಗ್ಗೆ ಆಗಲಿ, ಸ್ವಚ್ಛತೆ ಬಗ್ಗೆ ಮಾತನಾಡಲಿಲ್ಲ ಎಂದರು. ಮಾತ್ರವಲ್ಲ, ಡ್ರೋನ್ರ ರೆಕ್ಕೆ-ಪುಕ್ಕ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕುವ ದನಿಯಲ್ಲಿಯೂ ಮಾತನಾಡಿದರು. ಡ್ರೋನ್ ಪ್ರತಾಪ್ ಎದುರು ಸಹ ತುಸು ರೌಡಿ ಭಾಷೆಯಲ್ಲಿಯೇ ವಿನಯ್ ಮಾತನಾಡಿದರು. ಕೊನೆಗೆ ಡ್ರೋನ್ ಪ್ರತಾಪ್, ಶನಿವಾರ ಸುದೀಪ್ ಸರ್, ಬರ್ತಾರಲ್ಲ, ಅವರು ಅಂದೇ ನಿರ್ಣಯ ಮಾಡಲಿ, ವಿನಯ್ ಏನು ಹೇಳಿದ್ದರು, ನಾನು ಹೇಳಿದ್ದು ನಿಜವೋ ಇಲ್ಲವೋ ಎಂದರು.
ಆದರೆ ವಿನಯ್ ಹಾಗೂ ಡ್ರೋನ್ ಪ್ರತಾಪ್ ವಿಷಯದಲ್ಲಿ ಮನೆಯ ಸದಸ್ಯರು ಭಿನ್ನ ಭಿನ್ನ ಚರ್ಚೆಗಳನ್ನು ತಮ್ಮಲ್ಲಿ ತಾವೇ ಮಾಡಿಕೊಂಡು, ತುಕಾಲಿ ಸಂತೋಶ್, ಹಳ್ಳಿಕಾರ್ ಸಂತೋಶ್ ಇನ್ನೂ ಕೆಲವರು ಡ್ರೋನ್ ಪ್ರತಾಪ್ ಅವರದ್ದೇ ತಪ್ಪೆಂದು, ಡ್ರೋನ್ ಒಬ್ಬ ಮಹಾನ್ ಸುಳ್ಳು ಕೋರ ವಂಚಕ ಎಂದು ಮಾತನಾಡಿದರು. ಆ ನಂತರ ಕ್ಯಾಪ್ಟನ್ ಸ್ನೇಹಿತ್ ಡ್ರೋನ್ ಪ್ರತಾಪ್ ಅಡುಗೆ ಮಾಡುವುದು ಬೇಡವೆಂದು, ಬದಲಿಗೆ ಸಂಗೀತ ಹಾಗೂ ತನಿಷಾ ಇಬ್ಬರೇ ಅಡುಗೆ ಮಾಡಬೇಕು ಎಂದು ಆದೇಶ ಹೊರಡಿಸಿದರು. ಒಟ್ಟಾರೆ ಪ್ರತಾಪ್ ಬಿಗ್ಬಾಸ್ ಮನೆಯಲ್ಲಿ ಹಲವರಿಗೆ ಈಸಿ ಟಾರ್ಗೆಟ್ ಆಗಿಬಿಟ್ಟಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 10 ಜಿಯೋ ಸಿನಿಮಾಸ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 pm, Fri, 13 October 23