ನಟ, ನಿರೂಪಕ ಮಾಸ್ಟರ್ ಆನಂದ್ (Master Anand) ಮಗಳು ವಂಶಿಕಾ (Vanshika) ಕಶ್ಯಪ್ ರಾಜ್ಯಾದ್ಯಂತ ಫುಲ್ ಫೇಮಸ್. ಸಖತ್ ಚೂಟಿಯಾಗಿ ಮಾತನಾಡುವ ಅವಳನ್ನು ಕಂಡರೆ ಎಲ್ಲರಿಗೂ ಸಖತ್ ಇಷ್ಟ. ಅವಳ ಮಾತನ್ನು ಇಷ್ಟಪಡದವರೇ ಇಲ್ಲ. ಅವಳು ನಿರೂಪಣೆಗೆ ಇಳಿದರಂತೂ ಮುಗಿಯಿತು, ವೀಕ್ಷಕರು ನಗುವಿನ ಅಲೆಯಲ್ಲಿ ತೆಲೋದು ಗ್ಯಾರಂಟಿ. ಈಗ ‘ಅನುಬಂಧ’ ಕಾರ್ಯಕ್ರಮದಲ್ಲಿ ವಂಶಿಕಾ ಅವಾರ್ಡ್ ಗೆದ್ದಿದ್ದಾಳೆ. ಈ ಖುಷಿಯ ಕ್ಷಣದ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷ ‘ಅನುಬಂಧ’ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡುತ್ತದೆ. ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ನಟಿಸುವ ಕಲಾವಿದರಿಗೆ ಇದೊಂದು ರೀತಿಯಲ್ಲಿ ಕುಟುಂಬದ ಕಾರ್ಯಕ್ರಮ ಇದ್ದಂತೆ. ಈ ಮೊದಲೇ ಅವಾರ್ಡ್ ಫಂಕ್ಷನ್ ನಡೆದಿತ್ತು. ಈ ಕಾರ್ಯಕ್ರಮ ಅಕ್ಟೋಬರ್ 7, 8 ಹಾಗೂ 9ರಂದು ಪ್ರಸಾರ ಕಂಡಿದೆ. ಈ ಫಂಕ್ಷನ್ನಲ್ಲಿ ವಂಶಿಕಾ ಅವಾರ್ಡ್ ಗೆದ್ದಿದ್ದಾಳೆ.
ವಂಶಿಕಾಗೆ ‘ಜನ ಮೆಚ್ಚಿದ ಹೊಸ ಪರಿಚಯ’ (NON-FICTION) (ನನ್ನಮ್ಮ ಸೂಪರ್ ಸ್ಟಾರ್) ಅವಾರ್ಡ್ ಸಿಕ್ಕಿದೆ. ನಟಿ ಆಶಿಕಾ ರಂಗನಾಥ್ ಅವರು ಈ ಅವಾರ್ಡ್ ಅನ್ನು ವಂಶಿಕಾಗೆ ನೀಡಿದ್ದಾರೆ. ವಂಶಿಕಾ ಇನ್ನೂ ಚಿಕ್ಕವಳು. ಇಷ್ಟು ಸಣ್ಣ ವಯಸ್ಸಿಗೆ ಅವರು ದೊಡ್ಡ ಮಟ್ಟದ ಜನಪ್ರಿಯೆ ಪಡೆದಿದ್ದಾಳೆ.
‘ನನ್ನಮ್ಮ ಸೂಪರ್ ಸ್ಟಾರ್ 2’ಗೆ ವಂಶಿಕಾ ನಿರೂಪಕಿ
‘ಕಲರ್ಸ್ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಆಕೆಗೆ ಭರಪೂರ ಜನಪ್ರಿಯತೆ ಸಿಕ್ಕಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲೂ ವಂಶಿಕಾ ಧೂಳೆಬ್ಬಿಸಿದಳು. ಈ ಎರಡೂ ಶೋಗಳನ್ನು ವಿನ್ ಆಗಿರುವ ಆಕೆಗೆ ಈಗ ನಿರೂಪಕಿಯಾಗಿ ಬಡ್ತಿ ಸಿಗುತ್ತಿದೆ! ಹೌದು, ‘ನನ್ನಮ್ಮ ಸೂಪರ್ ಸ್ಟಾರ್ 2’ ನಿರೂಪಣೆ ಮಾಡಲು ವಂಶಿಕಾ ಸಜ್ಜಾಗುತ್ತಿದ್ದಾಳೆ. ಶೀಘ್ರದಲ್ಲೇ ಈ ಶೋ ಆರಂಭ ಆಗಲಿದೆ. ವಂಶಿಕಾಗೆ ನಿರಂಜನ್ ದೇಶಪಾಂಡೆ ಸಾಥ್ ನೀಡಲಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್’ ಮೊದಲ ಸೀಸನ್ ಅನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಆದರೆ ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿಯಾಗಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ನೀಡಿರುವುದರಿಂದ ‘ನನ್ನಮ್ಮ ಸೂಪರ್ ಸ್ಟಾರ್ 2’ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನಕ್ಕೆ ವಂಶಿಕಾ ಮತ್ತು ನಿರಂಜನ್ ದೇಶಪಾಂಡೆ ಬಂದಿದ್ದಾರೆ.