ಕನ್ನಡ ಕಿರುತೆರೆ ನಟನಿಂದ ಪತ್ನಿಮೇಲೆ ಹಲ್ಲೆ; ಮದುವೆ ಆದ ಬಳಿಕ ಮತ್ತೊಬ್ಬರ ಜೊತೆ ನಿಶ್ಚಿತಾರ್ಥ?
ಕನ್ನಡ ಕಿರುತೆರೆ ನಟ ಸನ್ನಿ ಮಹಿಪಾಲ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಅವರು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಹಿಪಾಲ್ ಯುವತಿ ಒಬ್ಬರನ್ನು ಮದುವೆ ಆಗಿದ್ದರು. ಈಗ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ಪತ್ನಿ ಮೇಲೆ ಹಲ್ಲೆ ನಡೆದಿದೆ.
ಧಾರಾವಾಹಿ ಹಾಗೂ ಸಿನಿಮಾ ಕಲಾವಿದರ ಬದುಕಿನ ಬಗ್ಗೆ ಚರ್ಚೆಗಳು ದಿನ ನಿತ್ಯ ಆಗುತ್ತಲೇ ಇರುತ್ತವೆ. ಅವರು ತಪ್ಪು ಮಾಡಿದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ. ‘ನೇತ್ರಾವತಿ’ ಹೆಸರಿನ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ ಒಂದು ಮದುವೆ ಆಗಿ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಪತ್ನಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಕೆಲ ವರ್ಷ ಪ್ರಸಾರ ಕಂಡಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ಸನ್ನಿ ಮಹಿಪಾಲ್ ನಟಿಸಿದ್ದರು. ಧಾರಾವಾಹಿ ಪೂರ್ಣಗೊಂಡಿದ್ದು, ಈಗ ಅವರು ಖಾಸಗಿ ಕಂಪನಿಯಲ್ಲಿ ಸನ್ನಿ ಮಹಿಪಾಲ್ ಕೆಲಸ ಮಾಡುತ್ತಿದ್ದಾರೆ. 2024 ಜನವರಿಯಲ್ಲಿ ಯುವತಿಗೆ ಮಹಿಪಾಲ್ ಪರಿಚಯ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಅವರನ್ನು ಸನ್ನಿ ಪ್ರೀತಿ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಮದುವೆಯಾಗೋದಾಗಿ ನಂಬಿಸಿದ್ದರು. ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ವಿವಾಹ ಆದರು. ಸದ್ಯ ಮಹಿಳೆ ಎರಡು ತಿಂಗಳ ಗರ್ಭಿಣಿ.
ಮದುವೆಯಾದ ಬಳಿಕ ಇಬ್ಬರೂ ಒಟ್ಟಿಗೆ ಇಲ್ಲ. ಪೋಷಕರನ್ನ ಒಪ್ಪಿಸಿ ಬರುವೆ ಎಂದು ಸನ್ನಿ ಮಹಿಪಾಲ್ ತೆರಳಿದ್ದರು. ಅಷ್ಟೇ ಅಲ್ಲ, ಕೇವಲ ಸ್ನೇಹಿತೆಯ ರೀತಿ ಇರಬೇಕು ಎಂದು ಪತ್ನಿಗೆ ಮಹಿಪಾಲ್ ಷರತ್ತು ಹಾಕಿದ್ದರು. ಅದರಂತೆಯೇ ಆ ಯುವತಿ ನಡೆದುಕೊಂಡಿದ್ದಾರೆ. ಶಾಕಿಂಗ್ ಎಂದರೆ ಕೆಲವೇ ದಿನಗಳ ಹಿಂದೆ ಮಹಿಪಾಲ್ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಲು ಅವರ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ‘ಸೀತಾ ರಾಮ’ ಸೀರಿಯಲ್ಗೆ ಒಳ್ಳೆಯ ಟಿಆರ್ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ
ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ. ಗಲಾಟೆ ಆದ ಮೇಲೆ 112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಭೇಟಿ ಕೊಟ್ಟಿದ್ದರು. ಗರ್ಭಪಾತದಿಂದಾಗಿ ಮಹಿಳೆಗೆ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಅವರು ಮನವಿ ಮಾಡಿದ್ದರು. ಆದರೆ, ನಮ್ಮ ಬಳಿ ಮಹಿಳಾ ಸಿಬ್ಬಂದಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸ್ವತಃ ತಾವೆ ಕಾರು ಚಲಾಯಿಸಿಕೊಂಡು ಬಂದು ಅವರು ಆಸ್ಪತ್ರೆ ಸೇರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:18 am, Tue, 23 July 24