
ನಮ್ರತಾ ಗೌಡ (Namrata Gowda) ಅವರು ‘ನಾಗಿಣಿ 2’ ಧಾರಾವಾಹಿ ಮೂಲಕ ಮನೆ ಮಾತಾದವರು. ಆ ಬಳಿಕ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡಿ ಕೊನೆಯವರೆಗೂ ಹೋರಾಡಿದರು. ಈಗ ಅವರು ಮತ್ತೆ ಜೀ ಕನ್ನಡಕ್ಕೆ ಮರಳಿದ್ದಾರೆ. ‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ಬಗ್ಗೆ ಕೆಲವರು ಏಕಾಏಕಿ ದ್ವೇಷ ಸಾಧಿಸೋಕೆ ಆರಂಭಿಸಿದ್ದಾರೆ ಮತ್ತು ಇದನ್ನು ನೋಡಿ ಅವರಿಗೆ ಬೇಸರ ಆಗಿದೆ. ಅಷ್ಟಕ್ಕೂ ನಮ್ರತಾ ಗೌಡ ಮೇಲೆ ಕೆಲವರಿಗೆ ದ್ವೇಷ ಏಕೆ? ಇದಕ್ಕೆ ನಮ್ರತಾ ಉತ್ತರ ಏನು ಎಂಬ ಬಗ್ಗೆ ತಿಳಿದುಕೊಳ್ಳೋಣ.
ಅಸಲಿಗೆ ನಮ್ರತಾ ಗೌಡ ಅವರ ಮೇಲೆ ದ್ವೇಷ ಬೆಳೆಯಲು ಕಾರಣವಾಗಿದ್ದು ಅವರು ನಟಿಸುತ್ತಿರುವ ‘ಕರ್ಣ’ ಧಾರಾವಾಹಿ ಎಂದೇ ಹೇಳಬಹುದು. ಅವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಗೆ ಸೂರಜ್ ಜೊತೆ ಮದುವೆ ಕೂಡ ನಿಶ್ಚಯವಾಗಿದೆ. ಮತ್ತೊಂದೆಡೆ ಅವಳ ಸಹೋದರಿ ನಿಧಿ (ಭವ್ಯಾ ಗೌಡ) ಹಾಗೂ ಕರ್ಣ ಮಧ್ಯೆ ಪ್ರೀತಿ ಮೂಡಿದೆ. ಇಷ್ಟೇ ಆಗಿದ್ದರೆ ದ್ವೇಷ ಉಕ್ಕುತಿರಲಿಲ್ಲವೇನೋ.
ಈಗ ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಟ್ಟಿದೆ. ಇದರಲ್ಲಿ ಕರ್ಣ ಹಾಗೂ ನಿತ್ಯಾ ಮದುವೆ ನೆರವೇರುವಂತೆ ತೋರಿಸಿದ್ದಾರೆ. ಇದು ಭವ್ಯಾ ಗೌಡ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಕಾರಣದಿಂದಲೇ ನಿತ್ಯಾ ಪಾತ್ರಕ್ಕೆ ಎಲ್ಲರೂ ಬಯ್ಯುತ್ತಿದ್ದಾರೆ. ಈ ಬಗ್ಗೆ ನಮ್ರತಾ ಗೌಡ ಅವರು ಬರೆದುಕೊಂಡಿದ್ದಾರೆ.
‘ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು. ಕೊಂಚ ಬ್ರೇಕ್ನ ನಂತರ ಕೇಳಿದ ಪಾತ್ರವೇ ನಿತ್ಯ. ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದವಳು. ಬಲಿಷ್ಠಳು, ಸ್ವತಂತ್ರಳು, ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವವಳು. ಇಷ್ಟೆಲ್ಲಾ ಹಂತಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮಾನಸಾಗಲಿಲ್ಲ’ ಎಂದು ಪಾತ್ರ ಒಪ್ಪಿಕೊಂಡಿದ್ದರ ಹಿಂದಿನ ವಿಚಾರ ರಿವೀಲ್ ಮಾಡಿದರು.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ
‘ಇತ್ತೀಚೆಗಿನ ಪ್ರೋಮೋ ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಯಿತು. ತೊಂದರೆ ಇಲ್ಲ. ನಿತ್ಯ ನಾನು ಪೋಷಿಸಿದ ಪಾತ್ರ. ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ’ ಎಂದಿದ್ದಾರೆ ಅವರು. ಈ ಪೋಸ್ಟ್ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.