ಗುರುಪ್ರಸಾದ್ ರೀತಿಯೇ ಹೋಟೆಲ್​ ರೂಮ್​ನಲ್ಲಿ ಖ್ಯಾತ ನಟನ ಶವ ಪತ್ತೆ

|

Updated on: Dec 29, 2024 | 9:19 PM

ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಸುದ್ದಿ ಮರೆಯಾಗುವುದಕ್ಕೂ ಮುನ್ನವೇ ಮತ್ತೊಂದು ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ನಟ ದಿಲೀಪ್ ಶಂಕರ್​ ಮೃತ ದೇಹ ಹೋಟೆಲ್​ ರೂಮ್​ನಲ್ಲಿ ಪತ್ತೆ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ದಿಲೀಪ್ ಶಂಕರ್​ ಅವರು ಫೇಮಸ್​ ಆಗಿದ್ದರು. ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತ ಆಗಿದೆ.

ಗುರುಪ್ರಸಾದ್ ರೀತಿಯೇ ಹೋಟೆಲ್​ ರೂಮ್​ನಲ್ಲಿ ಖ್ಯಾತ ನಟನ ಶವ ಪತ್ತೆ
Dileep Shankar
Follow us on

ಹಲವು ವರ್ಷಗಳಿಂದ ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ ದಿಲೀಪ್ ಶಂಕರ್​ ಅವರು ನಿಧನರಾಗಿದ್ದಾರೆ. ಶೂಟಿಂಗ್ ಸಲುವಾಗಿ ಅವರು ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್​ ರೂಮ್​​ನಲ್ಲಿ ಅವರ ಶವ ಪತ್ತೆ ಆಗಿದೆ. ಎರಡು ದಿನದ ಹಿಂದೆಯೇ ದಿಲೀಪ್ ಶಂಕರ್​ ನಿಧನರಾಗಿರಬಹುದು ಎಂಬ ಶಂಕೆ ಇದೆ. ಅವರು ಉಳಿದುಕೊಂಡಿದ್ದ ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿತ್ತು. ಅನುಮಾನ ಬಂದು ಬಾಗಿಲು ತೆಗೆದು ನೋಡಿದಾಗ ಅವರ ಮೃತ ದೇಹ ಕಾಣಿಸಿದೆ. ಬಳಿಕ ಹೋಟೆಲ್​ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ಮಲಯಾಳಂನ ‘ಪಂಚಾಗ್ನಿ’ ಧಾರಾವಾಹಿಯಲ್ಲಿ ದಿಲೀಪ್ ಶಂಕರ್​ ಅವರು ನಟಿಸುತ್ತಿದ್ದರು. ಶೂಟಿಂಗ್ ಸಲುವಾಗಿ ಅವರು ನಾಲ್ಕು ದಿನದ ಹಿಂದೆ ಹೋಟೆಲ್​ಗೆ ಬಂದಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರು ರೂಮ್​ನಿಂದ ಹೊರಗೆ ಬಂದಿರಲಿಲ್ಲ. ಹಾಗಾಗಿ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿತು.

ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಬಂದು ಹೋಟೆಲ್​ ರೂಮ್​ನ ತಪಾಸಣೆ ಮಾಡಿದ್ದಾರೆ. ಕೊಲೆ ಶಂಕೆ ವ್ಯಕ್ತವಾಗಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ದಿಲೀಪ್ ಶಂಕರ್​ ಅವರಿಗೆ ಅನಾರೋಗ್ಯ ಇತ್ತು ಎನ್ನಲಾಗಿದೆ. ಆದರೆ ಆ ಬಗ್ಗೆ ಯಾರಿಗೂ ನಿಖರ ಮಾಹಿತಿ ಇರಲಿಲ್ಲ. ‘ಪಂಚಾಗ್ನಿ’ ಚಿತ್ರೀಕರಣಕ್ಕೆ ಎರಡು ದಿನ ಬ್ರೇಕ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸೀರಿಯಲ್ ತಂಡದ ಯಾರ ಕರೆಗಳನ್ನೂ ದಿಲೀಪ್​ ಶಂಕರ್​ ಅವರು ಸ್ವೀಕರಿಸಿರಲಿಲ್ಲ.

ಇದನ್ನೂ ಓದಿ: ರಮ್ಮಿ, ಸಾಲ, ಖಿನ್ನತೆ, ಕಾಯಿಲೆ ಬಗ್ಗೆ ನಿರ್ದೇಶಕ ಗುರುಪ್ರಸಾದ್​ ಪತ್ನಿ ಸುಮಿತ್ರಾ ಸ್ಪಷ್ಟನೆ

ದಿಲೀಪ್ ಶಂಕರ್​ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಕಂಬನಿ ಮಿಡಿದ್ದಾರೆ. ಅನೇಕ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ದಿಲೀಪ್ ಶಂಕರ್​ ಅವರು ಮನೆಮಾತಾಗಿದ್ದರು. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾ ನಿರ್ದೇಶಕ ಗುರು ಪ್ರಸಾದ್​ ಕೂಡ ಶವವಾಗಿ ಪತ್ತೆ ಆಗಿದ್ದು ನೋವಿನ ಸಂಗತಿ. ಆ ಘಟನೆ ಮಾಸುವ ಮುನ್ನವೇ ದಿಲೀಪ್ ಶಂಕರ್​ ಅವರ ಸಾವಿನ ಸುದ್ದಿಯಿಂದ ಚಿತ್ರರಂಗಕ್ಕೆ ಶಾಕ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.